ಚಾಮರಾಜನಗರ: ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಬುಧವಾರ ನಗರದಲ್ಲಿ ಟಿಪ್ಪು ಸುಲ್ತಾನ್ ಜಯಂತಿ ಆಚರಿಸಲಾಯಿತು.
ಪಕ್ಷದ ಕಚೇರಿಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಶಾಸಕ ಸಿ.ಪುಟ್ಟರಂಗಶೆಟ್ಟಿ ಟಿಪ್ಪು ಸುಲ್ತಾನ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.
ನಂತರ ಮಾತನಾಡಿದ ಅವರು, ‘ಬ್ರಿಟಿಷರ ವಿರುದ್ಧ ಹೋರಾಡಿದ ಮೊದಲ ಸ್ವಾತಂತ್ರ್ಯ ವೀರ, ಮೈಸೂರು ಹುಲಿ ಟಿಪ್ಪು ಸುಲ್ತಾನ್. ಬ್ರಿಟಿಷರಿಗೆ ಸಿಂಹ ಸ್ವಪ್ನವಾಗಿದ್ದರು. ಟಿಪ್ಪು ಆಡಳಿತವನ್ನುಜಗತ್ತೇ ಮೆಚ್ಚಿತ್ತು. ತನ್ನ ರಾಜ್ಯದ ಸುಭಿಕ್ಷೆಗಾಗಿ ದುಡಿದ ಮಹಾನ್ ಆಡಳಿತಗಾರ. ರೇಷ್ಮೆ ಕೃಷಿಗೆ ಉತ್ತೇಜನ ನೀಡಿದ್ದರು. ಬ್ರಿಟಿಷರ ಕಾಯ್ದೆಗಳ ವಿರುದ್ಧ ಧ್ವನಿ ಎತ್ತಿ, ಪದೇ ಪದೇ ಅವರ ಮೇಲೆ ಯುದ್ಧ ಮಾಡಿ ಜಯ ಗಳಿಸುತ್ತಿದ್ದ ಟಿಪ್ಪುವಿನ ಬಗ್ಗೆ ಬ್ರಿಟಿಷ್ ಆಡಳಿತಗಾರರಿಗೆ ಭಯ ಇತ್ತು. ಇಂಥ ಮಹಾನ್ ಹೋರಾಟಗಾರನ ಜಯಂತಿ ಆಚರಿಸುವುದು ನಮ್ಮೆಲ್ಲರ ಪುಣ್ಯ’ ಎಂದರು.
‘ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಟಿಪ್ಪು ಜಯಂತಿ ಆಚರಿಸಲು ಆದೇಶ ಮಾಡಿದ್ದರು. ಐದು ವರ್ಷ ಆಚರಿಸಿದ್ದರು. ಈಗಿನ ಸರ್ಕಾರ ಟಿಪ್ಪು ಜಯಂತಿ ರದ್ದುಪಡಿಸುವ ಮೂಲಕ ಅಲ್ಪಸಂಖ್ಯಾತರ ಭಾವನೆಗೆ ಧಕ್ಕೆ ಉಂಟು ಮಾಡಿದೆ. ಕಾಂಗ್ರೆಸ್ ಕಚೇರಿಯಲ್ಲಿ ಜಯಂತಿ ಆಚರಿಸುವ ಮೂಲಕ ಟಿಪ್ಪುವಿನ ಶೌರ್ಯವನ್ನು ಸ್ಮರಣೆ ಮಾಡಲಾಗುತ್ತಿದೆ’ ಎಂದು ಪುಟ್ಟರಂಗಶೆಟ್ಟಿ ತಿಳಿಸಿದರು.
ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪಿ.ಮರಿಸ್ವಾಮಿ ಮಾತನಾಡಿ, ‘ಟಿಪ್ಪು ಸುಲ್ತಾನ್ ಶತ್ರುಗಳಿಗೆ ಸಿಂಹಸ್ವಪ್ನವಾಗಿ, ಯುದ್ಧಗಳನ್ನು ಜಯಿಸುವ ಜೊತೆಗೆ ಉತ್ತಮ ಆಡಳಿತಗಾರರೂ ಆಗಿದ್ದರು. ಅವರ ಅವಧಿಯಲ್ಲಿ ಜಾರಿಯಾದ ಅನೇಕ ಯೋಜನೆಗಳೇ ಇದಕ್ಕೆ ಸಾಕ್ಷಿ. ಹಿಂದೂ ಮುಸ್ಲಿಮರೊಂದಿಗೆ ಒಗ್ಗಟ್ಟಿನ ಭಾವನೆ ಹೊಂದಿ ಎಲ್ಲರಿಗೂ ನ್ಯಾಯ ಕಲ್ಪಿಸಲು ಮುಂದಾಗಿದ್ದರು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.