ಯಳಂದೂರು: ತಾಲ್ಲೂಕಿನ ವಿವಿಧೆಡೆ ಮಳೆಯಾಗಿದೆ. ನಾಟಿ ಮಾಡಿ ನೀರಿಗಾಗಿ ಹಂಬಲಿಸುತ್ತಿದ್ದ ತರಕಾರಿ ಬೆಳೆಗಾರರಲ್ಲಿ ಮಂದಹಾಸ ಮೂಡಿದೆ. ಮಾರುಕಟ್ಟೆಯಲ್ಲಿ ಟೊಮೆಟೊ ಬೆಲೆ ಏರಿಕೆಯಾಗುತ್ತಿದ್ದು, ಸಗಟು ವ್ಯಾಪಾರಿಗಳು ಖರೀದಿಗೆ ಮುಂದಾಗಿದ್ದಾರೆ.
ಕಳೆದೊಂದು ವರ್ಷದಿಂದ ಟೊಮೆಟೊ ಬೇಸಾಯಗಾರರು ಉತ್ತಮ ಇಳುವರಿ ಪಡೆಯುತ್ತಿದ್ದಾರೆ. ಬೆಲೆ ಮತ್ತು ಬೇಡಿಕೆಯಲ್ಲಿ ಸ್ಥಿರತೆ ಕಂಡಿದೆ. ಬೆಳೆಗೆ ಖರ್ಚು ಮಾಡಿದ್ದ ಹಣವೂ ವಾಪಸ್ ಬಂದಿದೆ. ಕಳೆದೊಂದು ವಾರದಿಂದ ಟೊಮೆಟೊ ವ್ಯಾಪಾರಿಗಳು ಹೊಲಕ್ಕೆ ಬಂದು ಕೊಳ್ಳುತ್ತಿದ್ದು, ರೈತರು ಮಳೆಗೂ ಮೊದಲು ಲಾಭ ಮಾಡಿಕೊಳ್ಳುವ ನಿರೀಕ್ಷೆಯಲ್ಲಿ ಕೊಯ್ಲಿಗೆ ಆದ್ಯತೆ ನೀಡಿದ್ದಾರೆ.
ಗುಣಮಟ್ಟದ ಟೊಮೆಟೊ ಮಾರುಕಟ್ಟೆಯಲ್ಲಿ ಧಾರಣೆ ₹30 ರಿಂದ 40ರ ತನಕ ಇದೆ. ಆದರೆ, ಬೆಳೆಗಾರರು 1 ಕೆಜಿಗೆ ₹20 ರಂತೆ ಮಾರಾಟ ಮಾಡುತ್ತಿದ್ದಾರೆ. 25 ಕೆ.ಜಿ ತೂಕದ ಕ್ರೇಟ್ ಒಂದಕ್ಕೆ ₹500 ದರ ನಿಗದಿಪಡಿಸಿದ್ದು, ಕಟಾವಿನ ಸ್ಥಳದಲ್ಲಿ ಮಾರಾಟ ಆಗುತ್ತಿದೆ. ಕಳೆದ 2 ದಿನಗಳಿಂದ ಮಳೆಯಾಗುತ್ತಿದ್ದು, ಬಹುಬೇಗ ಹಣ್ಣು ಪೂರೈಸಲು ಒತ್ತು ನೀಡಬೇಕಿದೆ’ ಎಂದು ಗೂಳಿಪುರ ಗ್ರಾಮದ ಟೊಮೆಟೊ ಬೆಳೆಗಾರ ಜಯಪ್ಪ ಹೇಳಿದರು.
‘ಸದ್ಯ ಅರ್ಧ ಎಕರೆಯಲ್ಲಿ ಟೊಮೆಟೊ ಕಟಾವಿಗೆ ಬಂದಿದೆ. ₹30 ಸಾವಿರ ಖರ್ಚು ತಗುಲಿದೆ. ಬಂಪರ್ ಇಳುವರಿಯೂ ಬಂದಿದೆ. ಈಗಾಗಲೇ 2 ಟನ್ ಪೂರೈಕೆಯಾಗಿದೆ. ಜಮೀನು ಬಳಿ ಮಾರಾಟ ಮಾಡುವುದರಿಂದ ಮಾರುಕಟ್ಟೆಗೆ ಸಾಗಣೆ ಮಾಡುವ ಖರ್ಚು ಉಳಿದಿದೆ. ಕನಿಷ್ಠ ಬೆಲೆ ಕೆ.ಜಿಗೆ ₹ 15ಕ್ಕೆ ನೀಡಿದರೂ ಸಮಸ್ಯೆ ಇಲ್ಲ. ಉತ್ತಮ ಲಾಭ ಕೈಸೇರುತ್ತದೆ’ ಎನ್ನುತ್ತಾರೆ ಇವರು.
‘ಮಳೆ ಹೆಚ್ಚಾದರೆ ಹಣ್ಣು ಕೊಳೆಯುವ ಸಾಧ್ಯತೆ ಇದೆ. ಹಾಗಾಗಿ, ಬಹಳಷ್ಟು ರೈತರು ಕಟಾವು ಮಾಡುವತ್ತ ಹೆಚ್ಚು ಕಾಳಜಿ ವಹಿಸಿದ್ದಾರೆ. ರೋಗ ನಿಯಂತ್ರಣಕ್ಕೆ ಔಷಧಿ ಬಳಕೆ, ಗೊಬ್ಬರ, ಗಿಡದ ಬಳ್ಳಿ ಕಟ್ಟುವುದು, ಬೆಳೆ ಉಪಚಾರದಲ್ಲಿ ತೊಡಗಿದ್ದಾರೆ. ಕಾಯಿ ಸ್ವಲ್ಪ ಬಣ್ಣಗಟ್ಟುತ್ತಿದ್ದಂತೆ ಕಟಾವು ಮಾಡುತ್ತಾರೆ. ಈಗಿನಂತೆ ಬೆಲೆ ಸ್ಥಿರತೆ ಮುಂದುವರಿದರೆ 4 ತಿಂಗಳ ಬೆಳೆ ಕೈತುಂಬ ಆದಾಯ ತಂದುಕೊಡುತ್ತದೆ’ ಎನ್ನುತ್ತಾರೆ ಬೆಳೆಗಾರರು.
ಮಾರುಕಟ್ಟೆಯಲ್ಲಿ ಧಾರಣೆ ಹೆಚ್ಚು: ಮಳೆ ಆರಂಭ ಆಗುತ್ತಿದ್ದಂತೆ ಟೊಮೆಟೊ ಬೇಡಿಕೆಯೂ ಹೆಚ್ಚಿದೆ. ಮದುವೆ, ಹೊಸಮನೆ ಕಾರ್ಯ ಜೋರು ಪಡೆದಿದ್ದು, ಉತ್ತಮ ದರ್ಜೆಯ ಹಣ್ಣು ಕೊಳ್ಳಲು ಗ್ರಾಹಕರು ಮುಂದಾಗಿದ್ದಾರೆ. ಮುಂಗಾರು ಹಂಗಾಮು ಹೆಚ್ಚಾದರೆ, ಕೊಯ್ಲು ಮತ್ತು ಸಾಗಣೆ ಸಮಸ್ಯೆ ಕಂಡುಬರುತ್ತದೆ. ಉತ್ಪಾದನೆ ಕಡಿಮೆಯಾಗುವುದರಿಂದ ಟೊಮೆಟೊ ಬೆಲೆ ಏರುಗತಿ ಪಡೆಯಲಿದೆ’ ಎಂದು ಸಗಟು ವ್ಯಾಪಾರಿ ತಮಿಳುನಾಡಿನ ಸುಂದರಮ್ ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.