ಗುಂಡ್ಲುಪೇಟೆ: ಮಾರುಕಟ್ಟೆಯಲ್ಲಿ ಟೊಮೆಟೊ ಬೆಲೆ ತೀವ್ರ ಕುಸಿತ ಹಾಗೂ ಹೂಜಿ ರೋಗ ಬಾಧೆಯಿಂದ ಬೇಸತ್ತ ರೈತರು ಪಟ್ಟಣದ ಎಪಿಎಂಸಿ ರಸ್ತೆಯ ಬದಿ ಟೊಮೆಟೊ ಸುರಿದು ಆಕ್ರೋಶ ವ್ಯಕ್ತಪಡಿಸಿದರು.
ಟೊಮೆಟೊ (ಎರಡನೇ ದರ್ಜೆ) ದರ ಬಾಕ್ಸ್‌ಗೆ ₹50ಕ್ಕೆ ಕುಸಿದಿದೆ. ಜತೆಗೆ ಹೂಜಿ ರೋಗಬಾಧೆಯೂ ಕಾಡುತ್ತಿದ್ದು ಮಾರುಕಟ್ಟೆಯಲ್ಲಿ ಗ್ರಾಹಕರು ಖರೀದಿಗೆ ಆಸಕ್ತಿ ತೋರುತ್ತಿಲ್ಲ. ಬೆಳೆದ ಟೊಮೆಟೊವನ್ನು ಮನೆಗೂ ಕೊಂಡೊಯ್ಯಲಾಗದೆ ಮಾರಾಟ ಮಾಡಲೂ ಸಾಧ್ಯವಾಗದೆ ರಸ್ತೆಗೆ ಸುರಿಯಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ರೈತರು ನೋವು ಹೇಳಿಕೊಂಡರು.
ಗುಂಡ್ಲುಪೇಟೆ ಕೇರಳ ಹಾಗೂ ತಮಿಳುನಾಡು ಗಡಿಗೆ ಹತ್ತಿರುವಾಗಿರುವ ತಾಲ್ಲೂಕು ಆಗಿರುವುದರಿಂದ ಉಭಯ ರಾಜ್ಯಗಳ ವ್ಯಾಪಾರಿಗಳು ಇಲ್ಲಿನ ಎಪಿಎಂಸಿಯಲ್ಲಿ ಹೆಚ್ಚಿನ ಪ್ರಮಾಣದ ತರಕಾರಿ ಖರೀದಿ ಮಾಡುತ್ತಾರೆ. ಕೇರಳ ಹಾಗೂ ತಮಿಳುನಾಡಿನಲ್ಲೂ ಭಾರಿ ಮಳೆಯಾಗುತ್ತಿರುವುದರಿಂದ ಅಲ್ಲಿನ ವ್ಯಾಪಾರಿಗಳು ಈ ಬಾರಿ ಖರೀದಿಗೆ ಉತ್ಸಾಹ ತೋರುತ್ತಿಲ್ಲ.
ಜೊತೆಗೆ ತಾಲ್ಲೂಕಿನಲ್ಲಿ ಕೆಲವು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಟೊಮೆಟೊಗೆ ಹೂಜಿ ರೋಗ ಕಾಣಿಸಿಕೊಂಡಿದ್ದು ಗುಣಮಟ್ಟ ಕುಸಿತವಾಗಿದ್ದು ದರವೂ ಪಾತಾಳಕ್ಕೆ ಇಳಿದಿದೆ. ಮಾರುಕಟ್ಟೆಯಲ್ಲಿ ಗ್ರಾಹಕರು ಗುಣಮಟ್ಟದ ಟೊಮೆಟೊ ಮಾತ್ರ ಖರೀದಿಗೆ ಆಸಕ್ತಿ ತೋರುತ್ತಿರುವುದರಿಂದ ಎರಡನೇ ದರ್ಜೆಯ ಟೊಮೆಟೊಗಳನ್ನು ಬಿಸಾಡಬೇಕಾಗಿದೆ ಎಂದು ರೈತರು ಅಳಲು ತೋಡಿಕೊಂಡರು.
ಟೊಮೆಟೊಗೆ ಉತ್ತಮ ಬೆಲೆ ಸಿಗುತ್ತಿರುವುದನ್ನು ಕಂಡ ರೈತರು ಈ ಬಾರಿ ಹೆಚ್ಚಿನ ಪ್ರಮಾಣದ ಟೊಮೆಟೊ ಬೆಳೆದಿದ್ದರು. ಆದರೆ, ಬೆಲೆ ತೀವ್ರ ಕುಸಿತವಾಗಿದೆ. ಟೊಮೆಟೊ ಬೆಳೆಯಲು ಖರ್ಚು ಮಾಡಿದ ಹಣವೂ ರೈತರ ಕೈ ಸೇರಿಲ್ಲ ಎಂದು ರೈತ ಮುಖಂಡ ಮಾಧು ತಿಳಿಸಿದರು.
ಗುಂಡ್ಲುಪೇಟೆ ಎಪಿಎಂಸಿ ಮಾರುಕಟ್ಟೆಯಲ್ಲಿ ನೂರಾರು ಬಾಕ್ಸ್ ಟೊಮೆಟೊ ಖರೀದಿದಾರರಿಲ್ಲದೆ ಕೊಳೆಯುತ್ತಿದೆ. ಬೆಲೆ ಕುಸಿತ ಹಾಗೂ ರೋಗಬಾಧೆಯಿಂದ ಬೇಸತ್ತಿರುವ ರೈತರು ರಸ್ತೆಗೆ ಟೊಮೆಟೊ ಚೆಲ್ಲುತ್ತಿದ್ದಾರೆ. ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ರೈತರ ನೆರವಿಗೆ ಅಧಿಕಾರಿಗಳು ಧಾವಿಸಬೇಕು ಎಂದು ಕರುನಾಡು ಯುವ ಶಕ್ತಿ ಸಂಘಟನೆಯ ಮುಖಂಡರಾದ ಮುನೀರ್ ಪಾಷಾ, ಇಲಿಯಾಸ್ ಕುಮಾರ್, ಕಾಳಿಂಗಸ್ವಾಮಿ, ಸಿದ್ಧಾರ್ಥ್ ಒತ್ತಾಯಿಸಿದ್ದಾರೆ.
ಅಧಿಕಾರಿಗಳ ಸ್ಪಷ್ಟನೆ: ಮಳೆ ಹೆಚ್ಚಾಗಿರುವುದರಿಂದ ಈ ಬಾರಿ ಟೊಮೆಟೊ ಫಸಲು ಉತ್ತಮವಾಗಿದ್ದು ದರ ಕುಸಿತವಾಗಿದೆ. ಹೂಜಿ ರೋಗ ಕಾಣಿಸಿಕೊಂಡಿರುವ ಬಗ್ಗೆ ವರದಿಯಾಗಿಲ್ಲ. ಕೂಡಲೇ ವಿಜ್ಞಾನಿಗಳಿಂದ ಪರಿಶೀಲಿಸಿ ರೋಗ ಹತೋಟಿಗೆ ಕ್ರಮ ವಹಿಸಲಾಗುವುದು ಎಂದು ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ಭಾಸ್ಕರ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.