ಗುಂಡ್ಲುಪೇಟೆ: ಗುಂಡ್ಲುಪೇಟೆ ತಾಲ್ಲೂಕು ಪಂಚಾಯಿತಿಯ ತೆರಕಣಾಂಬಿ ಕ್ಷೇತ್ರದ ಉಪಚುನಾವಣೆಗೆ ಇನ್ನು ಎರಡು ದಿನಗಳು ಬಾಕಿ ಇರುವಂತೆಯೇ ಚುನಾವಣಾ ಕಣ ರಂಗೇರಿದೆ.
ಕಾಂಗ್ರೆಸ್ ಮತ್ತು ಬಿಜೆಪಿಗೆ ಪ್ರತಿಷ್ಠೆಯ ಕಣವಾಗಿರುವ ಈ ಕ್ಷೇತ್ರದಲ್ಲಿ ಎರಡೂ ಪಕ್ಷಗಳ ಮುಖಂಡರು ಗೆಲುವಿಗಾಗಿ ಭಾರಿ ಪ್ರಯತ್ನ ನಡೆಸುತ್ತಿದ್ದಾರೆ.
ಪರಿಶಿಷ್ಟ ಪಂಗಡಕ್ಕೆ ಮೀಸಲಾದ ಕ್ಷೇತ್ರದಲ್ಲಿಬಿಜೆಪಿಯಿಂದ ಆರ್.ಮಹೇಶ್ ಮತ್ತು ಕಾಂಗ್ರೆಸ್‌ನಿಂದ ನಾರಾಯಣ ನಾಯಕ ಅವರು ಅಖಾಡಕ್ಕೆ ಇಳಿದಿದ್ದಾರೆ.
ಕಾಂಗ್ರೆಸ್ ಧುರೀಣ ಮಹದೇವ ಪ್ರಸಾದ್ ಅವರ ಕಟ್ಟಾ ಬೆಂಬಲಿಗರಾಗಿದ್ದ ಆರ್. ಮಹೇಶ್ ಅವರು ಈ ಮುನ್ನ ಇದೇ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೆದ್ದಿದ್ದರು. ಆದರೆ, ಮಹದೇವ ಪ್ರಸಾದ್ ಅವರ ನಿಧನದ ನಂತರ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಅವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು. ಆ ನಂತರ ತಾಲ್ಲೂಕು ಪಂಚಾಯಿತಿ ಸದಸ್ಯತ್ವಕ್ಕೂ ರಾಜೀನಾಮೆ ನೀಡಿದ್ದರು. ಹೀಗಾಗಿ ಈ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಸಬೇಕಾದ ಪ್ರಮೇಯ ಎದುರಾಗಿದೆ.
ಈಗ ಆರ್.ಮಹೇಶ್ ಅವರು ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಕಾಂಗ್ರೆಸ್‌ನ ನಾರಾಯಣ ನಾಯಕ ಅವರು ಮೊದಲ ಬಾರಿ ಚುನಾವಣಾ ಅಖಾಡಕ್ಕೆ ಇಳಿದಿದ್ದಾರೆ. ಇಬ್ಬರೂ ತೆರಕಣಾಂಬಿ ಗ್ರಾಮದವರೇ.
ಮೂಲತಃ ತರಕಾರಿ ಮಾರುಕಟ್ಟೆ ದಲ್ಲಾಳಿಯಾಗಿರುವ ಆರ್.ಮಹೇಶ್ ಅವರು ಸುತ್ತಮುತ್ತಲಿನ ಭಾಗದಲ್ಲಿ ಮಂಡಿ ಮಹೇಶ್ ಎಂದೇ ಚಿರಪರಿಚಿತ. ವ್ಯಾಪಾರದೊಂದಿಗೆ ಕೃಷಿಯನ್ನೂ ಮಾಡುತ್ತಿರುವ ಅವರು ಈ ಹಿಂದೆ ತಾಲ್ಲೂಕು ಪಂಚಾಯಿತಿ ಅಧ್ಯಕ್ಷರಾಗಿಯೂ ಕೆಲಸ ಮಾಡಿದ್ದಾರೆ.
ನಾಯಕ ಸಮುದಾಯದ ಮುಖಂಡರಾಗಿ ಗುರುತಿಸಿಕೊಂಡಿರುವ ನಾರಾಯಣ ನಾಯಕ ಅವರಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ದುಡಿದಿರುವ ಅನುಭವ ಇದೆ. ಎಲ್ಲ ಸಮುದಾಯದ ಜನರೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದಾರೆ. ಸ್ವತಃ ಕೃಷಿಕರಾಗಿರುವ ಅವರಿಗೆ ರೈತರೊಂದಿಗೆ ಉತ್ತಮ ಒಡನಾಟವಿದೆ.
ಕೈ–ಕಮಲ ಜಿದ್ದಾಜಿದ್ದಿ
ವಿಧಾನಸಭಾ ಚುನಾವಣೆಯಲ್ಲಿ ಗೆದ್ದಿರುವ ಬಿಜೆಪಿಯ ಸಿ.ಎಸ್. ನಿರಂಜನ ಕುಮಾರ್ ಹಾಗೂ ಸ್ಥಳೀಯ ಮುಖಂಡರು ಉಪ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಮಹೇಶ್ ಅವರನ್ನು ಪುನಃ ಗೆಲ್ಲಿಸಲು ಶ್ರಮ ಹಾಕುತ್ತಿದ್ದಾರೆ.
ತಾಲ್ಲೂಕಿನಲ್ಲಿ ಕಳೆಗುಂದಿರುವ ಪಕ್ಷಕ್ಕೆ ಚೈತನ್ಯ ನೀಡಲು ಉಪ ಚುನಾವಣೆಯನ್ನು ಗೆಲ್ಲಲೇಬೇಕು ಎಂದು ಕಾಂಗ್ರೆಸ್ ಪಣ ತೊಟ್ಟಿದೆ.ಮಹದೇವ ಪ್ರಸಾದ್ ಅವರ ಮಗ, ಕಾಂಗ್ರೆಸ್‌ನ ಯುವ ಮುಖಂಡ ಗಣೇಶ್ ಪ್ರಸಾದ್ ಹಾಗೂ ಸ್ಥಳೀಯ ಮುಖಂಡರು ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಲು ರಣತಂತ್ರ ರೂಪಿಸುತ್ತಿದ್ದಾರೆ.
ಅಂಕಿ ಅಂಶ
* 7,971ಒಟ್ಟು ಮತದಾರರು
* 4,077 ಮಹಿಳೆಯರು
* 3,894 ಪುರುಷರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.