ಗುಂಡ್ಲುಪೇಟೆ: ತಾಲ್ಲೂಕಿನಲ್ಲಿ ಮುಂಗಾರು ಪೂರ್ವ ಅವಧಿಯಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾದ್ದರಿಂದ ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಇದೀಗ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದ್ದು, ಸಫಾರಿಗೆ ತೆರಳುವ ಪ್ರವಾಸಿಗರಿಗೆ ಸೇರಿದಂತೆ ಕಾಡಿನಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ಪ್ರಯಾಣಿಕರಿಗೂ ಹುಲಿ, ಆನೆ, ಚಿರತೆಗಳು ಕಾಣಿಸಿಕೊಳ್ಳುತ್ತಿವೆ.
ಕಳೆದ ವರ್ಷ ಮಳೆ ವಾಡಿಕೆಗಿಂತ ಕಡಿಮೆ ಮಳೆಯಾದ್ದರಿಂದ ಕೆರೆಕಟ್ಟೆಗಳಲ್ಲಿ ನೀರು ಬತ್ತಿ ಹೋಗಿತ್ತು. ಕಾಡು ಪೂರ್ಣವಾಗಿ ಒಣಗಿ ಪ್ರಾಣಿಗಳಿಗೆ ಕುಡಿಯುವ ನೀರಿನ ತೊಂದರೆಯಾಗುವ ಹಂತ ತಲುಪಿತ್ತು. ಸೋಲಾರ್ ಪಂಪ್ ವ್ಯವಸ್ಥೆ ಇರುವ ಕೆರೆಗಳಲ್ಲಿ ಮಾತ್ರ ಅಲ್ಪ ಪ್ರಮಾಣದಲ್ಲಿ ನೀರಿತ್ತು. ಇದರಿಂದಾಗಿ ಪ್ರವಾಸಿಗರಿಗೆ ಪ್ರಾಣಿಗಳು ಹೆಚ್ಚು ಕಾಣಸಿಗುತ್ತಿರಲಿಲ್ಲ.
ಮೂರು ವಾರಗಳಿಂದ ಅರಣ್ಯ ವ್ಯಾಪ್ತಿಯಲ್ಲಿ ಮಳೆಯಾಗುತ್ತಿರುವುದರಿಂದ ಕಾಡಿನಲ್ಲಿರುವ ಕೆರೆಗಳು ತುಂಬಿವೆ. ಗಿಡ, ಮರ, ಹುಲ್ಲು ಚಿಗುರಿ ಪರಿಸರ ಹಸಿರಾಗಿದೆ. ಸಸ್ಯಾಹಾರಿ ಪ್ರಾಣಿಗಳಿಗೆ ಮೇವಿಗೆ ಕೊರತೆ ಇಲ್ಲ. ಆದ್ದರಿಂದ ಪ್ರಾಣಿಗಳು ಹೆಚ್ಚು ಕಾಣಿಸುಕೊಳ್ಳುತ್ತಿವೆ.
‘ತಿಂಗಳ ಹಿಂದೆ ಕಾಡು ಒಣಗಿದ್ದ ಸಂದರ್ಭದಲ್ಲಿ ಹುಲಿ, ಚಿರತೆಗಳು ಅಪರೂಪಕ್ಕೊಮ್ಮೆ ಸಿಗುತ್ತಿದ್ದವು. ಆದರೆ ಮಳೆಯಿಂದ ಕಾಡು ಹಸಿರಾದ ಪರಿಣಾಮ ಪ್ರತಿನಿತ್ಯ ಯಾವುದಾದರೂ ಸಫಾರಿ ವಲಯದಲ್ಲಿ ಹುಲಿಗಳು ಕಾಣಸಿಗುತ್ತಿವೆ. ಹೆಚ್ಚು ನೀರಿರುವ ಕೆರೆಗಳ ಬಳಿ ವಿಶ್ರಾಂತಿ ತೆಗೆದುಕೊಳ್ಳುತ್ತಿರುತ್ತವೆ’ ಎಂದು ಸಫಾರಿಗೆ ತೆರಳುವ ಗೈಡ್‌ಗಳು ‘ಪ್ರಜಾವಾಣಿ’ಗೆ ತಿಳಿಸಿದರು.
‘ಪ್ರಾಣಿಗಳನ್ನು ನೋಡಬೇಕು ಎಂದು ಸಫಾರಿಗೆ ಬರುವವರ ಸಂಖ್ಯೆ ಹೆಚ್ಚು. ಮುಕ್ತ ವಲಯದ ಅರಣ್ಯ ಪ್ರದೇಶವಾದ್ದರಿಂದ ಪ್ರಾಣಿಗಳು ಖಂಡಿತವಾಗಿ ಸಿಗುತ್ತದೆ ಎಂದು ಹೇಳುವುದು ಸಾಧ್ಯವಿಲ್ಲ. ಅದೃಷ್ಟ ಇದ್ದರೆ ಸಿಗುತ್ತಿತ್ತು. ಆದರೆ ಕಾಡು ಹಸಿರಾಗುತಗತಿದ್ದಂತೆ ಕೆರೆಗಳಲ್ಲಿ ನೀರಿರುವುದರಿಂದ ದಿನಕ್ಕೆ ಒಂದು ಬಾರಿಯಾದರೂ ಹುಲಿ, ಚಿರತೆಗಳ ದರ್ಶನವಾಗುತ್ತಿದೆ. ಆನೆಗಳ ಗುಂಪು ಹೆಚ್ಚು ಕಂಡು ಬರುತ್ತಿದೆ’ ಎಂದು ಅವರು ಮಾಹಿತಿ ನೀಡಿದರು.
‘ಮೇ ತಿಂಗಳಲ್ಲಿ ಅರಣ್ಯ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗಿರುವುದರಿಂದ ಕರೆ ಕಟ್ಟೆಗಳಿಗೆ ಸಾಕಷ್ಟು ಪ್ರಮಾಣದಲ್ಲಿ ನೀರು ಹರಿದು ಬಂದಿದೆ. ಇನ್ನು ಬರುವ ಮಳೆಗೆ ಎಲ್ಲ ಕೆರೆಗಳು ತುಂಬಲಿವೆ. ಕಾಡು ಹಸಿರಾಗಿರುವುದರಿಂದ ಹೆಚ್ಚು ಪ್ರಾಣಿಗಳು ಕಾಣಿಸುತ್ತಿವೆ’ ಎಂದು ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಪ್ರಭಾಕರನ್ ತಿಳಿಸಿದರು.
ಮರಿಗೆ ಜನ್ಮ ನೀಡಿದ ಆನೆ ಈ ಮಧ್ಯೆ ಸಫಾರಿ ವಲಯದಲ್ಲಿ ಎರಡು ದಿನಗಳ ಹಿಂದೆ ಹೆಣ್ಣಾನೆಯೊಂದು ಮರಿಗೆ ಜನ್ಮ ನೀಡಿದೆ. ಈ ದೃಶ್ಯವನ್ನು ಸಫಾರಿಗೆ ತೆರಳಿರುವ ಪ್ರವಾಸಿಗರು ಚಿತ್ರೀಕರಿಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಟ್ಟಿದ್ದಾರೆ. ಈ ವಿಡಿಯೊ ತುಣುಕು ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಸಫಾರಿಗೆ ತೆರಳುತ್ತಿರುವ ಪ್ರವಾಸಿಗರಿಗೆ ಈಗ ತಾಯಿ ಆನೆ ಮತ್ತು ಮರಿಯಾನೆಗಳು ಕಾಣಸಿಗುತ್ತಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.