ADVERTISEMENT

ಕೊಳ್ಳೇಗಾಲ: ನೀರಲ್ಲಿ ಮೋಜು, ಅಪಾಯ ತಂದುಕೊಳ್ಳುವ ಜನ

ಕೊಳ್ಳೇಗಾಲ: 10 ದಿನಗಳಲ್ಲಿ ಎರಡು ಪ್ರಕರಣ, ಮೂವರು ಸಾವು, ಎಚ್ಚರಿಕೆ ನಿರ್ಲಕ್ಷಿಸುತ್ತಿರುವ ಪ್ರವಾಸಿಗರು

ಅವಿನ್ ಪ್ರಕಾಶ್
Published 17 ಜೂನ್ 2022, 19:30 IST
Last Updated 17 ಜೂನ್ 2022, 19:30 IST
ಇತ್ತೀಚೆಗೆ ನದಿ ಮಧ್ಯೆ ಸಿಲುಕಿದ್ದ ಪ್ರವಾಸಿಗರನ್ನು ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಿಸಿದ್ದರು
ಇತ್ತೀಚೆಗೆ ನದಿ ಮಧ್ಯೆ ಸಿಲುಕಿದ್ದ ಪ್ರವಾಸಿಗರನ್ನು ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಿಸಿದ್ದರು   

ಕೊಳ್ಳೇಗಾಲ: ತಾಲ್ಲೂಕಿನಲ್ಲಿ ಕಾವೇರಿ‌ ನದಿ ಹರಿಯುವ ವ್ಯಾಪ್ತಿಯಲ್ಲಿ ಪ್ರವಾಸಿಗರು ಆಟವಾಡಲು ನೀರಿಗಿಳಿದು ತಮ್ಮ ಪ್ರಾಣಕ್ಕೆ ಅಪಾಯ ತಂದುಕೊಳ್ಳುತ್ತಿದ್ದಾರೆ.

ಮಳೆ ಬರುವುದಕ್ಕೆ ಆರಂಭವಾದ ನಂತರ ಕಾವೇರಿ‌ ನದಿಯಲ್ಲಿ ನೀರಿನ ಮಟ್ಟ ಹೆಚ್ಚಾದ ಸಂದರ್ಭದಲ್ಲಿ ದುರ್ಘಟನೆಗಳ ನಡೆಯುತ್ತಿವೆ.

ತಾಲ್ಲೂಕಿನ ಶಿವನಸಮುದ್ರದ ವೆಸ್ಲಿ ಸೇತುವೆ ಕೆಳಗೆ, ಶಿವನ ಸಮುದ್ರ, ಭರಚುಕ್ಕಿ ಜಲಪಾತ, ದರ್ಗಾ, ಸತ್ತೇಗಾಲ ಸೇತುವೆ ವ್ಯಾಪ್ತಿ ಸೇರಿದಂತೆ ಕಾವೇರಿ‌ ನದಿ ತೀರಗಳಲ್ಲಿ ಅವಘಡಗಳು ನಡೆಯುತ್ತಿರುತ್ತವೆ.

ADVERTISEMENT

ತಾಲ್ಲೂಕು ಆಡಳಿತ, ಪೊಲೀಸ್ ಇಲಾಖೆ ನದಿಗೆ ಇಳಿಯದಂತೆ ಪ್ರವಾಸಿಗರಿಗೆ ಎಚ್ಚರಿಕೆ ನೀಡುವ ಪ್ರಯತ್ನ ಮಾಡುತ್ತಿದ್ದರೂ ಪ್ರಯೋಜನವಾಗುತ್ತಿಲ್ಲ. ಇನ್ನಷ್ಟು ಬಿಗಿ ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ ಎಂದು ಹೇಳುತ್ತಾರೆ ಸಾರ್ವಜನಿಕರು.

15 ದಿನಗಳ ಅವಧಿಯಲ್ಲಿ ಮೂವರು ಪ್ರವಾಸಿಗರು ಕಾವೇರಿಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಇದೇ 4ರಂದು ಸತ್ತೇಗಾಲ ಸೇತುವೆ ಕೆಳಗೆ ನೀರಿನಲ್ಲಿ ಆಟವಾಡಲು ಹೋಗಿ ಬೆಂಗಳೂರಿನ ಮೂಲದ 7 ವರ್ಷ ಬಾಲಕಿ ಹಾಗೂ ಆಕೆಯ ದೊಡ್ಡಮ್ಮ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದರು.

ಐದು ದಿನಗಳ ಹಿಂದೆ ಬೆಂಗಳೂರಿನಿಂದ ವಾರಾಂತ್ಯ ಪ್ರವಾಸಕ್ಕಾಗಿ ಬಂದಿದ್ದ 15ಕ್ಕೂ ಹೆಚ್ಚು ಮಂದಿಯಲ್ಲಿ 10 ಮಂದಿ ನದಿಯನ್ನು ದಾಟಿ, ವಾಪಸ್‌ ಬರುವಾಗ 14 ವರ್ಷದ ಬಾಲಕನೊಬ್ಬ ಸೆಳೆತಕ್ಕೆ ಕೊಚ್ಚಿಕೊಂಡು ಹೋಗಿ ಪ್ರಾಣಕಳೆದುಕೊಂಡಿದ್ದ. ಆತನೊಂದಿಗಿದ್ದಒಂಬತ್ತು ಮಂದಿ ನದಿ ಮಧ್ಯದ ಬಂಡೆಯ ಮೇಲೆ ಕುಳಿತು ರಕ್ಷಣೆಗಾಗಿ ಸಹಾಯಯಾಚಿಸಿದ್ದರು. ನಂತರ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಬಂದು ಅವರನ್ನು ರಕ್ಷಿಸಿದ್ದರು.

ಹೊರ ಊರಿನವರೇ ಹೆಚ್ಚು: ನದಿಯನ್ನು ಕಂಡ ಕೂಡಲೇ ನೀರಿಗೆ ಇಳಿಯುವ ಹುಚ್ಚು ಬಹುತೇಕ ಪ್ರವಾಸಿಗರಿಗೆ ಇರುತ್ತದೆ. ಪ್ರವಾಸಿ ಸ್ಥಳಗಳಲ್ಲಿ ಎಚ್ಚರಿಕೆ ಫಲಕ ಹಾಕಿದ್ದರೂ, ಅದನ್ನು ನಿರ್ಲಕ್ಷಿಸಿ ನೀರಿಗೆ ಇಳಿಯುತ್ತಿದ್ದಾರೆ. ಇಂತಹವರಲ್ಲಿ ಹೊರ ಜಿಲ್ಲೆಗಳಿಂದ ಬಂದವರೇ ಹೆಚ್ಚು. ಅದರಲ್ಲೂ ಬೆಂಗಳೂರಿಗರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

‘ಭರಚುಕ್ಕಿ ಜಲಪಾತ ವೀಕ್ಷಣೆಗೆಂದು ಬಂದವರಲ್ಲಿ ಕೆಲವರು, ವೆಸ್ಲಿ ಸೇತುವೆ ಕೆಳಗಡೆ ನೀರಿನಲ್ಲಿ ಆಟವಾಡಲು ಹೋಗುತ್ತಾರೆ. ಸುಳಿಯಲ್ಲಿ ಸಿಲುಕಿ ಇಲ್ಲವೇ ಇಲ್ಲವಾದರೆ ನೀರಿನ ರಭಸಕ್ಕೆ ಕೊಚ್ಚಿ ಹೋಗುವವರು ಹೆಚ್ಚಾಗಿದ್ದಾರೆ. ಮದ್ಯಪಾನ ಮಾಡಿ ನೀರಿನಲ್ಲಿ ಈಜಲು ತೆರಳಿದವರು ಕೂಡ ಪ್ರಾಣಾಪಾಯಕ್ಕೆ ಸಿಲುಕಿದ ಹಲವು ಪ್ರಕರಣಗಳು ನಡೆದಿವೆ’ ಎಂದು ಹೇಳುತ್ತಾರೆ ಶಿವನಸಮುದ್ರದ ನಿವಾಸಿ ರುಕ್ಕಮ್ಮ ಹೇಳಿದರು.

ಫಲಕ ಸಾಲದು: ಜನರು ಹೆಚ್ಚಾಗಿ ನದಿಗೆ ಇಳಿಯುವ ಸ್ಥಳದಲ್ಲಿ ತಾಲ್ಲೂಕು ಆಡಳಿತ ವತಿಯಿಂದ ಎಚ್ಚರಿಕೆ ಫಲಕ ಹಾಕಲಾಗಿದೆ. ವೆಸ್ಲಿ ಸೇತುವೆಯ ಬಳಿ ಪೊಲೀಸ್‌ ಸಿಬ್ಬಂದಿಯನ್ನೂ ನಿಯೋಜಿಸಲಾಗುತ್ತದೆ. ಆದರೂ, ಸಿಬ್ಬಂದಿ ಕಣ್ತಪ್ಪಿಸುವ ಪ‍್ರವಾಸಿಗರು ನೀರಿಗೆ ಇಳಿಯುತ್ತಿದ್ದಾರೆ. ಎಚ್ಚರಿಕೆ ಫಲಕ ಇಲ್ಲದಿರುವ ಕಡೆಗಳಲ್ಲಿ, ಸಿಬ್ಬಂದಿ ಇಲ್ಲದಿರುವ ಜಾಗದಲ್ಲಿ ಈಜಾಟ ಅಥವಾ ನೀರಿನಲ್ಲಿ ಆಟವಾಡುವುದಕ್ಕೆ ತೆರಳುತ್ತಾರೆ. ಇದಕ್ಕೆ ಕಡಿವಾಣ ಹಾಕಬೇಕು ಎಂಬುದು ನದಿ ತೀರದ ಜನರ ಒತ್ತಾಯ.

ಪೊಲೀಸರ ನಿಯೋಜನೆ, ದಂಡ ಪ‍್ರಯೋಗ
‘ಕಾವೇರಿ ನದಿಯಲ್ಲಿ ಸುಳಿಗಳು, ನೀರಿನ ರಭಸ ಹಾಗೂ ಕೆಲವು ಕಡೆ ಹೆಚ್ಚು ಆಳವಿದೆ ಎಂದು ಎಚ್ಚರಿಕೆ ಫಲಕ ಅಳವಡಿಸಲಾಗಿದೆ. ಇದಲ್ಲದೇ ನಾವು ಅನೇಕ ಕಡೆ ಟಾಂ ಟಾಂ ಹೊಡೆದು ಜಾಗೃತಿ ಮೂಡಿಸಿದ್ದೇವೆ. ಆದರೂ ಹೊರಗಿನವರು ನೀರಿಗೆ ಇಳಿಯುತ್ತಿದ್ದಾರೆ. ಈಗಾಗಲೇ ನದಿ ತೀರಗಳಲ್ಲಿ ಸಿಬ್ಬಂದಿಯನ್ನು ನಿಯೋಜನೆ ಮಾಡಿದ್ದೇವೆ. ಎಚ್ಚರಿಕೆ ಮಾತು ಕೇಳದೆ ನೀರಿಗೆ ಇಳಿದವರಿಗೆ ದಂಡ ವಿಧಿಸುತ್ತಿದ್ದೇವೆ. ಒಂದು ವೇಳೆ ಅದನ್ನೂ ಮೀರಿ ನಡೆದರೆ ಕಾನೂಕು ಕ್ರಮ ಕೈಗೊಳ್ಳುತ್ತೇನೆ. ನದಿ ತೀರಗಳಲ್ಲಿ ಕಂದಕಗಳನ್ನು ನಿರ್ಮಿಸಿಕೊಡಬೇಕು ಎಂದು ಈಗಾಗಲೇ ತಹಶೀಲ್ದಾರ್ ಅವರಿಗೆ ಪತ್ರವನ್ನೂ ಬರೆಯಲಾಗಿದೆ’ ಎಂದು ಗ್ರಾಮಾಂತರ ಠಾಣೆಯ ಸಬ್‌ ಇನ್‌ಸ್ಪೆಕ್ಟರ್‌ ಮಂಜುನಾಥ್ ‘ಪ್ರಜಾವಾಣಿ’ಗೆ ತಿಳಿಸಿದರು.

*
ಮದ್ಯಪಾನ ಮಾಡಿ ನೀರಿಗಿಳಿಯುವವರೇ ಹೆಚ್ಚಾಗಿದ್ದಾರೆ. ಇದನ್ನು ತಪ್ಪಿಸಬೇಕು. ಮೋಜು ಮಸ್ತಿಗಾಗಿ ನದಿಗೆ ಇಳಿಯುವವರ ವಿರುದ್ಧ ಪೊಲೀಸರು ಕ್ರಮವಹಿಸಬೇಕು
-ಶಿವು, ವ್ಯಾಪಾರಿ, ಶಿವನಸಮುದ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.