ADVERTISEMENT

ಬಂಡಿಪುರ ಸಫಾರಿಗೆ ಪ್ರವಾಸಿಗರ ದಂಡು: ಗೋಪಾಲಸ್ವಾಮಿ ದೇಗುಲದಲ್ಲೂ ಭಕ್ತರ ದಟ್ಟಣೆ

ಮಲ್ಲೇಶ ಎಂ.
Published 14 ಅಕ್ಟೋಬರ್ 2024, 7:22 IST
Last Updated 14 ಅಕ್ಟೋಬರ್ 2024, 7:22 IST
ಗುಂಡ್ಲುಪೇಟೆ ಹುಲಿ ಸಂರಕ್ಷಿತ ಪ್ರದೇಶದ ಸಫಾರಿ ವಲಯ
ಗುಂಡ್ಲುಪೇಟೆ ಹುಲಿ ಸಂರಕ್ಷಿತ ಪ್ರದೇಶದ ಸಫಾರಿ ವಲಯ   

ಗುಂಡ್ಲುಪೇಟೆ: ನಾಡಹಬ್ಬ ದಸರಾ ಹಾಗೂ ವಾರಾಂತ್ಯದ ಸಾಲು ಸಾಲು ರಜೆಗಳ ಹಿನ್ನೆಲೆಯಲ್ಲಿ ತಾಲ್ಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಸಫಾರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿದ್ದರು. ಬೆಂಗಳೂರು ಸೇರಿದಂತೆ ಹೊರ ಜಿಲ್ಲೆ ಹಾಗೂ ರಾಜ್ಯಗಳಿಂದ ಸಾವಿರಾರು ಸಂಖ್ಯೆಯ ಪ್ರವಾಸಿಗರು ಬಂಡಿಪುರಕ್ಕೆ ಭೇಟಿನೀಡಿದ್ದ ಹಿನ್ನೆಲೆಯಲ್ಲಿ ಸಫಾರಿ ಅವರಣ ತುಂಬಿ ತುಳುಕುತ್ತಿತ್ತು.

ತಾಲ್ಲೂಕಿನಲ್ಲಿ ಪ್ರಸಿದ್ದ ಧಾರ್ಮಿಕ ಕ್ಷೇತ್ರವಾದ ಹಿಮವದ್ ಗೋಪಾಲಸ್ವಾಮಿ ಬೆಟ್ಟ ಹಾಗೂ ಬಂಡೀಪುರ ಹುಲಿ ಸಂರಕ್ಷಿತ ಅರಣ್ಯದಲ್ಲಿ ಸಫಾರಿಗೆ ಅವಕಾಶವಿದ್ದು ಸಾಮಾನ್ಯ ದಿನಗಳಿಗೆ ಹೋಲಿಸಿದರೆ ಹಲವು ಪಟ್ಟು ಹೆಚ್ಚು ಪ್ರವಾಸಿಗರು ಭಾನುವಾರ ಕಂಡುಬಂದರು. ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಪ್ರವಾಸಿಗರ ವಾಹನಗಳು ಸಾಲುಗಟ್ಟಿ  ನಿಂತಿದ್ದ ದೃಶ್ಯಗಳು ಕಂಡುಬಂತು.

ಹಿಮವದ್ ಗೋಪಾಲಸ್ವಾಮಿ ಬೆಟ್ಟ ಹಾಗೂ ಬಂಡಿಪುರದಲ್ಲಿ ಅರಣ್ಯ ಸೌಂದರ್ಯ ಹಾಗೂ ಕಾಡುಪ್ರಾಣಿಗಳ ವೀಕ್ಷಣೆ ಮಾಡಲು ಪ್ರವಾಸಿಗರು ಸಫಾರಿ ಟಿಕೆಟ್‌ಗಾಗಿ ಗಂಟೆಗಳ ಕಾಲ ಸರದಿ ಸಾಲಿನಲ್ಲಿ ನಿಂತು ಟಿಕೆಟ್‌ ಖರೀದಿಸಿದರು. ಬಳಿಕ ಸಫಾರಿ ವಾಹನಗಳನ್ನೇರಿ ತುಂತರು ಮಳೆಯ ಸಿಂಚನದ ಜೊತೆಗೆ ಹಸಿರಿನಿಂದ ಕಂಗೊಳಿಸುತ್ತಿರುವ ಕಾಡಿನ ಸೌಂದರ್ಯದ ಜೊತೆಗೆ ಕಾಡುಪ್ರಾಣಿಗಳನ್ನು ವೀಕ್ಷಣೆ ಮಾಡಿದರು.‌ ಸಫಾರಿ ವೇಳೆ ಕೆಲವರಿಗೆ ಹುಲಿ ದರ್ಶನವಾಗಿದ್ದು ವಿಶೇಷವಾಗಿತ್ತು.

ADVERTISEMENT

ಈ ವರ್ಷ ಉತ್ತಮ ಪ್ರಮಾಣದ ಮಳೆಯಾಗಿರುವುದರಿಂದ ಕಾಡು ಹಚ್ಚಹಸಿರಿನಿಂದ ಕಂಗೊಳಿಸುತ್ತಿದ್ದು ಕಾನನದೊಳಗಿರುವ ಕಟ್ಟೆ ಕೆರೆಗಳಲ್ಲಿ ಹೆಚ್ಚಿನ ಪ್ರಮಾಣದ ನೀರು ಸಂಗ್ರಹವಾಗಿದೆ. ದಾಹ ತಣಿಸಿಕೊಳ್ಳಲು ಕೆರೆಗಳ ಬಳಿ ಪ್ರಾಣಿಗಳು ಹೆಚ್ಚಾಗಿ ಬರುತ್ತಿರುವುದರಿಂದ ಪ್ರವಾಸಿಗರು ಪ್ರಾಣಿಗಳನ್ನು ಕಂಡು ಪುಳಕಿತರಾಗುತ್ತಿದ್ದಾರೆ. ಕಳೆದೆರಡು ದಿನಗಳಿಂದ ಬಂಡೀಪುರದಲ್ಲಿಯೇ ತಂಗಿದ್ದು ಹಲವು ಪ್ರಾಣಿಗಳ ದರ್ಶನವಾಗಿದ್ದು ಖುಷಿ ಕೊಟ್ಟಿದೆ ಎನ್ನುತ್ತಾರೆ ಪ್ರವಾಸಿಗರಾದ ಧರ್ಮೇಂದ್ರ.

ಗೋಪಾಲಸ್ವಾಮಿ ಬೆಟ್ಟದ ದೇವಸ್ಥಾನಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರಿಂದ  ಟಿಕೆಟ್ ಪಡೆಯಲು ಸರತಿ ಸಾಲು ಕಂಡುಬಂತು. ತಾಲ್ಲೂಕು ಮತ್ತು ರಾಜ್ಯದ ನಾನಾ ಕಡೆಗಳಿಂದ ಆಗಮಿಸಿದ್ದ ಭಕ್ತರು ಕಾರುಗಳು, ಮಿನಿ ಟೆಂಪೋ, ಖಾಸಗಿ ಬಸ್ ಸೇರಿದಂತೆ ಇತರೆ ವಾಹನಗಳಲ್ಲಿ ನೂರಾರು ಸಂಖ್ಯೆಯಲ್ಲಿ ಪ್ರವಾಸಿಗರು ದೇವರ ದರ್ಶನಕ್ಕೆ ಆಗಮಿಸಿದ್ದರು.

ಹಿಮವದ್ ಗೋಪಾಲಸ್ವಾಮಿ ದೇವಾಲಯ ಪಾದದ ಫಾರೆಸ್ಟ್ ಚೆಕ್‍ಪೋಸ್ಟ್ ಬಳಿಯ ಪಾರ್ಕಿಂಗ್ ಪ್ರದೇಶದಲ್ಲಿ ಭಕ್ತರ ವಾಹನಗಳ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿತ್ತು. ಪಾರ್ಕಿಂಗ್‌ ಜಾಗದ ಮಿತಿಗಿಂತಲೂ ಹೆಚ್ಚಿನ ಸಂಖ್ಯೆ ಭಕ್ತರು ಬಂದಿದ್ದರಿಂದ ಜಾಗ ಸಾಲದಾಗಿ ರಸ್ತೆಯ ಬದಿಯಲ್ಲೂ ವಾಹನಗಳು ಸಾಲುಗಟ್ಟಿ ನಿಂತಿದ್ದವು.

ದೇಗುಲಕ್ಕೆ ಖಾಸಗಿ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿರುವ ಹಿನ್ನೆಲೆಯಲ್ಲಿ ಸಾರಿಗೆ ಬಸ್‍ಗಳಲ್ಲಿ ದೇವಾಲಯಕ್ಕೆ ತೆರಳುವ ವ್ಯವಸ್ಥೆ ಮಾಡಲಾಗಿತ್ತು. ದೇಗುಲದಲ್ಲಿ ದೇವರ ದರ್ಶನ ಮಾಡಲು ಭಕ್ತರು ಸಾಲುಗಟ್ಟಿದ್ದರು.

ಹಿಮವದ್ ಗೋಪಾಲಸ್ವಾಮಿ ದೇವಾಲಯವು ಸಮುದ್ರ ಮಟ್ಟದಿಂದ 4,770 ಅಡಿ ಎತ್ತರದಲ್ಲಿದ್ದು ಪ್ರಾಕೃತಿಕ ಸೌಂದರ್ಯವನ್ನೇ ಹೊದ್ದು ನಿಂತಿದೆ. ಮಳೆ ಮೋಡಗಳನ್ನು ಬಹಳ ಹತ್ತಿರದಿಂದ ಕಣ್ತುಂಬಿಕೊಳ್ಳುವ ಅವಕಾಶ ಪ್ರವಾಸಿಗರಿಗೆ ಸಿಗಲಿದೆ. ಏಕಾಏಕಿ ಮೋಡಗಳು ಮಳೆ ಸುರಿಸುವ ದೃಶ್ಯ ಕಣ್ಮನ ಸೆಳೆಯುತ್ತವೆ.

ಭಾನುವಾರ ಮಳೆಯಲ್ಲಿ ತೋಯ್ದರೂ ಪ್ರವಾಸಿಗರ ಉತ್ಸಾಹ ಕಡಿಮೆ ಇರಲಿಲ್ಲ. ದೇವರ ದರ್ಶನದ ನಂತರ ಪ್ರಸಾದ ಸ್ವೀಕರಿಸಿ, ಸುತ್ತಮುತ್ತಲಿನ ಪ್ರದೇಶದ ಪ್ರಕೃತಿ ಸೊಬಗನ್ನು ಕಣ್ತುಂಬಿಕೊಂಡು ಫೋಟೋ ಮತ್ತು ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು.

ಸಫಾರಿ ಪಾರ್ಕಿಂಗ್‌ನಲ್ಲಿ ಹೆಚ್ಚು ವಾಹನಗಳು ಇದ್ದರಿಂದ ವಾಹನಗಳ ಪ್ರವೇಶಕ್ಕೆ ಮಿತಿ ಹೇರಲಾಗಿತ್ತು. ಪರಿಣಾಮ ರಾಷ್ಟ್ರೀಯ ಹೆದ್ದಾರಿ ಬಳಿ ಪ್ರವಾಸಿಗರು ವಾಹನಗಳನ್ನು ನಿಲುಗಡೆ ಮಾಡಿದ್ದರು. ಹೆದ್ದಾರಿ ಬದಿ ಅಂಗಡಿಗಳಿಗಳಿಗೆ ಹೆಚ್ಚು ವಹಿವಾಟು ನಡೆಯಿತು.

ಸಫಾರಿ ಟಿಕೆಟ್ ಕೌಂಟರ್ ಬಳಿ ಸಾಲುಗಟ್ಟಿ ನಿಂತಿದ್ದ ವಾಹನಗಳು
ಹೆಚ್ಚಿನ ಪ್ರವಾಸಿಗರು ಸಫಾರಿಗೆ ಬರುತ್ತಿರುವುದರಿಂದ ಎಲ್ಲರಿಗೂ ಅವಕಾಶ ಮಾಡಲು ಅರಣ್ಯ ಇಲಾಖೆ ಗರಿಷ್ಠ ವಾಹನಗಳನ್ನು ಬಳಸಿಕೊಳ್ಳುತ್ತಿದೆ. ಆದರೂ ಕೆಲವರಿಗೆ ಟಿಕೆಟ್ ಸಿಗದೆ ನಿರಾಸೆಯಾಗಿದೆ.
-ನವೀನ್ ಕುಮಾರ್ ಎಸಿಎಫ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.