ಕೊಳ್ಳೇಗಾಲ: ಜಲಾಶಯಗಳಿಂದ ತಮಿಳುನಾಡಿಗೆ ನೀರು ಹರಿಸುತ್ತಿರುವುದರಿಂದ ಕಾವೇರಿ ನದಿ ಮೈದುಂಬಿ ಹರಿಯುತ್ತಿದ್ದು, ತಾಲ್ಲೂಕಿನ ಪ್ರಸಿದ್ಧ ಪ್ರವಾಸಿ ತಾಣ ಭರಚುಕ್ಕಿ ಜಲಪಾತಕ್ಕೆ ಈಗ ಜೀವಕಳೆ ಬಂದಿದೆ.
ಜಲಪಾತದಲ್ಲಿ ನೀರು ಭೋರ್ಗರೆಯಲು ಆರಂಭಿಸಿದ್ದು, ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಜಲಪಾತದ ಸೌಂದರ್ಯವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.
ವಿಳಂಬ: ಈ ಬಾರಿ ಮಳೆ ಕೊರತೆಯಿಂದಾಗಿ ಮೇ ಹಾಗೂ ಜೂನ್ ಹಾಗೂ ಜುಲೈ ತಿಂಗಳಲ್ಲಿ ಜಲಪಾತ ಕಳಾಹೀನವಾಗಿತ್ತು. ಪ್ರವಾಸಿಗರ ಸಂಖ್ಯೆಯೂ ಕಡಿಮೆಯಾಗಿತ್ತು.ತಮಿಳುನಾಡಿಗೆ ನೀರು ಬಿಟ್ಟಿರುವುದರಿಂದ ಜಲಪಾತದಲ್ಲಿ ನೀರಿನ ಹರಿವು ಹೆಚ್ಚಾಗಿದ್ದು, ಪ್ರವಾಸಿಗರಲ್ಲಿ ಹರ್ಷ ತಂದಿದೆ.
ನಾಲ್ಕೈದು ದಿನಗಳಿಂದ ಹೆಚ್ಚು ನೀರು ಹರಿಯುತ್ತಿದ್ದು, ಪ್ರವಾಸಿಗರ ದಂಡು ಭರಚುಕ್ಕಿಯತ್ತ ಬರುತ್ತಿದೆ.
ಅಕ್ರಮ ತೆಪ್ಪ ಸವಾರಿ: ಈ ಮಧ್ಯೆ, ಭರಚುಕ್ಕಿ ಜಲಪಾತಕ್ಕೆ ಹೋಗುವ ದಾರಿಯಲ್ಲಿ ಶಿವನಸಮುದ್ರದ ಬಳಿ ಕಾವೇರಿಯಲ್ಲಿ ಅಕ್ರಮ ತೆಪ್ಪ ಸವಾರಿ ನಡೆಯುತ್ತಿದೆ. ಸುರಕ್ಷಿತ ಸಾಧನಗಳನ್ನು ಧರಿಸದೇ ಪ್ರವಾಸಿಗರು ತೆಪ್ಪದಲ್ಲಿ ಸಾಗುತ್ತಿದ್ದಾರೆ.
ಅರಣ್ಯ ಇಲಾಖೆ ಅಥವಾ ಸ್ಥಳೀಯ ಗ್ರಾಮ ಪಂಚಾಯಿತಿ ತೆಪ್ಪ ಸವಾರಿಗೆ ಅನುಮತಿ ನೀಡಿಲ್ಲ ಎಂದು ಸ್ಥಳೀಯರು ಹೇಳಿದ್ದಾರೆ. ತೆಪ್ಪ ನಡೆಸುವವರು ಒಬ್ಬರಿಗೆ ಇಂತಿಷ್ಟು ಎಂದು ಪ್ರವಾಸಿಗರಿಂದ ದುಡ್ಡು ಪಡೆಯುತ್ತಿದ್ದಾರೆ.
‘ಜೀವರಕ್ಷಕ ದಿರಿಸನ್ನು ಧರಿಸದೆ ತೆಪ‍್ಪ ಸವಾರಿ ಮಾಡುವುದು ಯಾವತ್ತೂ ಅಪಾಯಕಾರಿ. ಇದಕ್ಕೆ ಸಂಬಂಧಿಸಿದ ಇಲಾಖೆ ಕಡಿವಾಣ ಹಾಕಬೇಕಿದೆ’ ಎಂದು ಪ್ರವಾಸಕ್ಕೆ ಬಂದಿದ್ದ ಕುಸುಮ ಅವರು ಹೇಳಿದರು.
ಇದರ ನಡುವೆಯೇ, ನದಿ ಮಧ್ಯದಲ್ಲಿ ಕೆಲವು ಪುಂಡರು ಮದ್ಯಪಾನ ಸೇರಿದಂತೆ ಮೋಜು ಮಸ್ತಿ ಮಾಡುತ್ತಿದ್ದು, ಪ್ರವಾಸಿಗರಿಗೆ ಕಿರಿಕಿರಿ ಉಂಟು ಮಾಡುವುದರ ಜೊತೆಗೆ ಅಪಾಯಕ್ಕೆ ಆಹ್ವಾನ ನೀಡುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.