ಮಹದೇಶ್ವರ ಬೆಟ್ಟ: ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೆಂದಾರೆ ಗ್ರಾಮದ ಬುಡಕಟ್ಟು ಜನರ ಮೇಲೆ ಶುಕ್ರವಾರ ನಡೆದ ದೌರ್ಜನ್ಯ ಖಂಡಿಸಿ ಜಿಲ್ಲಾ ಗಿರಿಜನ ಬುಡಕಟ್ಟು ಅಭಿವೃದ್ಧಿ ಸಂಘದ ಆಶ್ರಯದಲ್ಲಿ ಆದಿವಾಸಿ ಸಮುದಾಯದವರು ಬೆಟ್ಟದಲ್ಲಿ ಪ್ರತಿಭಟನೆ ನಡೆಸಿದರು.
‘ಪಟ್ಟ ಭದ್ರ ಹಿತಾಶಕ್ತಿಗಳು ದೌರ್ಜನ್ಯ ಎಸಗಿದ್ದು, ಸಮುದಾಯದ ಹಕ್ಕುಗಳನ್ನು ಕಸಿದುಕೊಂಡಿದ್ದಾರೆ’ ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು.
ಬೆಟ್ಟದ ಬಸ್ ನಿಲ್ದಾಣದಲ್ಲಿ ಸೇರಿದ ಪ್ರತಿಭಟನಕಾರರು, ಅಲ್ಲಿಂದ ಪೊಲೀಸ್ ಠಾಣೆಯವರೆಗೆ ಮೆರವಣಿಗೆ ಸಾಗಿ ಕೆಲ ಕಾಲ ಧರಣಿ ನಡೆಸಿ ಮನವಿ ಸಲ್ಲಿಸಿದರು.
ಜಿಲ್ಲಾ ಬುಡಕಟ್ಟು ಗಿರಿಜನ ಅಭಿವೃದ್ದಿ ಸಂಘದ ಅಧ್ಯಕ್ಷ ದೊಡ್ಡಸಿದ್ದ ಮಾತನಾಡಿ, ‘ಮೆಂದಾರೆ ಗ್ರಾಮದವರು ಶುಕ್ರವಾರ ಮತದಾನ ಮಾಡಲು ಇಂಡಿಗನತ್ತ ಬೂತ್‌ಗೆ ತೆರಳಿದ್ದು, ಈ ಸಂದರ್ಭದಲ್ಲಿ ಮತ ಹಾಕಬಾರದು ಎಂದು ಬುಡಕಟ್ಟು ಜನಾಂಗಯೇತರರು ಕಲ್ಲುಗಳಿಂದ ಹೊಡೆದು ಗಾಯಗೊಳಿಸಿದ್ದಾರೆ. ಇದರಿಂದ ಸಮುದಾಯದ ಹಲವರು ಗಾಯಗೊಂಡಿದ್ದಾರೆ. ಕೆಲವರಿಗೆ ತೀವ್ರವಾಗಿ ಏಟು ಬಿದ್ದಿದ್ದು, ಅಂಗವಿಕಲರಾಗುವವ ಸಾಧ್ಯತೆಯೂ ಇದೆ’ ಎಂದು ದೂರಿದರು.
‘ಹಲ್ಲೆ ನಡೆಸಿದವರು ಜಾತಿ ನಿಂದನೆ ಮಾಡಿರುವುದಲ್ಲೆ ಅವಾಚ್ಯ ಶಬ್ದಗಳನ್ನು ಆಡಿದ್ದು ದೌರ್ಜನ್ಯ ಎಸಗಿದ್ದಾರೆ. ಇದರಿಂದಾಗಿ ಬುಡಕಟ್ಟು ಜನರು ಭಯಭೀತರಾಗಿದ್ದು ಅವರಿಗೆ ರಕ್ಷಣೆ ನೀಡಬೇಕು’ ಎಂದು ಒತ್ತಾಯಿಸಿದರು.
ಜಿಲ್ಲಾ ಬುಡಕಟ್ಟು ಗಿರಿಜನ ಅಭಿವೃದ್ದಿ ಸಂಘದ ಕಾರ್ಯದರ್ಶಿ ಸಿ.ಮಾದೇಗೌಡ, ಮುಖಂಡರಾದ ಮುತ್ತಯ್ಯ, ಮಹದೇವಸ್ವಾಮಿ, ಯು.ರಂಗೇಗೌಡ, ಗಿರಿಯ ಸೇರಿದಂತೆ ಹಲವರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.