ಗುಂಡ್ಲುಪೇಟೆ (ಚಾಮರಾಜನಗರ): ತಾಲ್ಲೂಕಿನ ಮಡಹಳ್ಳಿಯಲ್ಲಿರುವ ಬಿಳಿಕಲ್ಲು ಕ್ವಾರಿಯಲ್ಲಿ ಶುಕ್ರವಾರ ಭಾರಿ ಕುಸಿತ ಸಂಭವಿಸಿದ್ದು, ಇಬ್ಬರು ಕಾರ್ಮಿಕರು ಮಣ್ಣಿನ ಅಡಿಯಲ್ಲಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.
ಹಿಟಾಚಿಯಲ್ಲಿ ಸಿಲುಕಿಕೊಂಡಿದ್ದ ಕೇರಳದ ನೂರುದ್ದೀನ್ ಎಂಬುವವರನ್ನು ಕಾರ್ಯಾಚರಣೆ ನಡೆಸಿ ರಕ್ಷಿಸಲಾಗಿದೆ. ಬಬ್ಲೂ, ಇಮ್ರಾನ್ ಎಂಬ ಮಹಾರಾಷ್ಟ್ರದ ಇಬ್ಬರು ಕಾರ್ಮಿಕರು ನಾಪತ್ತೆಯಾಗಿದ್ದು, ಅವರು ಮಣ್ಣಿನ ಅಡಿಯಲ್ಲಿ ಸಿಲುಕಿರುವ ಸಾಧ್ಯತೆ ಇದೆ. ಕ್ವಾರಿ ಮ್ಯಾನೇಜರ್ ನವೀದ್ ಎಂಬುವವರನ್ನು ಬಂಧಿಸಲಾಗಿದೆ.
’ಎಷ್ಟು ಜನ ಸಿಲುಕಿರಬಹುದು ಎಂಬ ಮಾಹಿತಿ ಲಭ್ಯವಾಗಿಲ್ಲ‘ ಎಂದು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ತಿಳಿಸಿದ್ದಾರೆ.
ಗ್ರಾಮದ ಸರ್ವೇ ನಂ 192ರಲ್ಲಿ 10 ಮಂದಿಗೆ ಗಣಿಗಾರಿಕೆಗೆ ಗುತ್ತಿಗೆ ನೀಡಲಾಗಿದೆ. ಗುಡ್ಡ ಕುಸಿತ ಆದ ಗಣಿಯನ್ನು (ಒಂದು ಎಕರೆ ಜಾಗ) ತಾಲ್ಲೂಕಿನ ಬೊಮ್ಮಲಾಪುರದ ಮಹೇಂದ್ರ ಎಂಬುವವರು ಗುತ್ತಿಗೆಗೆ ಪಡೆದಿದ್ದರು. ಅವರು ಕೇರಳದ ಹಕೀಂ ಎಂಬುವವರಿಗೆ ಉಪ ಗುತ್ತಿಗೆ ನೀಡಿದ್ದರು. ಕೇರಳ ಹಾಗೂ ಮಹಾರಾಷ್ಟ್ರ ಮೂಲದಕಾರ್ಮಿಕರು ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.
‘ಗಣಿಯು ಅರ್ಧ ಚಂದ್ರಾಕೃತಿಯಲ್ಲಿದ್ದು, 100 ಅಡಿಗೂ ಹೆಚ್ಚು ಆಳವಿದೆ. ತಳಭಾಗದಲ್ಲಿ ಗಣಿಗಾರಿಕೆ ನಡೆಸಿ ಟೊಳ್ಳಾಗಿದ್ದರಿಂದ, ಮೇಲ್ಭಾಗದಲ್ಲಿ ಭಾರ ಹೆಚ್ಚಾಗಿ ಗುಡ್ಡ ಕುಸಿದಿರುವ ಸಾಧ್ಯತೆ ಇದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಡಿ.ಸಿ, ಎಸ್‌ಪಿ ಭೇಟಿ: ಜಿಲ್ಲಾಧಿಕಾರಿ ಚಾರುಲತಾ ಸೋಮಲ್, ದಕ್ಷಿಣ ವಲಯ ಐಜಿಪಿ ಪ್ರವೀಣ್ ಮಧುಕರ್ ಪವಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಪಿ.ಶಿವಕುಮಾರ್ ಭೇಟಿ ನೀಡಿದ್ದರು.
’ಕುಸಿತಕ್ಕೆ ಕಾರಣವನ್ನು ಪತ್ತೆ ಹಚ್ಚಲಾಗುವುದು. ಏಳು ಮಂದಿಯನ್ನು ರಕ್ಷಿಸಲಾಗಿದೆ. ಸಾವಿನ ಬಗ್ಗೆ ನಿಖರ ಮಾಹಿತಿ ಇಲ್ಲ‘ ಎಂದು ಜಿಲ್ಲಾಧಿಕಾರಿ ಹೇಳಿದರು.
ಏಳು ಕಾರ್ಮಿಕರ ರಕ್ಷಣೆ
ಬೆಳಿಗ್ಗೆ 11.30ರ ಹೊತ್ತಿಗೆ ಗುಡ್ಡ ಕುಸಿಯಲು ಆರಂಭಿಸುತ್ತಿದ್ದಂತೆಯೇ ಆರು ಕಾರ್ಮಿಕರು ಓಡಿ ಪ್ರಾಣ ಉಳಿಸಿಕೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಟಿಪ್ಪರ್‌ನಲ್ಲಿ ಸಿಲುಕಿದ್ದ ಚಾಲಕ ನೂರುದ್ದೀನ್ ಅವರನ್ನು, ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಮೂರು ಗಂಟೆಗಳ ಸತತ ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದು, ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಗಾಯಗೊಂಡಿರುವ ಏಳು ಮಂದಿಯಲ್ಲಿ ನಾಲ್ವರಿಗೆ ತೀವ್ರವಾಗಿ ಏಟಾಗಿದೆ ಎಂದು ಹೇಳಲಾಗಿದೆ.
ಕುಸಿತದ ಜಾಗದಲ್ಲಿದ್ದ ಕಂಪ್ರೆಸರ್‌ಗಳು ಪೂರ್ಣವಾಗಿ ಮಣ್ಣಿನಡಿ ಸಿಲುಕಿವೆ. ಐದು ಟಿಪ್ಪರ್, ಮೂರು ಹಿಟಾಚಿಗಳಿಗೆ ಹಾನಿಯಾಗಿವೆ.
’40ರಿಂದ 50 ಅಡಿ ಎತ್ತರಕ್ಕೆ ಕಲ್ಲು, ಮಣ್ಣು ರಾಶಿ ಬಿದ್ದಿದ್ದು, ತೆರವು ಕಾರ್ಯಾಚರಣೆಗೆ ಹೆಚ್ಚು ಸಮಯ ಬೇಕು’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
---
ಇದುವರೆಗೆ ಸಾವಿನ ವರದಿಯಾಗಿಲ್ಲ. ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ತಂಡಗಳು ಕಾರ್ಯಾಚರಣೆ ನಡೆಸಲಿವೆ. ಗಣಿ ಸಚಿವರೊಂದಿಗೆ ಮಾತನಾಡಿದ್ದೇನೆ. ಇಲಾಖೆಯ ತಂಡವನ್ನೂ ಕಳುಹಿಸಲಾಗಿದೆ.
ವಿ.ಸೋಮಣ್ಣ, ಜಿಲ್ಲಾ ಉಸ್ತುವಾರಿ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.