ಕೊಳ್ಳೇಗಾಲ: ಸರ್ಕಾರ ಕಡ್ಡಾಯ ಶಿಕ್ಷಣ ಹಕ್ಕು ಜಾರಿಗೊಳಿಸಿದ್ದರೂ ಹೊಟ್ಟೆಪಾಡಿಗಾಗಿ ಊರಿನಿಂದ ಊರಿಗೆ ಅಲೆಯುವ ಅಲೆಮಾರಿಗಳ ಮಕ್ಕಳಿಗೆ ಮಾತ್ರ ಶಿಕ್ಷಣ ಕೈಗೆಟುಕದಂತಾಗಿದೆ. ಓದುವ ಹಂಬಲ ಇದ್ದರೂ ಅನಿವಾರ್ಯತೆಯಿಂದ ಅಲೆಮಾರಿ ಕುಟುಂಬಗಳ ಮಕ್ಕಳು ಟೆಂಟ್‌ಗಳಲ್ಲಿ, ಪೋಷಕರು ದುಡಿಯುವ ಸ್ಥಳಗಳಲ್ಲಿ ಕಾಲಹರಣ ತ್ತಿದ್ದಾರೆ.
ಪ್ರತಿ ಮಗುವಿಗೂ ಶಿಕ್ಷಣ ಸಿಗಬೇಕು ಎಂಬ ಸದುದ್ದೇಶದಿಂದ ಸರ್ಕಾರ ಹಲವು ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದರೂ ಅನುಷ್ಠಾನ ಹಂತದಲ್ಲಿನ ಲೋಪಗಳಿಂದಾಗಿ ಮೂಲ ಉದ್ದೇಶ ಈಡೇರದಂತಾಗಿದೆ. ಕೊಳ್ಳೇಗಾಲ ನಗರದ ಶ್ರೀ ಮಹದೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಹಿಂಭಾಗದಲ್ಲಿ ಹಲವು ತಿಂಗಳುಗಳಿಂದ 27ಕ್ಕೂ ಹೆಚ್ಚು ಅಲೆಮಾರಿ ಕುಟುಂಬಗಳು ಬೀಡುಬಿಟ್ಟಿದ್ದು ಇಲ್ಲಿರುವ ಮಕ್ಕಳು ಶಿಕ್ಷಣದಿಂದ ವಂಚಿತರಾಗಿರುವುದು ಬೆಳಕಿಗೆ ಬಂದಿದೆ.
ಟೆಂಟ್‌ಗಳಲ್ಲಿ 15ಕ್ಕೂ ಹೆಚ್ಚು ಮಕ್ಕಳಿವೆ. 15 ವರ್ಷದೊಳಗಿನ ಇವರು ಸಾಮಾನ್ಯ ಮಕ್ಕಳಂತೆ ಶಾಲೆಗೆ ಹೋಗಿ ಶಿಕ್ಷಣ ಪಡೆಯಲಾಗದೆ, ಟೆಂಟ್‌ಗಳಲ್ಲೇ ಕಾಲ ಕಳೆಯುತ್ತಿವೆ. ಸಮರ್ಪಕ ಪಾಲನೆ, ಪೋಷಣೆ, ರಕ್ಷಣೆ ಇಲ್ಲದೆ ಚಳಿ, ಗಾಳಿ, ಮಳೆಗೆ ಮೈಯೊಡ್ಡಿ ಮಕ್ಕಳು ಬದುಕುತ್ತಿರುವುದು ಆಡಳಿತ ವ್ಯವಸ್ಥೆಯ ಕಾಣಿಸದಿರುವುದು ದುರಂತ.
ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಅಧೋನಿ ತಾಲ್ಲೂಕಿನ ಅಲೆಮಾರಿ ಕುಟುಂಬಗಳು ತಾಲ್ಲೂಕಿಗೆ ಪಾತ್ರೆ ವ್ಯಾಪಾರಕ್ಕಾಗಿ ಬಂದಿವೆ. ಇಲ್ಲಿಗೆ ಬಂದು ಕೆಲ ವರ್ಷಗಳೇ ಕಳೆದರೂ ಅಲೆಮಾರಿ ಮಕ್ಕಳು ಇಂದಿಗೂ ಶಾಲೆಗೆ ಸೇರದಿರುವುದು ಬೇಸರದ ಸಂಗತಿ.
ಹೊಟ್ಟೆ ಹೊರೆಯಲು ರಾಜ್ಯದಿಂದ ರಾಜ್ಯಕ್ಕೆ ವಲಸೆ ಹೋಗುವ ಅನಿವಾರ್ಯತೆಗೆ ಸಿಲುಕಿರುವ ಅಲೆಮಾರಿಗಳ ಮಕ್ಕಳಿಗೂ ಎಲ್ಲ ಮಕ್ಕಳಂತೆ ಶಿಕ್ಷಣ ಸಿಗಬೇಕು. ತಾತ್ಕಾಲಿಕವಾಗಿ ಶಿಕ್ಷಣ ನೀಡುವ ಹಾಗೂ ಅಗತ್ಯವಿದ್ದವರಿಗೆ ವಸತಿಯುತ ಶಿಕ್ಷಣ ನೀಡಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸುತ್ತಾರೆ.
ಪೌಷ್ಟಿಕ ಆಹಾರದ ಕೊರತೆ: ಟೆಂಟ್‌ಗಳಲ್ಲಿ ವಾಸವಿರುವ ಮಕ್ಕಳು ಪೌಷ್ಟಿಕ ಆಹಾರ ಕೊರತೆ ಎದುರಿಸುತ್ತಿದ್ದು ಅಪೌಷ್ಟಿಕತೆಗೆ ತುತ್ತಾಗಿರುವಂತೆ ಕಾಣುತ್ತದೆ. ಲಕ್ಕರಸನ ಪಾಳ್ಯ ಮುಖ್ಯರಸ್ತೆಯಲ್ಲಿ ಕೂಡ ತಮಿಳುನಾಡು ಮೂಲದ ಹಲವು ಅಲೆಮಾರಿ ಕುಟುಂಬಗಳು ಆಸಿಗೆ ವ್ಯಾಪಾರಕ್ಕಾಗಿ ಬೀಡುಬಿಟ್ಟಿದ್ದು ಒಂದು ತಿಂಗಳಿನಿಂದ ಟೆಂಟ್‌ಗಳಲ್ಲಿವೆ. ಇಲ್ಲಿಯ ಮಕ್ಕಳಿಗೂ ಶಾಲಾ ಶಿಕ್ಷಣ ಮರೀಚಿಕೆಯಾಗಿದೆ.
ಬಳ್ಳಾರಿ, ಕೊಲ್ಕತ್ತಾ ಸೇರಿದಂತೆ ರಾಜ್ಯ ಹಾಗೂ ಹೊರ ರಾಜ್ಯಗಳ ನಾನಾ ಕಡೆಗಳಿಂದ ನೂರಾರು ಮಂದಿ ವಲಸೆ ಕಾರ್ಮಿಕರು ಕಬ್ಬು ಕಡಿಯಲು ಹಾಗೂ ಭತ್ತ ನಾಟಿ ಮಾಡಲು ಜಿಲ್ಲೆಗೆ ಬಂದಿದ್ದು ನೂರಾರು ಮಕ್ಕಳು ಶಿಕ್ಷಣ ವಂಚಿತರಾಗಿದ್ದಾರೆ. ಶಿಕ್ಷಣದ ಜೊತೆಗೆ ಅಪೌಷ್ಟಿಕತೆಯಿಂದಲೂ ಬಳಲುತ್ತಿದ್ದಾರೆ. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಗಮನ ಹರಿಸಿ ಮಕ್ಕಳಿಗೆ ಶಾಲೆ ಹಾಗೂ ಅಂಗನವಾಡಿ ಶಿಕ್ಷಣದ ಜೊತೆಗೆ ಪೌಷ್ಟಿಕ ಆಹಾರದ ವ್ಯವಸ್ಥೆ ಮಾಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಅಲೆಮಾರಿ ಕುಟುಂಬ ವಾಸವಿರುವ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆಯಲಾಗುವುದು. ಶಿಕ್ಷಣ ವಂಚಿತ ಮಕ್ಕಳು ಕಂಡುಬಂದರೆ ಸ್ಥಳೀಯ ಅಂಗನವಾಡಿ ಶಾಲೆಗಳಿಗೆ ಕಳಿಸುವ ವ್ಯವಸ್ಥೆ ಮಾಡಲಾಗುವುದುನಂಜಾಮಣಿ ಸಿಡಿಪಿಒ
ಯಾವ ಮಕ್ಕಳೂ ಶಿಕ್ಷಣದಿಂದ ವಂಚಿತರಾಗಬಾರದು. ಶಿಕ್ಷಣ ಪಡೆಯಲಾಗದ ಮಕ್ಖಳಿದ್ದರೆ ಗುರುತಿಸಿ ಅಂಥವರನ್ನು ಸ್ಥಳೀಯ ಶಾಲೆ ಹಾಗೂ ಅಂಗನವಾಡಿಗಳಿಗೆ ಸೇರಿಸುವ ವ್ಯವಸ್ಥೆ ಮಾಡಲಾಗುವುದು. ಈ ಸಂಬಂಧ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಗುವುದು.ಮಹೇಶ್ ಉಪ ವಿಭಾಗಾಧಿಕಾರಿ
ಹೊಟ್ಟೆ ಹೊರೆಯಲು ಬೇರೆ ಜಿಲ್ಲೆಗಳಿಗೆ ತೆರಳಿ ಪಾತ್ರೆ ವ್ಯಾಪಾರ ಮಾಡುತ್ತೇವೆ. ಊಟಕ್ಕೂ ತೊಂದರೆ ಇರುವಾಗ ಮಕ್ಕಳನ್ನು ಓದಿಸುವುದು ಹೇಗೆಭೈರಾದೇವಿ ವಲಸೆ ಕಾರ್ಮಿಕರು
ಅಲೆಮಾರಿಗಳು ನಸುಕಿನಲ್ಲೇ ಸುತ್ತಲಿನ ಗ್ರಾಮಗಳಿಗೆ ವ್ಯಾಪಾರಕ್ಕೆ ತೆರಳಿದರೆ ಬಿಸಿಲು ಮಳೆ ಚಳಿ ಗಾಳಿ ತಡೆದುಕೊಂಡು ಮಕ್ಕಳು ಟೆಂಟ್‌ಗಳ ಬಳಿ ವಾಸವಿರಬೇಕು. ಮಕ್ಕಳ ಆರೈಕೆ ಪೋಷಣೆಗೆ ಯಾರೂ ಇರುವುದಿಲ್ಲ. ಸಮಯಕ್ಕೆ ಸರಿಯಾಗಿ ಆಹಾರ ಸಿಗದೆ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ರಾತ್ರಿಯ ಹೊತ್ತು ಟೆಂಟ್‌ಗಳಲ್ಲಿ ವಿಷ ಜಂತುಗಳ ಕಾಟ ಹೆಚ್ಚಾಗಿದ್ದು ಜೀವ ಭಯದಲ್ಲಿ ಬದುಕುತ್ತಿದ್ದಾರೆ. ವಿದ್ಯುತ್ ಸಂಪರ್ಕ ಕತ್ತಲಲ್ಲಿ ದಿನ ದೂಡುತ್ತಿದ್ದಾರೆ. ಅಲೆಮಾರಿಗಳ ಮಕ್ಕಳಿಗೂ ಶಿಕ್ಷಣ ಪಡೆಯುವ ಹಕ್ಕಿದ್ದು ಸಾಕಾರವಾಗಬೇಕು ಪ್ರಗತಿಪರ ಚಿಂತಕ ಜೈ ಶಂಕರ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.