ಚಾಮರಾಜನಗರ: ಸಿದ್ದರಾಮಯ್ಯ ಸಚಿವ ಸಂಪುಟದಲ್ಲಿ ಚಾಮರಾಜನಗರ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರಿಗೆ ಅವಕಾಶ ನೀಡದಿರುವುದಕ್ಕೆ ಜಿಲ್ಲೆಯ ಉಪ್ಪಾರ ಸಮಾಜದ ಮುಖಂಡರು, ಅವರ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಶನಿವಾರ ದಿಢೀರ್ ಪ್ರತಿಭಟನೆ ನಡೆಸಿದ ಸಮಾಜದವರು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಹಾಗೂ ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ಅಸಮಾಧಾನ ಹೊರಹಾಕಿದರು.
'ಉಪ್ಪಾರ ಸಮಾಜದ ಏಕೈಕ ಶಾಸಕರಾಗಿರುವ ಪುಟ್ಟರಂಗಶೆಟ್ಟಿ ಅವರಿಗೆ ಸಚಿವ ಸ್ಥಾನ ನೀಡುವ ಭರವಸೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೀಡಿದ್ದರು. ಕೊನೆ ಕ್ಷಣದಲ್ಲಿ ಅವರ ಹೆಸರನ್ನು ಕೈಬಿಟ್ಟು ಸಮಾಜಕ್ಕೆ ಅನ್ಯಾಯ ಮಾಡಲಾಗಿದೆ' ಎಂದು ಮುಖಂಡರು ಆರೋಪಿಸಿದರು.
'ರಾಜ್ಯದಲ್ಲಿ ಉಪ್ಪಾರರು 40 ಲಕ್ಷದಷ್ಟು ಜನರಿದ್ದಾರೆ. ಅವರ ಪ್ರತಿನಿಧಿಯಾಗಿ ಪುಟ್ಟರಂಗಶೆಟ್ಟಿ ಒಬ್ಬರೇ ಇದ್ದಾರೆ. ನಾಲ್ಕು ಬಾರಿ ಶಾಸಕರಾಗಿದ್ದಾರೆ. ಅವರಿಗೆ ಸಚಿವ ಸ್ಥಾನ ನೀಡದಿದ್ದರೆ, ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಹಾನಿಯಾಗಬಹುದು. ಕೊಟ್ಟ ಭರವಸೆಯಂತೆ ಅವರನ್ನು ಸಚಿವರನ್ನಾಗಿ ಮಾಡಬೇಕು. ಇಲ್ಲದಿದ್ದರೆ ಸೋಮವಾರ ಚಾಮರಾಜನಗರ ಬಂದ್ ಗೆ ಕರೆ ನೀಡಲಾಗುವುದು' ಎಂದು ಎಚ್ಚರಿಸಿದರು.
ಈ ಮಧ್ಯೆ, 'ಪುಟ್ಟರಂಗಶೆಟ್ಟಿ ಅವರಿಗೆ ಸಚಿವ ಸ್ಥಾನ ನೀಡದೆ ಕಾಂಗ್ರೆಸ್ ನಂಬಿಕೆ ದ್ರೋಹ ಮಾಡಿದ್ದು, ಇದನ್ನು ಖಂಡಿಸಿ ಜಿಲ್ಲಾ ಕಾಂಗ್ರೆಸ್ ಕಚೇರಿ ಮುಂದೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ' ಎಂದು ತಾಲ್ಲೂಕಿನ ನಲ್ಲೂರು ಮೋಳೆಯ ಚಂದ್ತಶೇಖರ್ ಎಂಬುವವರು ಬರೆದಿದ್ದಾರೆ ಎನ್ನಲಾದ ಪತ್ರವೊಂದು ವಾಟ್ಸ್ ಆ್ಯಪ್ ನಲ್ಲಿ ಹರಿದಾಡುತ್ತಿದೆ.
'ನನ್ನ ಆತ್ಮಹತ್ಯೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರೇ ಕಾರಣ' ಎಂದೂ ಪತ್ರದಲ್ಲಿ ಬರೆಯಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.