ಚಾಮರಾಜನಗರ: ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಎಚ್.ಆರ್.ಪ್ರಮೋದ್ ಆರಾಧ್ಯ ಅವರು ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ಪರೀಕ್ಷೆಯಲ್ಲಿ 671ನೇ ರ‍್ಯಾಂಕ್ ಪಡೆದು ನಾಗರಿಕ ಸೇವಾ ಹುದ್ದೆಗೆ ಆಯ್ಕೆಯಾಗಿದ್ದಾರೆ.
ಯುಪಿಎಸ್‌ಸಿ ಪರೀಕ್ಷೆಯಲ್ಲಿ ಅವರು ತೇರ್ಗಡೆ ಹೊಂದುತ್ತಿರುವುದು ಇದು ಎರಡನೇ ಬಾರಿ. 2021ರಲ್ಲಿ 601 ರ‍್ಯಾಂಕ್ ಗಳಿಸಿ ಹಣಕಾಸು ಸಚಿವಾಲಯದ ಭಾರತೀಯ ನಾಗರಿಕ ಲೆಕ್ಕಪರಿಶೋಧನೆ ಸೇವೆಗೆ (ಐಸಿಎಎಸ್) ನೇಮಕಗೊಂಡರು. ಎರಡು ವರ್ಷಗಳಿಂದ ದೆಹಲಿಯಲ್ಲಿ ಈ ಸೇವೆಗೆ ಸಂಬಂಧಿಸಿದ ತರಬೇತಿ ಪಡೆಯುತ್ತಿದ್ದಾರೆ.
ತಮ್ಮ ರ‍್ಯಾಂಕ್ ಉತ್ತಮ ಪಡಿಸುವ ಉದ್ದೇಶದಿಂದ ಕಳೆದ ವರ್ಷ ಮತ್ತೆ ಪರೀಕ್ಷೆ ಬರೆದಿದ್ದರು. ಅದರಲ್ಲೂ ಅವರು ಯಶಸ್ಸು ಸಾಧಿಸಿದ್ದು, 2021ರ ರ‍್ಯಾಂಕ್‌ಗೆ ಹೋಲಿಸಿದರೆ, ಈ ಬಾರಿ ರ‍್ಯಾಂಕ್ ಕಡಿಮೆಯಾಗಿದೆ.
‘ಆದರೆ 2021ರಲ್ಲಿ 740 ಹುದ್ದೆಗಳಿದ್ದವು. ಈ ಬಾರಿ 1143 ಹುದ್ದೆಗಳಿವೆ. ಹಾಗಾಗಿ, ಈಗಿನದ್ದಕ್ಕಿಂತಲೂ ಉತ್ತಮ ಹುದ್ದೆ ಸಿಗುವ ಸಾಧ್ಯತೆ ಇದೆ’ ಎಂದು ಪ್ರಮೋದ್ ಆರಾಧ್ಯ ‘ಪ್ರಜಾವಾಣಿ’ಗೆ ತಿಳಿಸಿದರು.
ರೈತನ ಮಗ: ಪ‍್ರಮೋದ್ ಆರಾಧ್ಯ ರೈತ ಕುಟುಂಬದವರು. ಗುಂಡ್ಲುಪೇಟೆ ತಾಲ್ಲೂಕಿನ ಹಳ್ಳದಮಾದಹಳ್ಳಿಯ ರುದ್ರಾರಾಧ್ಯ ಹಾಗೂ ಮಮತಾಮಣಿ ದಂಪತಿಯ ಹಿರಿಯ ಮಗನಾಗಿರುವ ಅವರು ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವೀಧರ. 2021ರಲ್ಲಿ ಮೂರನೇ ಪ್ರಯತ್ನದಲ್ಲಿ ನಾಗರಿಕ ಸೇವೆಗಳಿಗೆ ಆಯ್ಕೆಯಾಗಿದ್ದರು.
ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆ ಸೇಂಟ್ ಮೇರಿಸ್ ಪ್ರೌಢಶಾಲೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಪಡೆದಿರುವ ಪ್ರಮೋದ್, ಮೈಸೂರಿನ ಮರಿಮಲ್ಲಪ್ಪ ಕಾಲೇಜಿನಲ್ಲಿ ಪಿಯು ಶಿಕ್ಷಣ ಪಡೆದಿದ್ದರು. ಮಂಡ್ಯದ ಪಿಇಎಸ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಎಂಜಿನಿಯರಿಂಗ್ ಓದಿದ್ದರು.
2017ರಲ್ಲಿ ಎಂಜಿನಿಯರಿಂಗ್ ಪೂರೈಸಿದ್ದ ಅವರು, ಯುಪಿಎಸ್‌ಸಿ ಪರೀಕ್ಷೆಗೆ ಸಿದ್ಧತೆ ಆರಂಭಿಸಿದ್ದರು. ಸ್ನೇಹಿತರೊಂದಿಗೆ ದೆಹಲಿಗೆ ತೆರಳಿ ತರಬೇತಿ ಪಡೆದಿದ್ದರು. ಮೊದಲ ಪ್ರಯತ್ನದಲ್ಲಿ ಯಶಸ್ಸು ಸಿಕ್ಕಿರಲಿಲ್ಲ. ಎರಡನೇ ಪ್ರಯತ್ನದಲ್ಲಿ ಪ್ರಾಥಮಿಕ ಹಾಗೂ ಪ್ರಮುಖ ಪರೀಕ್ಷೆ ತೇರ್ಗಡೆಯಾಗಿ ಸಂದರ್ಶನಕ್ಕೂ ಹಾಜರಾಗಿದ್ದರು. 15 ಅಂಕಗಳಿಂದ ಆಯ್ಕೆಯಾದವರ ಪಟ್ಟಿಯಲ್ಲಿ ಹೆಸರು ತಪ್ಪಿತ್ತು.
2020ರಲ್ಲಿ ಮನೆಯಲ್ಲೇ ಇದ್ದುಕೊಂಡು ಅಭ್ಯಾಸಮಾಡಿ ಯುಪಿಎಸ್‌ಸಿ ಬರೆದಿದ್ದ ಅವರು 601 ರ‍್ಯಾಂಕ್ ಪಡೆದು ಗೆಲುವಿನ ನಗೆ ಬೀರಿದ್ದರು.
‘ಪ್ರಜಾವಾಣಿ’ ಸಾಧಕ: ಶಿಕ್ಷಣ ಕ್ಷೇತ್ರದಲ್ಲಿ ಗ್ರಾಮೀಣ ಪ್ರತಿಭೆಯ ಸಾಧನೆಯನ್ನು ಗುರುತಿಸಿದ್ದ ‘ಪ್ರಜಾವಾಣಿ’ಯು 2021ನೇ ಸಾಲಿನ ‘ವರ್ಷದ ಸಾಧಕರು’ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು.
ಭಾರತೀಯ ನಾಗರಿಕ ಲೆಕ್ಕಪರಿಶೋಧನೆ ಸೇವೆಗೆ (ಐಸಿಎಎಸ್) ಆಯ್ಕೆಯಾಗಿರುವ ಪ್ರಮೋದ್ ಎರಡು ವರ್ಷಗಳಿಂದ ದೆಹಲಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ. ‘ಎರಡನೇ ಬಾರಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಯಶಸ್ಸು ಸಿಕ್ಕಿರುವುದಕ್ಕೆ ಸಂತೋಷವಾಗಿದೆ. ಕಳೆದ ವರ್ಷ ಬರೆದಿದ್ದ ಪರೀಕ್ಷೆಗೆ ಹೊಸ ತರಬೇತಿ ಏನೂ ಪಡೆದಿರಲಿಲ್ಲ. ಅಭ್ಯಾಸ ಮಾಡುವುದಕ್ಕಾಗಿ ಐಸಿಎಎಸ್ ತರಬೇತಿಗೆ ಆರು ತಿಂಗಳು ರಜೆ ಹಾಕಿದ್ದೆ. ಪರೀಕ್ಷೆ ಬರೆದ ನಂತರ ಮತ್ತೆ ತರಬೇತಿಗೆ ಹಾಜರಾಗಿದ್ದೇನೆ’ ಎಂದು ಪ್ರಮೋದ್ ಆರಾಧ್ಯ ‘ಪ್ರಜಾವಾಣಿ’ಗೆ ತಿಳಿಸಿದರು.
‘ಈ ಬಾರಿ ನನಗೇನೂ ಕಷ್ಟವಾಗಲಿಲ್ಲ. ಕೆಲಸ ಇತ್ತು. ವೇತನವೂ ಬರುತ್ತಿತ್ತು. ಹಿಂದಿನ ಅನುಭವದ ಆಧಾರದಲ್ಲಿ ಪರೀಕ್ಷೆ ಬರೆದೆ. ಆರು ತಿಂಗಳ ಕಾಲ ಚೆನ್ನಾಗಿ ಅಭ್ಯಾಸ ಮಾಡಿದ್ದೆ’ ಎಂದು ಅವರು ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.