ADVERTISEMENT

ಓದಲೂ ಸೈ; ಬ್ಯಾಂಡ್ ಬಾರಿಸಲೂ ಸೈ: ವಾಸವಿ ವಿದ್ಯಾಕೇಂದ್ರದ ವಿದ್ಯಾರ್ಥಿಗಳ ಸಾಧನೆ

​ಪ್ರಜಾವಾಣಿ ವಾರ್ತೆ
Published 29 ಜೂನ್ 2024, 6:43 IST
Last Updated 29 ಜೂನ್ 2024, 6:43 IST
ಕೊಳ್ಳೇಗಾಲದ ವಾಸವಿ ವಿದ್ಯಾಕೇಂದ್ರದ ಬ್ಯಾಂಡ್‌ ತಂಡದ ವಿದ್ಯಾರ್ಥಿಗಳು
ಕೊಳ್ಳೇಗಾಲದ ವಾಸವಿ ವಿದ್ಯಾಕೇಂದ್ರದ ಬ್ಯಾಂಡ್‌ ತಂಡದ ವಿದ್ಯಾರ್ಥಿಗಳು   

ಕೊಳ್ಳೇಗಾಲ: ಈ ಶಾಲೆಯ ಮಕ್ಕಳು ಓದುವುದರಲ್ಲೂ ಮುಂದು, ಆಟೋಟ ಸ್ಪರ್ಧೆಗಳಲ್ಲೂ ಮುಂದು. ಮತ್ತೊಂದು ಹೆಜ್ಜೆ ಮುಂದೆ ಹೋಗಿ ಬ್ಯಾಂಡ್ ಬಾರಿಸುವುದಕ್ಕೂ ಸೈ ಎನಿಸಿಕೊಂಡಿದ್ದಾರೆ.

ನಗರದ ಶ್ರೀ ವಾಸವಿ ವಿದ್ಯಾಕೇಂದ್ರದ ವಿದ್ಯಾರ್ಥಿಗಳು ಈಚೆಗೆ ನಡೆದ ರಾಜ್ಯಮಟ್ಟದ ಬ್ಯಾಂಡ್ ನುಡಿಸುವ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

1981ರಲ್ಲಿ ಸ್ಥಾಪನೆಯಾದ ಶ್ರೀವಾಸವಿ ವಿದ್ಯಾಕೇಂದ್ರವು ಗುಣಮಟ್ಟದ ಶಿಕ್ಷಣದಿಂದ ತಾಲ್ಲೂಕಿನ ಪ್ರಸಿದ್ಧ ಶಿಕ್ಷಣ ಸಂಸ್ಥೆ ಎಂದು ಗುರುತಿಸಿಕೊಂಡಿದೆ. ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಮಾಧ್ಯಮದಲ್ಲಿ ಬೋಧನೆ ಮಾಡುತ್ತಿರುವ ಶಾಲೆ ಪ್ರೌಢಶಾಲೆ, ಪಿಯುಸಿ ಹಾಗೂ ಪದವಿ ಶಿಕ್ಷಣವನ್ನು ಹೊಂದಿದ್ದು 2,500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಓದುತ್ತಿದ್ದಾರೆ.

ADVERTISEMENT

ಈ ಶಾಲೆಯ ವಿದ್ಯಾರ್ಥಿಗಳು ಓದು, ಕ್ರೀಡೆಯ ಜತೆಗೆ ಇತರ ಚಟುವಟಿಕೆಗಳಲ್ಲೂ ಮುಂದಿದ್ದು ಬ್ಯಾಂಡ್ ಬಾರಿಸುವುದರಲ್ಲಿ ನಿಷ್ಣಾತರು. ಶಾಲೆಯ ಪ್ರೌಢಶಾಲಾ ವಿದ್ಯಾರ್ಥಿಗಳು ಅತ್ಯಂತ ಸುಶ್ರಾವ್ಯವಾಗಿ ಲಯಬದ್ಧವಾಗಿ ಬ್ಯಾಂಡ್ ಬಾರಿಸುತ್ತ ಎಲ್ಲರ ಗಮನ ಸೆಳೆದಿದ್ದಾರೆ.

ಆಕರ್ಷಕ ಪಥ ಸಂಚಲನ ಬ್ಯಾಂಡ್ ಜೊತೆ ನೃತ್ಯ:

ಮಕ್ಕಳಿಗೆ ಇಲ್ಲಿ ಓದಿನ ಜತೆಗೆ ಅವರ ಆಸಕ್ತಿಗೆ ಅನುಗುಣವಾದ ಚಟುವಟಿಕೆಗಳಲ್ಲಿ ಭಾಗವಹಿಸಲು ಅವಕಾಶ ನೀಡಲಾಗುತ್ತದೆ. ವಿಶೇಷವಾಗಿ ಬ್ಯಾಂಡ್, ಕೊಳಲು ನುಡಿಸಲು ಆದ್ಯತೆ ನೀಡಲಾಗಿದೆ. ಇದಕ್ಕಾಗಿ ವಿಶೇಷ ತರಬೇತಿಯನ್ನೂ ಕೊಡಲಾಗುತ್ತಿದೆ.

ಶಾಲೆಯ ಬಹುತೇಕ ಮಕ್ಕಳು ಒಂದಲ್ಲ ಒಂದು ಬಾರಿ ಬ್ಯಾಂಡ್ ಬಾರಿಸಿ ಕೊಳಲು ನುಡಿಸಿದವರೇ ಆಗಿದ್ದಾರೆ ಎನ್ನುತ್ತಾರೆ ಶಿಕ್ಷಕರು. ಬ್ಯಾಂಡ್ ತಂಡದಲ್ಲಿ 60 ವಿದ್ಯಾರ್ಥಿಗಳಿದ್ದು ತಲಾ 30 ಮಂದಿ ಬಾಲಕ ಬಾಲಕಿಯರು ಇದ್ದಾರೆ. ಎರಡು ಬ್ಯಾಂಡ್ ತಂಡಗಳು ಶಾಲೆಯಲ್ಲಿರುವುದು ವಿಶೇಷವಾಗಿದೆ.

ಬ್ಯಾಂಡ್ ಹಾಗೂ ಕೊಳಲಿನ ಸದ್ದಿಗೆ ಶಾಲಾ ಮಕ್ಕಳು ಹೆಜ್ಜೆ ಹಾಕುತ್ತಾರೆ. ಪಥಸಂಚಲನ ಹಾಗೂ ಕೊಳಲು ನುಡಿಸುವುದರ ಜತೆಗೆ ನೃತ್ಯವನ್ನೂ ಮಾಡುವುದು ತಂಡದ ವೈಶಿಷ್ಟ್ಯ. ಮಾರಿಕುಣಿತ, ಡೊಳ್ಳು ಕುಣಿತ, ಇಟಾಲಿಯನ್‌ ನೃತ್ಯ ಸೇರಿದಂತೆ ಹತ್ತಕ್ಕೂ ಹೆಚ್ಚು ನೃತ್ಯಗಳನ್ನು ಶಾಲೆಗಳಲ್ಲಿ ಪ್ರದರ್ಶಿಸಲಾಗುತ್ತದೆ. ಹಲವು ಜಿಲ್ಲೆಗಳಲ್ಲಿ ಶಾಲೆಯ ವಿದ್ಯಾರ್ಥಿಗಳು ಪ್ರದರ್ಶನ ನೀಡಿ ಗಮನ ಸೆಳೆದಿದ್ದಾರೆ ಎನ್ನುತ್ತಾರೆ ಕ್ರೀಡಾ ಶಿಕ್ಷಕ ಎಂ.ಸುನೀಲ್.

ಶಾಲೆಯಲ್ಲಿ ನುರಿತ ಶಿಕ್ಷಕರು ಇದ್ದಾರೆ. ಗ್ರಂಥಾಲಯ , ಪ್ರಯೋಗಾಲಯ, ಕ್ರೀಡಾ ಕೊಠಡಿ, ಕಂಪ್ಯೂಟರ್ ಲ್ಯಾಬ್, ಆಟದ ಮೈದಾನ, ಶುದ್ಧ ಕುಡಿಯುವ ನೀರಿನ ಘಟಕ ಸೇರಿದಂತೆ ಮೂಲಸೌಕರ್ಯಗಳು ಇವೆ. ಜೊತೆಗೆ ಕೈತೋಟವನ್ನು ಸಹ ಮಾಡಲಾಗಿದ್ದು ಗುಲಾಬಿ, ಚೆಂಡು ಹೂ ಸೇರಿದಂತೆ ವಿವಿಧ ಜಾತಿಯ ಗಿಡಗಳನ್ನು ಬೆಳೆಸಿದ್ದಾರೆ.

ದಕ್ಷಿಣ ಭಾರತ ಬ್ಯಾಂಡ್ ಸ್ಪರ್ಧೆಗೆ ಆಯ್ಕೆ:

ಶಾಲೆಯಲ್ಲಿ ಬಾಲಕಿಯರ ಬ್ಯಾಂಡ್ ಹಾಗೂ ಬಾಲಕರ ಬ್ಯಾಂಡ್ ಇದ್ದು ಎರಡು ತಂಡಗಳು ರಾಜ್ಯಮಟ್ಟದಲ್ಲಿ ಪ್ರಶಸ್ತಿ ಪಡೆದಿವೆ. ಬಾಲಕರ ತಂಡ ಪ್ರಥಮ ಸ್ಥಾನ ಪಡೆದರೆ, ಬಾಲಕಿಯರ ತಂಡ ದ್ವಿತೀಯ ಸ್ಥಾನ ಗಳಿಸಿದೆ.

ಬ್ಯಾಂಡ್ ಕಲಿಯುವ ಆಸಕ್ತಿ ಇರುವ ವಿದ್ಯಾರ್ಥಿಗಳಿಗೆ ನಿತ್ಯವೂ ಶಾಲಾ ಸಮಯ ಮುಕ್ತಾಯವಾದ ಬಳಿಕ 30 ನಿಮಿಷ ತರಬೇತಿ ನೀಡಲಾಗುತ್ತದೆ. ಭಾನುವಾರ ಸೇರಿದಂತೆ ರಜಾ ದಿನಗಳಲ್ಲೂ ತರಬೇತಿ ನೀಡಲಾಗುತ್ತದೆ ಎನ್ನುತ್ತಾರೆ ಶಿಕ್ಷಕ ಸುನಿಲ್.

ಕೊಳ್ಳೇಗಾಲದ ವಾಸವಿ ವಿದ್ಯಾಕೇಂದ್ರದ ಕೊಡಲು ತಂಡದ ವಿದ್ಯಾರ್ಥಿನಿಯರು
ದಕ್ಷಿಣ ಭಾರತ ಮಟ್ಟದ ಸ್ಪರ್ಧೆಯಲ್ಲಿ ವಾಸವಿ ವಿದ್ಯಾಕೇಂದ್ರದ ಮಕ್ಕಳು ಸ್ಪರ್ಧಿಸಿ ವಿಜೇತರಾಗಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಬೇಕು ಎಂಬ ಗುರಿ ಹೊಂದಿದ್ದು ಪೂರಕವಾಗಿ ತಯಾರಿ ಮಾಡಿಕೊಳ್ಳಲಾಗುತ್ತಿದೆ.
–ಸುನೀಲ್ ಕ್ರೀಡಾ ಶಿಕ್ಷಕ
‘ತರಬೇತಿ ಶುಲ್ಕ ಪಡೆಯುವುದಿಲ್ಲ’
ಯಾವ ಮಕ್ಕಳಿಂದಲೂ ತರಬೇತಿಗೆ ಶುಲ್ಕವನ್ನು ಪಡೆಯುವುದಿಲ್ಲ. ಬ್ಯಾಂಡ್ ಸೆಟ್‌ಗಳನ್ನು ಶಾಲಾ ಆಡಳಿತ ಮಂಡಳಿ ನೀಡಿದ್ದು ರಾಷ್ಟ್ರೀಯ ಹಬ್ಬಗಳು ಸೇರಿದಂತೆ ಶಾಲಾ ಕಾಲೇಜುಗಳಲ್ಲಿ ನಡೆಯುವ ವಿಶೇಷ ದಿನಗಳಲ್ಲಿ ಮಕ್ಕಳು ಆಕರ್ಷಕವಾಗಿ ಸಮವಸ್ತ್ರ ಧರಿಸಿ ಬ್ಯಾಂಡ್‌ ಬಾರಿಸಿ  ನೃತ್ಯ ಮಾಡುತ್ತಾರೆ. ಮಕ್ಕಳ ಶಿಸ್ತುಬದ್ಧ ಪ್ರದರ್ಶನ ಬ್ರಿಟಿಷ್ ಬ್ಯಾಂಡ್ ನೆನಪಿಸುತ್ತದೆ. ಮಕ್ಕಳ ಸಾಧನೆಯ ಹಿಂದೆ ಸಂಸ್ಥೆ 6 ಮಂದಿ ಕ್ರೀಡಾ ಶಿಕ್ಷಕರ ಸಹಕಾರ ಇದೆ ಎನ್ನುತ್ತಾರೆ ಶಾಲಾ ಮುಖ್ಯ ಶಿಕ್ಷಕಿ ಗೀತಾ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.