ADVERTISEMENT

ಕಾಡುಗಳ್ಳ ವೀರಪ್ಪನ್‌ ಸಹಚರ ಜ್ಞಾನಪ್ರಕಾಶ್‌ ನಿಧನ

ಕಳೆದ ಡಿಸೆಂಬರ್‌ 20ರಂದು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2023, 16:01 IST
Last Updated 15 ಡಿಸೆಂಬರ್ 2023, 16:01 IST
<div class="paragraphs"><p>ಜ್ಞಾನಪ್ರಕಾಶ್‌ </p></div>

ಜ್ಞಾನಪ್ರಕಾಶ್‌

   

ಹನೂರು (ಚಾಮರಾಜನಗರ): ಕಾಡುಗಳ್ಳ ವೀರಪ್ಪನ್‌ ಸಹಚರರಾಗಿದ್ದ, ಪಾಲಾರ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿ ಅನಾರೋಗ್ಯದ ಕಾರಣಕ್ಕೆ ಕಳೆದ ವರ್ಷದ ಡಿಸೆಂಬರ್‌ 20ರಂದು ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆಯಾಗಿದ್ದ ಜ್ಞಾನಪ್ರಕಾಶ್ (69) ಶುಕ್ರವಾರ ಸ್ವಗ್ರಾಮ ತಾಲ್ಲೂಕಿನ ಸಂದನಪಾಳ್ಯದಲ್ಲಿ ನಿಧನರಾದರು.

1993ರ ಪಾಲಾರ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ವೀರಪ್ಪನ್, ಸೈಮನ್, ಬಿಲವೇಂದ್ರನ್ , ಮೀಸೆಕಾರ ಮಾದಯ್ಯ ಜತೆಗೆ ಜ್ಞಾನಪ್ರಕಾಶ್ ಭಾಗಿಯಾಗಿದ್ದರು ಎಂದು ಮೈಸೂರಿನ ಟಾಡಾ ನ್ಯಾಯಾಲಯ 1997ರಲ್ಲಿ ಗಲ್ಲು ಶಿಕ್ಷೆ ವಿಧಿಸಿತ್ತು.

ADVERTISEMENT

2014ರಲ್ಲಿ ಸುಪ್ರಿಂ ಕೋರ್ಟ್, ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಗೆ ಪರಿವರ್ತಿಸಿ ತೀರ್ಪು ನೀಡಿತ್ತು. 

ಬೆಳಗಾವಿಯ ಹಿಂಡಲಗಾ ಹಾಗೂ ಮೈಸೂರು ಕಾರಾಗೃಹದಲ್ಲಿ 29 ವರ್ಷಗಳ ಜೈಲು ಶಿಕ್ಷೆ ಅನುಭವಿಸಿದ್ದ ಜ್ಞಾನಪ್ರಕಾಶ್‌ಗೆ ಮೂರು ವರ್ಷಗಳ ಹಿಂದೆ ಶ್ವಾಸಕೋಶ ಕ್ಯಾನ್ಸರ್‌ ಪತ್ತೆಯಾಗಿತ್ತು. ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರಿಗೆ ಮಾನವೀಯತೆ ಆಧಾರದ ಮೇಲೆ ಸುಪ್ರೀಂ ಕೋರ್ಟ್‌ 2022ರ ನ.26ರಂದು ಜಾಮೀನು ಮಂಜೂರು ಮಾಡಿತ್ತು. ಮೈಸೂರಿನ ಕಾರಾಗೃಹದಿಂದ 2022ರ ಡಿ.20ರಂದು ಬಿಡುಗಡೆಯಾಗಿದ್ದ ಅವರು ಸಂದನಪಾಳ್ಯದಲ್ಲಿ ವಾಸವಿದ್ದರು. 

ಅನಾರೋಗ್ಯದಿಂದ ಚೇತರಿಸಿಕೊಳ್ಳದ ಜ್ಞಾನಪ್ರಕಾಶ್, ಶುಕ್ರವಾರ ರಾತ್ರಿ 8ರ ಸುಮಾರಿಗೆ ಮನೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರಿಗೆ ಪತ್ನಿ, ಮಗ ಹಾಗೂ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.

ಶನಿವಾರ ಸಂದನಪಾಳ್ಯದಲ್ಲಿ ಕ್ರಿಶ್ಚಿಯನ್‌ ಸಂಪ್ರದಾಯದಂತೆ ಅಂತ್ಯ ಸಂಸ್ಕಾರ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.