ADVERTISEMENT

ನೇಹಾ ಕೊಲೆ: ವೀರಶೈವಲಿಂಗಾಯತರ ಪ್ರತಿಭಟನೆ ನಾಳೆ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2024, 4:47 IST
Last Updated 23 ಏಪ್ರಿಲ್ 2024, 4:47 IST
ಮೂಡ್ಲುಪುರ ನಂದೀಶ್‌
ಮೂಡ್ಲುಪುರ ನಂದೀಶ್‌   

ಪ್ರಜಾವಾಣಿ ವಾರ್ತೆ

ಚಾಮರಾಜನಗರ: ಹುಬ್ಬಳ್ಳಿಯಲ್ಲಿ ವಿದ್ಯಾರ್ಥಿನಿ ನೇಹಾ ಹೀರೇಮಠ ಕೊಲೆ ಖಂಡಿಸಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ, ಜಾಗತಿಕ ಲಿಂಗಾಯತ ಮಹಾಸಭಾ ಸೇರಿದಂತೆ ವಿವಿಧ ವೀರಶೈವ ಲಿಂಗಾಯತ ಸಂಘಟನೆಗಳು ಬುಧವಾರ (ಏ.24) ನಗರದಲ್ಲಿ ಪ್ರತಿಭಟನೆ ನಡೆಸಲಿವೆ. 

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾ ಅಧ್ಯಕ್ಷ ಮೂಡ್ಲುಪುರ ನಂದೀಶ್‌ ಮಾತನಾಡಿ, ‘ಸಮುದಾಯದ ಸಂಘ ಸಂಸ್ಥೆಗಳು ಒಟ್ಟಾಗಿ ಸೇರಿ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ. ಸಮಾಜದ ವಿದ್ಯಾರ್ಥಿನಿಯನ್ನು ಅಮಾನುಶವಾಗಿ ಹತ್ಯೆ ಮಾಡಿದ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಿ, ಕುಟುಂಬಕ್ಕೆ ನ್ಯಾಯಕೊಡಿಸಬೇಕು ಎಂದು ಒತ್ತಾಯಿಸಲು ಹೋರಾಟ ಆಯೋಜಿಸಿದ್ದೇವೆ. ಬುಧವಾರ ಬೆಳಿಗ್ಗೆ 11 ಗಂಟೆಗೆ ಚಾಮರಾಜೇಶ್ವರಸ್ವಾಮಿ ದೇವಾಲಯದಿಂದ ಜಿಲ್ಲಾಡಳಿತ ಭವನದವರೆಗೂ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡಿದ್ದೇವೆ’ ಎಂದರು. 

ADVERTISEMENT

ಜಾಗತಿಕ ಲಿಂಗಾಯತ ಮಹಾಸಭಾದ ಪ್ರಭುಸ್ವಾಮಿ ಮಾತನಾಡಿ, ‘ಇದು ಅತ್ಯಂತ ಕ್ರೂರವಾದ ಹತ್ಯೆ. ರಾಜ್ಯ ಕಂಡು ಕೇಳರಿಯದ ಪ್ರಕರಣ. ನೇಹಾ ಕುಟುಂಬಕ್ಕೆ ಸಾಂತ್ವನ ಹೇಳುವ ಕೆಲಸವನ್ನು ಸರ್ಕಾರ ಮಾಡಿಲ್ಲ. ಅದರ ಬದಲು. ಈ ಘಟನೆ ಆಕಸ್ಮಿಕ, ವೈಯಕ್ತಿಕ ಎಂದು ಹೇಳುತ್ತಿದ್ದಾರೆ. ಆದರೆ, ಇವೆರಡೂ ಅಲ್ಲ. ಜಿಹಾದಿ ಮನಃಸ್ಥಿತಿಯ ವ್ಯಕ್ತಿ ಮಾಡಿರುವ ಕೃತ್ಯ ಅತ್ಯಂತ ಖಂಡನೀಯ. ಕುಟುಂಬಕ್ಕೆ ಧೈರ್ಯ ತುಂಬುವ ಉದ್ದೇಶದಿಂದ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ. 10 ಸಾವಿರ ಜನರು ಭಾಗವಹಿಸಲಿದ್ದಾರೆ’ ಎಂದರು.  

ಮುಖಂಡ ಕೋಡಿಮೋಳೆ ರಾಜಶೇಖರ್‌ ಮಾತನಾಡಿದರು. ಜಿಲ್ಲಾ ಬಸವ ಕೇಂದ್ರದ ಅಧ್ಯಕ್ಷ ಎನ್‌ರಿಚ್‌ ಮಹದೇವಸ್ವಾಮಿ, ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ವಸಂತಮ್ಮ, ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಗುರುಸ್ವಾಮಿ, ಜಾಗತಿಕ ಲಿಂಗಾಯತ ಮಹಾಸಭಾದ ಶಿವಪ್ರಸಾದ್, ಅಖಿಲ ಭಾರತ ವೀರಶೈವ ಮಹಾಸಭಾದ ಚಾಮರಾಜನಗರ ತಾಲ್ಲೂಕು ಅಧ್ಯಕ್ಷ ನಟೇಶ್ ಇದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.