ಚಾಮರಾಜನಗರ: ಹಿಂದಿನ ಬಿಜೆಪಿ ಸರ್ಕಾರ ಜಾರಿಗೊಳಿಸಿದ್ದ ಮತಾಂತರ ನಿಷೇಧ ಕಾಯ್ದೆಯನ್ನು ವಾಪಸ್ ಪಡೆಯುವ ಕಾಂಗ್ರೆಸ್ ಸರ್ಕಾರದ ತೀರ್ಮಾನವನ್ನು ಖಂಡಿಸಿ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ಕಾರ್ಯಕರ್ತರು ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.
ಚಾಮರಾಜೇಶ್ವರ ಸ್ವಾಮಿ ದೇವಾಲಯದಿಂದ ಜಿಲ್ಲಾಡಳಿತ ಭವನದವರೆಗೆ ಮೆರವಣಿಗೆ ನಡೆಸಿದ ಪ್ರತಿಭಟನಕಾರರು, ರಾಜ್ಯ ಕಾಂಗ್ರೆಸ್ ಸರ್ಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಘೋಷಣೆ ಕೂಗಿದರು.
ವಿಶ್ವ ಹಿಂದೂಪರಿಷತ್ತಿನ ಜಿಲ್ಲಾ ಕಾರ್ಯದರ್ಶಿ ಮಧು ಮಾತನಾಡಿ, ‘ಹಿಂದೂಗಳು ನಿದ್ದೆಯಲ್ಲಿದ್ದ ಪರಿಣಾಮ ರಾಜ್ಯದಲ್ಲಿ ಹಿಂದೂ ವಿರೋಧಿ ಸರ್ಕಾರ ಅಧಿಕಾರಕ್ಕೆ ಬಂದಿದೆ. ಹಿಂದೂ ಧರ್ಮವನ್ನು ಹಾಳು ಮಾಡುವುದೇ ಅವರ ಮೊದಲ ಕಾರ್ಯಸೂಚಿ. ಹಿಂದೂ ವಿರೋಧಿಗಳ ಮತಗಳನ್ನು ಕ್ರೋಡೀಕರಣ ಮಾಡುವ ಉದ್ದೇಶದಿಂದ ಹಿಂದೂ ವಿರೋಧಿ, ಧರ್ಮ ವಿರೋಧಿ ನಿಲುವುಗಳನ್ನು ತಾಳುತ್ತಿದೆ. ಅಧಿಕಾರಕ್ಕೆ ಬಂದ 20 ದಿನಗಳಲ್ಲೇ ಇದು ಸ್ಪಷ್ಟವಾಗಿದೆ’ ಎಂದು ದೂರಿದರು.
ವಿಶ್ವ ಹಿಂದೂ ಪರಿಷತ್ತಿನ ಮೈಸೂರು ವಿಭಾಗದ ಸಹ ಕಾರ್ಯದರ್ಶಿ ರಾ.ಸತೀಶ್ ಕುಮಾರ್ ಮಾತನಾಡಿ, ‘ಗ್ಯಾರಂಟಿ ಯೋಜನೆಗಳ ಮೂಲಕ ಅಧಿಕಾರಕ್ಕೆ ಬಂದಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಬಡವರಿಗೆ, ಅಸಹಾಯಕರಿಗೆ ಗ್ಯಾರಂಟಿ ನೀಡಿದರೆ ನಾವೂ ಅದನ್ನು ಬೆಂಬಲಿಸುತ್ತೇವೆ. ಜನರ ಕಣ್ಣಿಗೆ ಮಂಕು ಬೂದಿ ಎರಚಿಸುವ ಉದ್ದೇಶದಿಂದ ಗ್ಯಾರಂಟಿ ಯೋಜನೆಗಳನ್ನು ಪ್ರಸ್ತಾಪಿಸಿ ತನ್ನ ರಹಸ್ಯ ಕಾರ್ಯಸೂಚಿಯನ್ನು ಜಾರಿಗೊಳಿಸಲು ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ರಾಜ್ಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಲು ಹೊರಟಿದೆ’ ಎಂದು ದೂರಿದರು.
‘ಹಿಂದಿನ ಬಿಜೆಪಿ ಸರ್ಕಾರ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತಂದಿತ್ತು. ಸಿದ್ದರಾಮಯ್ಯ ಸರ್ಕಾರ ಅದನ್ನು ವಾಪಸ್ ಪಡೆಯಲು ನಿರ್ಧರಿಸಿದೆ. ಈ ಕಾಯ್ದೆ ವಾಪಸ್ ಪಡೆದರೆ ಅದು ಸಂವಿಧಾನಕ್ಕೆ ಅಪಚಾರ ಮಾಡಿದಂತೆ. ನಮ್ಮದು ಜಾತ್ಯತೀತ ರಾಷ್ಟ್ರ ಇಲ್ಲಿ ಎಲ್ಲರಿಗೂ ಅವರದ್ದೇ ಆದ ಧರ್ಮವನ್ನು ಅನುಸರಿಸುವ ಹಕ್ಕು ಇದೆ. ಆದರೆ, ಚಾಮರಾಜನಗರ ಸೇರಿದಂತೆ ರಾಜ್ಯದಾದ್ಯಂತ ಕ್ರಿಶ್ಚಿಯನ್ ಚರ್ಚುಗಳು, ಮಿಶನರಿಗಳು ಹಿಂದೂ ಧರ್ಮವನ್ನು ಅವಹೇಳನ ಮಾಡಿ ಬಲವಂತವಾಗಿ ಮತಾಂತರದಲ್ಲಿ ತೊಡಗಿವೆ. ಅಂತಹವರಿಗೆ ಸಿದ್ದರಾಮಯ್ಯ ಸರ್ಕಾರ ಪ್ರೋತ್ಸಾಹ ನೀಡುತ್ತಿದೆ. ಇದು ಹಿಂದೂ ವಿರೋಧಿ ಸರ್ಕಾರ’ ಎಂದು ಸತೀಶ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.
‘ಪಠ್ಯಪುಸ್ತಕವನ್ನು ಮತ್ತೆ ಪರಿಷ್ಕರಿಸಿರುವುದಾಗಿ ಸರ್ಕಾರ ಹೇಳುತ್ತಿದೆ. ವೀರ ಸ್ವಾತಂತ್ರ್ಯ ಹೋರಾಟಗಾರ ಸಾವರ್ಕರ್ ಅವರನ್ನು ಗುಲಾಮ ಎಂದು ಕಾಂಗ್ರೆಸ್‌ನವರು ಹೇಳುತ್ತಿದ್ದಾರೆ. ಟಿಪ್ಪು ಸುಲ್ತಾನನನ್ನು ಮತ್ತೆ ಪಠ್ಯಕ್ಕೆ ಸೇರ್ಪಡೆಗೊಳಿಸಲು ಹೊರಟಿದ್ದಾರೆ’ ಎಂದು ದೂರಿದರು.
ಮತಾಂತರ ನಿಷೇಧ ಕಾಯ್ದೆಯನ್ನು ವಾಪಸ್ ಪಡೆಯುವ ನಿರ್ಧಾರವನ್ನು ಕೈಬಿಡಬೇಕು ಎಂದು ಆಗ್ರಹಿಸಿ ಜಿಲ್ಲಾಡಳಿತದ ಮೂಲಕ ರಾಜ್ಯಪಾಲರಿಗೆ ಪ್ರತಿಭಟನಕಾರರು ಮನವಿ ಸಲ್ಲಿಸಿದರು.
ಮುಖಂಡರಾದ ವಾಸುದೇವರಾವ್, ಬಾಲಸುಬ್ರಹ್ಮಣ್ಯ, ಶಂಕರ್, ಎಂ.ರಮೇಶ್‌ನಾಯಕ, ಎಂ.ವೀರಣ್ಣ, ನೂತನ್, ಸಂಜಯ್, ಕುಮಾರ, ಸುರೇಶ್, ಪಾಂಡು, ರಾಜೇಶ್, ರವಿಕುಮಾರ, ಅಭಿ, ಸೋಮಣ್ಣ ಇತರರು ಇದ್ದರು.
‘ಹಿಂದಿನ ಅವಧಿಯಲ್ಲೂ ನಿರಂತರ ದಾಳಿ’
‘ಐದು ವರ್ಷಗಳ ಹಿಂದೆ ಸಿದ್ದರಾಮಯ್ಯ ಸರ್ಕಾರ ಅಧಿಕಾರದಲ್ಲಿದ್ದಾಗ ಹಿಂದೂ ಧರ್ಮದ ಮೇಲೆ ನಿರಂತರ ದಾಳಿಗಳಾಗಿತ್ತು. ಈ ದೇಶದ ಮೂಲಮಂತ್ರ ಮೂಲಸತ್ವ ಹಿಂದುತ್ವದ ಮೇಲೆ ದಾಳಿಯಾಗಿತ್ತು. ನಮ್ಮ ಕಾರ್ಯಕರ್ತರು ಕೊಲೆಯಾಗಿದ್ದರು. ಸಮಾಜದ್ರೋಹಿಗಳಿಗೆ ಕುಮ್ಮಕ್ಕು ನೀಡುವ ಕೆಲಸ ನಡೆದಿತ್ತು. ಈ ಬಾರಿ ಕಾಂಗ್ರೆಸ್‌ಗೆ ಎಲ್ಲ ಸಮುದಾಯದವರೂ ಮತ ಹಾಕಿ ಗೆಲ್ಲಿಸಿದ್ದರು. ಆದರೆ ಚುನಾವಣೆ ಫಲಿತಾಂಶ ಬಂದಾಗ ಸಂಭ್ರಮಿಸಿದವರು ಯಾರು? ಬೀದಿ ಬಂದಿದ್ದು ಯಾರು? ಜನರ ಭಾವನೆಗಳನ್ನು ಕೆರಳಿಸುವ ಕೆಲಸ ಮಾಡಿದ್ದು ಯಾರು? ಕೆಲವರ ಮನೆಗಳಿಗೆ ಕಲ್ಲನ್ನೂ ಎಸೆದಿದ್ದರು. ಅವರ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಬೇಕಿತ್ತು. ಆದರೆ ಎಲ್ಲ ಕಡೆಗಳಲ್ಲೂ ಈ ಕೆಲಸ ಮಾಡಿಲ್ಲ’ ಎಂದು ಸತೀಶ್ ಕುಮಾರ್ ಆರೋಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.