ಚಾಮರಾಜನಗರ: ನಗರದಿಂದ ತಮಿಳುನಾಡಿನ ಸತ್ಯಮಂಗಲಕ್ಕೆ ಹೋಗುವ ರಾಷ್ಟ್ರೀಯ ಹೆದ್ದಾರಿಯ ಹಾಸನೂರು ಬಳಿ ಎರಡು ಆನೆಗಳು ವಾಹನಗಳ ಮೇಲೆ ದಾಳಿ ಮಾಡಲು ಯತ್ನಿಸಿದ ಘಟನೆ ಶುಕ್ರವಾರ ನಡೆದಿದೆ.
ಮರಿಯಾನೆಯೊಂದಿಗಿದ್ದ ಎರಡು ಹೆಣ್ಣಾನೆಗಳು ವಾಹನಗಳ ಮೇಲೆ ಎರಗಲು ಯತ್ನಿಸಿವೆ. ಅದೃಷ್ಟವಶಾತ್ ಪ್ರಾಣ ಹಾನಿ ಸಂಭವಿಸಿಲ್ಲ. ಒಂದು ಕಾರಿಗೆ ಸ್ವಲ್ಪ ಹಾನಿಯಾಗಿದೆ.
ಶುಕ್ರವಾರ ಮಧ್ಯಾಹ್ನದ ಸಮಯದಲ್ಲಿ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದ್ದು, ಬಸ್ ನಲ್ಲಿದ್ದವರೊಬ್ಬರು ಘಟನೆಯನ್ನು ಸೆರೆ ಹಿಡಿದಿದ್ದು ವಿಡಿಯೊ ವೈರಲ್ ಆಗಿದೆ.
ಮರಿಯೊಂದಿಗೆ ರಸ್ತೆಯಲ್ಲಿ ಬರುತ್ತಿದ್ದ ಆನೆಗಳು ಬೊಲೆರೊ ಹಾಗೂ ಕಾರೊಂದರ ಮೇಲೆ ದಾಳಿಗೆ ಮುಂದಾಗುವ ದೃಶ್ಯ ಇದೆ. ಕಾರಿಗೆ ಕೊಂಚ ಹಾನಿ ಮಾಡಿವೆ. ಕಾರಿನ ಹಿಂಬದಿಯಿಂದ ವ್ಯಕ್ತಿಯೊಬ್ಬರು ಹೊರ ಬರುತ್ತಿರುವ ದೃಶ್ಯವೂ ವಿಡಿಯೊದಲ್ಲಿದೆ.
ಸತ್ಯಮಂಗಲಕ್ಕೆ ಹೋಗುವ ಹೆದ್ದಾರಿಯಲ್ಲಿ ಕರ್ನಾಟಕದ ಗಡಿ ದಾಟಿದ ಬಳಿಕ ಸಿಗುವ ತಮಿಳುನಾಡಿನ ಹಾಸನೂರಿನ ಚೆಕ್ ಪೋಸ್ಟ್‌ನಲ್ಲಿ ಈ ಘಟನೆ ನಡೆದಿದೆ.
ಈ ಘಟನೆಯಿಂದಾಗಿ ಅರ್ಧ ಗಂಟೆಗೂ ಹೆಚ್ಚು ಕಾಲ ವಾಹನ ಸಂಚಾರಕ್ಕೆ ತೊಂದರೆಯಾಯಿತು.
ಮರಿಯಾನೆ ಜೊತೆಗಿದ್ದುದರಿಂದ ಆನೆಗಳು ದಾಳಿಗೆ ಯತ್ನಿಸಿರಬಹುದು ಎಂದು ಹೇಳಲಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.