ADVERTISEMENT

ನೀರಿನ ಅಭಾವ: ಕೊಳ್ಳೇಗಾಲದಲ್ಲಿ ಕೊರೆವ ಯಂತ್ರದ್ದೇ ಸದ್ದು

ಅವಿನ್ ಪ್ರಕಾಶ್
Published 6 ಮಾರ್ಚ್ 2024, 5:26 IST
Last Updated 6 ಮಾರ್ಚ್ 2024, 5:26 IST
<div class="paragraphs"><p>ಕೊಳ್ಳೇಗಾಲದ ಬಡಾವಣೆಯೊಂದರಲ್ಲಿ ಕೊಳವೆಬಾವಿ ಕೊರೆದಿರುವುದು</p></div>

ಕೊಳ್ಳೇಗಾಲದ ಬಡಾವಣೆಯೊಂದರಲ್ಲಿ ಕೊಳವೆಬಾವಿ ಕೊರೆದಿರುವುದು

   

ಕೊಳ್ಳೇಗಾಲ: ಬಿರು ಬೇಸಿಗೆಯಲ್ಲಿ ನಗರದಲ್ಲೂ ನಿಧಾನವಾಗಿ ನೀರಿನ ಅಭಾವ ಉಂಟಾಗುತ್ತಿದ್ದು, ನಿವಾಸಿಗಳು ಕೊಳವೆ ಬಾವಿಗಳನ್ನು ಕೊರೆಯಿಸುತ್ತಿದ್ದಾರೆ. 

ನಗರ ವ್ಯಾಪ್ತಿಯಲ್ಲಿ ಒಂದಿಲ್ಲೊಂದು ಒಂದು ಕಡೆ ಪ್ರತಿ ದಿನ ಕೊಳವೆ ಬಾವಿ ಕೊರೆಯುವ ಯಂತ್ರಗಳ ಸದ್ದು ಕೇಳಿಸುತ್ತಿದೆ. ಜನರು ಪೈಪೋಟಿಗೆ ಬಿದ್ದವರಂತೆ ಕೊಳವೆಬಾವಿಗಳನ್ನು ಕೊರೆಯಿಸುತ್ತಿದ್ದು, ಅನುಮತಿಯನ್ನೂ ಪಡೆಯುತ್ತಿಲ್ಲ. ಅಧಿಕಾರಿಗಳು ಕೂಡ ಈ ಬಗ್ಗೆ ಮೌನವಾಗಿದ್ದಾರೆ. 

ADVERTISEMENT

ಹೊಸ ಕೊಳವೆಬಾವಿಗೆ ಅನುಮತಿ ಪಡೆಯುವುದು ಕಡ್ಡಾಯ. ಆದರೆ, ಕೆಲವರು ತಮಗೆ ಇಷ್ಟ ಬಂದಂತೆ ಕೊರೆಸುತ್ತಿದ್ದಾರೆ ಎಂದು ಪರಿಸರ ಪ್ರೇಮಿಗಳು ದೂರಿದ್ದಾರೆ. ಕೊಳ್ಳೇಗಾಲ ನಗರಸಭೆ ವ್ಯಾಪ್ತಿಯಲ್ಲಿ 31 ವಾರ್ಡ್‌ಗಳಿವೆ. ನಗರದ ವ್ಯಾಪ್ತಿ ವಿಸ್ತಾರವಾಗುತ್ತಿದೆ. ಜನಸಂಖ್ಯೆಯೂ ಹೆಚ್ಚುತ್ತಿದೆ. ಹೊಸ ಬಡಾವಣೆಗಳು ನಿರ್ಮಾಣವಾಗುತ್ತಿದೆ. ಬಡಾವಣೆಗಳಲ್ಲಿ ನೀರಿನ ಸಂಪರ್ಕ ಸೇರಿದಂತೆ ಸೌಕರ್ಯಗಳ ಕೊರತೆ ಇದೆ. ಹಾಗಾಗಿ, ಬಡಾವಣೆಗಳಲ್ಲಿ ಮನೆ ನಿರ್ಮಿಸುವವರು ನೀರಿಗಾಗಿ ಕೊಳವೆ ಬಾವಿಗಳನ್ನು ಅವಲಂಬಿಸುವುದು ಅನಿವಾರ್ಯವಾಗಿದೆ. ಹಾಗಾಗಿ, ಪ್ರತಿ ಹೊಸ ಬಡಾವಣೆಯಲ್ಲೂ ನಿವಾಸಿಗಳು ಕೊಳವೆ ಬಾವಿ ಕೊರೆಯಿಸುತ್ತಿದ್ದಾರೆ. ಕಾವೇರಿ ನೀರು ಪೂರೈಕೆಯಾಗುವ ಪ್ರದೇಶಗಳಲ್ಲೂ ಕೊಳವೆ ಬಾವಿ ಕೊರೆಸಲಾಗುತ್ತಿದೆ. 

‘ಮಳೆ ಕೊರತೆ ಯಿಂದಾಗಿ ಅಂತರ್ಜಲ ಮಟ್ಟ ಇಳಿಯುತ್ತಿದೆ. ಹಾಗಿದ್ದರೂ, ಜನರು ನೀರನ್ನು ವ್ಯರ್ಥ ಮಾಡುವುದು ನಿಲ್ಲಿಸಿಲ್ಲ. ಅಗತ್ಯ ಇಲ್ಲದವರೂ ಕೂಡ, ಮುಂದೆ ನೀರಿನ ಕೊರತೆ ಉಂಟಾದರೆ ಎಂಬ ಯೋಚನೆಯಿಂದ ಕೊಳವೆ ಬಾವಿ ಕೊರೆಯಿಸುತ್ತಿದ್ದಾರೆ. ನಗರಸಭೆ ಅಧಿಕಾರಿಗಳು ಈ ಬಗ್ಗೆ ಗಮನಹರಿಸಬೇಕು’ ಎಂದು ಶಿವಕುಮಾರ ಸ್ವಾಮೀಜಿ ಬಡಾವಣೆಯ  ನಿವಾಸಿ ಬಸವರಾಜು ‘ಪ್ರಜಾವಾಣಿ’ಗೆ ತಿಳಿಸಿದರು.  ರಾತ್ರಿಯೂ ಸದ್ದು: ಮನೆ ನಿರ್ಮಿಸುವ ಉದ್ದೇಶದಿಂದ ಅನುಮತಿ ಪಡೆದು ಕೊಳವೆಬಾವಿ ಕೊರೆಯಿಸುವವರೂ ಇದ್ದಾರೆ. ಯಂತ್ರದ ನಿರ್ವಾಹಕರು ಹಗಲು–ರಾತ್ರಿ ಎನ್ನದೆ ಕೆಲಸ ಮಾಡುತ್ತಿದ್ದಾರೆ. ನಿಯಮದ ಪ್ರಕಾರ ರಾತ್ರಿ 10ರ ನಂತರ ಹೆಚ್ಚು ಸದ್ದು ಮಾಡುವ ಯಾವ ಕೆಲಸವನ್ನೂ ಮಾಡಬಾರದು. ಆದರೆ, ಕೊಳವೆ ಬಾವಿ ಯಂತ್ರದವರು ಇದರ ಬಗ್ಗೆ ಗಮನ ಹರಿಸುತ್ತಿಲ್ಲ. 

‘ಬಡಾವಣೆಗಳಲ್ಲಿ ಅಕ್ಕ ಪಕ್ಕದ ಮನೆಯವರು ರಾತ್ರಿ ಯಂತ್ರದ ಸದ್ದಿನ ನಡುವೆಯೇ ನಿದ್ದೆ ಮಾಡಬೇಕಾಗಿದೆ. ಪಿಯುಸಿ ಪರೀಕ್ಷೆ ನಡೆಯುತ್ತಿದೆ. ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆ ಶೀಘ್ರದಲ್ಲಿ ಆರಂಭವಾಗಲಿದೆ. ಮಕ್ಕಳು ರಾತ್ರಿ ಓದುತ್ತಿರುತ್ತಾರೆ. ಕೊಳವೆ ಬಾವಿ ಯಂತ್ರದ ಸದ್ದು ಅವರ ವಿದ್ಯಾಭ್ಯಾಸಕ್ಕೆ ತೊಂದರೆ ಉಂಟು ಮಾಡುತ್ತಿದೆ. ರಾತ್ರಿ ಯಂತ್ರದ ಕಾರ್ಯನಿರ್ವಹಣೆಗೆ ಅವಕಾಶ ನೀಡಬಾರದು’ ಎಂದು ಪೋಷಕರು ಒತ್ತಾಯಿಸಿದರು. 

‘ಅನುಮತಿ ಕಡ್ಡಾಯ’

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ತಹಶೀಲ್ದಾರ್‌ ಮಂಜುಳ, ‘ನಗರ ವ್ಯಾಪ್ತಿಯಲ್ಲಿ ಕೊಳವೆಬಾವಿ ಕೊರೆಸುವವರು ನಗರಸಭೆಯಿಂದ ಅನುಮತಿ ಪಡೆದುಕೊಳ್ಳಬೇಕು. ಅಗತ್ಯವಿಲ್ಲದಿದ್ದರೂ ಕೊಳವೆ ಬಾವಿ ಕೊರೆಸುವುದು ತಪ್ಪು. ನಗರಸಭೆಯ ಬಹುತೇಕ ಎಲ್ಲ ಬಡವಾಣೆಗಳಲ್ಲಿ ಉತ್ತಮವಾಗಿ ನೀರಿನ ವ್ಯವಸ್ಥೆ ಇದೆ. ಹಾಗಾಗಿ ಅನವಶ್ಯಕವಾಗಿ ಕೊಳವೆಬಾವಿಗಳನ್ನು ಕೊರೆಸುವುದನ್ನು ನಿಲ್ಲಿಸಬೇಕು’ ಎಂದರು. 

ನಗರಸಭೆ ಆಯುಕ್ತ ಎ.ರಮೇಶ್‌ ಮಾತನಾಡಿ, ‘ಕೊಳವೆ ಬಾವಿಗಳನ್ನು ಕೊರೆಸಲು ಅನುಮತಿ ಪಡೆಯುವುದು ಕಡ್ಡಾಯ. ಎಲ್ಲೆಂದರಲ್ಲಿ ಕೊಳವೆ ನಿರ್ಮಿಸಲು ಅವಕಾಶ ಇಲ್ಲ. ಈ ಬಗ್ಗೆ ಪರಿಶೀಲಿಸಲಾಗುವುದು’ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.