ADVERTISEMENT

ಗುಂಡ್ಲುಪೇಟೆ | ಕಾಡಾನೆ ಹಾವಳಿ: ಫಸಲು ನಾಶ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2024, 14:28 IST
Last Updated 8 ನವೆಂಬರ್ 2024, 14:28 IST
ಗುಂಡ್ಲುಪೇಟೆ ತಾಲ್ಲೂಕಿನ ಓಂಕಾರ ಅರಣ್ಯ ವಲಯ ವ್ಯಾಪ್ತಿಯ ಬಿ.ಹೊಸಪುರ ಗ್ರಾಮದ ರೈತರ ಜಮೀನುಗಳಲ್ಲಿ ಟೊಮೆಟೊ ಫಸಲು ನಾಶ ಮಾಡಿರುವ ಆನೆ
ಗುಂಡ್ಲುಪೇಟೆ ತಾಲ್ಲೂಕಿನ ಓಂಕಾರ ಅರಣ್ಯ ವಲಯ ವ್ಯಾಪ್ತಿಯ ಬಿ.ಹೊಸಪುರ ಗ್ರಾಮದ ರೈತರ ಜಮೀನುಗಳಲ್ಲಿ ಟೊಮೆಟೊ ಫಸಲು ನಾಶ ಮಾಡಿರುವ ಆನೆ   

ಗುಂಡ್ಲುಪೇಟೆ: ಕಾಡಾನೆ ಹಿಂಡು ದಾಳಿ ನಡೆಸಿ ರೈತರು ಜಮೀನುಗಳಲ್ಲಿ ಬೆಳೆದಿದ್ದ ಟೊಮೆಟೊ, ಬೀಟ್ ರೋಟ್, ತೊಗರಿ ಬೆಳೆಯನ್ನು ನಾಶ ಪಡಿಸಿರುವ ಘಟನೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಓಂಕಾರ ಅರಣ್ಯ ವಲಯ ವ್ಯಾಪ್ತಿಯ ಬಿ.ಹೊಸಪುರ ಗ್ರಾಮದಲ್ಲಿ ನಡೆದಿದೆ.

ಬಿ.ಹೊಸಪುರ ಗ್ರಾಮದ ಶಿವಣ್ಣೇಗೌಡ ಎಂಬ ರೈತ ಬೆಳೆದಿದ್ದ ಒಂದು ಎಕರೆ ತೊಗರಿ ಹಾಗೂ ಇಪತ್ತು ಗುಂಟೆ ಟೊಮೆಟೊ, ಯಶೋದಾ ಎಂಬುವವರ ಎರಡು ಎಕರೆಯಲ್ಲಿ ಬೆಳೆದಿದ್ದ ತೊಗರಿ, ಮಹದೇವೇಗೌಡ ಎಂಬುವರು ಒಂದೂವರೆ ಎಕರೆಯಲ್ಲಿ ಬೆಳೆದಿದ್ದ ತೊಗರಿ ಬೆಳೆ, ಸಿದ್ದೇಗೌಡ ಎಂಬುವವರ ಮುಕ್ಕಾಲು ಎಕರೆ ಜಮೀನಿನಲ್ಲಿ ಬೆಳೆದಿದ್ದ ತೊಗರಿ, ಬೀರೇಗೌಡ ಎಂಬುವವರ ಅರ್ಧ ಎಕರೆಯಲ್ಲಿ ಬೆಳೆದಿದ್ದ ಬೀಟ್ ರೋಟ್ ಹಾಗೂ ಚಿಕ್ಕಬಸವೇಗೌಡ, ಮಹದೇವೇಗೌಡ ಅವರ ಬೆಳೆ ಸಹ ನಾಶವಾಗಿದೆ. ಇದರಿಂದ ರೈತರು ಅಪಾರ ನಷ್ಟ ಅನುಭವಿಸುವಂತಾಗಿದೆ.

ಪರಿಹಾರಕ್ಕೆ ಒತ್ತಾಯ:

ಓಂಕಾರ ವಲಯ ಅರಣ್ಯಾಧಿಕಾರಿಗಳು ಕೂಡಲೇ ಪರಿಶೀಲನೆ ನಡೆಸಿ ವಿಳಂಬ ಮಾಡದೆ ಶೀಘ್ರವಾಗಿ ಪರಿಹಾರ ದೊರಕಿಸಿಕೊಡಬೇಕೆಂದು ರೈತ ಮುಖಂಡರು ಒತ್ತಾಯಿಸಿದ್ದಾರೆ.

ADVERTISEMENT

ಸರಿಯಾಗಿ ಕಾವಲು ಕಾಯದ ಅರಣ್ಯ ಸಿಬ್ಬಂದಿ: ಓಂಕಾರ ವಲಯ ವ್ಯಾಪ್ತಿಯಲ್ಲಿ ಕಾಡಾನೆಗಳು ಅರಣ್ಯದಿಂದ ಹೊರಬಂದು ರೈತರ ಜಮೀನುಗಳ ಮೇಲೆ ನಿರಂತರವಾಗಿ ದಾಳಿ ನಡೆಸುತ್ತಲೇ ಇವೆ. ಅರಣ್ಯ ಸಿಬ್ಬಂದಿ ಕೆಲವು ಗಂಟೆಗಳು ಮಾತ್ರ ಬೀಟ್ ನಡೆಸಿ ನಂತರ ತೆರಳುತ್ತಾರೆ. ಕಾಡಾನೆಗಳು ಮಧ್ಯ ರಾತ್ರಿ ಅಥವಾ ಬೆಳಗಿನ ಜಾವ ರಾಜಾರೋಷವಾಗಿ ಕಾಡಿನಿಂದ ಹೊರಬಂದು ಫಸಲುಗಳ ಮೇಲೆ ಲಗ್ಗೆಯಿಡುತ್ತಿದೆ. ಇದಕ್ಕೆ ಅರಣ್ಯಾಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ರೈತರಾದ ಶಿವಣ್ಣೇಗೌಡ, ಮಹದೇವೇಗೌಡ ಆಕ್ರೋಶ ವ್ಯಕ್ತಪಡಿಸಿದರು.

ಕಡಿವಾಣ ಹಾಕದಿದ್ದರೆ ಕಚೇರಿಗೆ ಬೀಗ: ಬಿ.ಹೊಸಪುರಕ್ಕೆ ಹೊಂದಿಕೊಂಡತ್ತಿರುವ ಅರಣ್ಯ ಪ್ರದೇಶದಲ್ಲಿ ರೈಲ್ವೆ ಕಂಬಿಗಳು ಆನೆ ದಾಳಿಯಿಂದ ಮುರಿದು ಬಿದ್ದಿವೆ. ಇದನ್ನು ದುರಸ್ತಿ ಪಡಿಸದ ಕಾರಣ ಆನೆಗಳು ಹೊರ ಬರುತ್ತಿವೆ. ಕೂಡಲೇ ಇದಕ್ಕೆ ಕಡಿವಾಣ ಹಾಕದಿದ್ದರೆ ಓಂಕಾರ ವಲಯ ಕಚೇರಿಗೆ ಬೀಗ ಜಡಿದು ಅಹೋರಾತ್ರಿ ಧರಣಿ ನಡೆಸುವುದಾಗಿ ಬೀರೇಗೌಡ, ಬಸವೇಗೌಡ ಎಚ್ಚರಿಕೆ ನೀಡಿದರು.

ಶಾಸಕರ ವಿರುದ್ಧ ಅಸಮಾಧಾನ: ಓಂಕಾರ ವಲಯ ವ್ಯಾಪ್ತಿಯಲ್ಲಿ ನಿರಂತರವಾಗಿ ಕಾಡಾನೆ ದಾಳಿಗೆ ಸಿಲುಕಿ ಫಸಲು ನಾಶವಾಗುತ್ತಿರುವ ಸಂಬಂಧ ಶಾಸಕ ಎಚ್.ಎಂ.ಗಣೇಶಪ್ರಸಾದ್ ಗಮನಕ್ಕೆ ತಂದರೂ ಸಹ ಇಲ್ಲಿಯ ತನಕ ಒಮ್ಮೆಯೂ ಭೇಟಿ ನೀಡಿ ಪರಿಶೀಲನೆ ನಡೆಸಿಲ್ಲ. ಜೊತೆಗೆ ರೈಲ್ವೆ ಕಂಬಿ ಹಾಕಿಸುತ್ತೇವೆ ಎಂಬ ಹೇಳಿಕೆ ಭರವಸೆಯಾಗಿಯೇ ಉಳಿದಿದೆ. ಆದ್ದರಿಂದ ಇದನ್ನು ಬಹಳ ಗಂಭೀರವಾಗಿ ಪರಿಗಣಿಸಬೇಕು ಎಂದು ರೈತ ಬಿ.ಹೊಸಪುರ ಕುಮಾರ್ ಶಾಸಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.