ಚಾಮರಾಜನಗರ: ಬಿಳಿಗಿರಿರಂಗನಾಥಸ್ವಾಮಿ ಹುಲಿ ಸಂರಕ್ಷಿತ ಪ್ರದೇಶದ ಪುಣಜನೂರು ವಲಯದಲ್ಲಿ ಸೋಮವಾರ ಕಾಳ್ಗಿಚ್ಚು ಕಂಡು ಬಂದಿದೆ. ಹತ್ತಾರು ಎಕರೆ ಕಾಡು ಸುಟ್ಟು ಹೋಗಿದೆ.
ಪುಣಜನೂರಿನಿಂದ ಬೇಡಗುಳಿಗೆ ಹೋಗುವ ರಸ್ತೆಯ ವ್ಯಾಪ್ತಿಯ ಕುರಿಮಂದೆ, ಕುಂಬಳಕಾಯಿ ಗುಡ್ಡ ಪ್ರದೇಶದ ಮೂರ್ನಾಲ್ಕು ಕಡೆಗಳಲ್ಲಿ ಕಾಳ್ಗಿಚ್ಚು ಕಾಣಿಸಿಕೊಂಡಿದ್ದು, ಬೆಂಕಿ ಆರಿಸಲು ಅರಣ್ಯ ಇಲಾಖೆ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ.
ಬೆಳಿಗ್ಗೆಯೇ ಬೆಂಕಿ ಹೊತ್ತಿಕೊಂಡಿದೆ. ಸಂಜೆಯಾದರೂ ನಂದಿಸಲು ಸಾಧ್ಯವಾಗಿಲ್ಲ. ಬಿಸಿಲಿನಿಂದಾಗಿ ಕಾಡು ಒಣಗಿದೆ. ಹಾಗಾಗಿ, ಬೆಂಕಿ ವೇಗವಾಗಿ ಹರಡುತ್ತಿದೆ. ಕನಿಷ್ಠ 50 ಎಕರೆ ಬೆಂಕಿಗೆ ಆಹುತಿಯಾಗಿದೆ ಎಂದು ಅರಣ್ಯ ಅಧಿಕಾರಿಗಳು ಹೇಳುತ್ತಿದ್ದಾರೆ. ನೂರಾರು ಎಕರೆ ಭಸ್ಮವಾಗಿದೆ ಎಂದು ಪುಣಜನೂರಿನ ನಿವಾಸಿಗಳು ಹೇಳುತ್ತಿದ್ದಾರೆ.
ಕೋರ್ ಅರಣ್ಯ ವಲಯದಲ್ಲಿ ಬೆಂಕಿ ಬಿದ್ದಿರುವುದರಿಂದ ಅಂದಾಜು ಸಿಗುತ್ತಿಲ್ಲ. ಆದರೆ, ದಟ್ಟ ಹೊಗೆ, ದೂರದಿಂದಲೇ ಕಾಣಿಸುತ್ತಿದೆ.
ಈ ಬಗ್ಗೆ ’ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿರುವ ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ಡಿಸಿಎಫ್ ದೀಪ್ ಜೆ.ಕಾಂಟ್ರ್ಯಾಕ್ಟರ್, ‘ಕನಿಷ್ಠ 50 ಎಕರೆ ಸುಟ್ಟಿರಬಹುದು. ನೆಲ ಬೆಂಕಿಯಾಗಿದ್ದು, ಎತ್ತರಕ್ಕೆ ವ್ಯಾಪಿಸಿಲ್ಲ. ಬೆಂಕಿ ನಂದಿಸಲು ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಸ್ಥಳೀಯರೇ ಬೆಂಕಿ ಹಾಕಿರುವ ಅನುಮಾನ ಇದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಿದ್ದೇವೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಿದ್ದೇವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.