ADVERTISEMENT

ವನ್ಯಜೀವಿ ರಕ್ಷಣೆಗೆ ಜನರ ಸಹಕಾರ ಬೇಕು

ವನ್ಯಜೀವಿ ಸಪ್ತಾಹ: ಚಿತ್ರಪಟ ಬಿಡುಗಡೆ– ಬಿಆರ್‌ಟಿ ಡಿಸಿಎಫ್‌ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2020, 14:49 IST
Last Updated 7 ಅಕ್ಟೋಬರ್ 2020, 14:49 IST
ಕಾರ್ಯಕ್ರಮದಲ್ಲಿ ಗಣ್ಯರು ಚಿತ್ರಪಟಗಳನ್ನು ಬಿಡುಗಡೆ ಮಾಡಿದರು
ಕಾರ್ಯಕ್ರಮದಲ್ಲಿ ಗಣ್ಯರು ಚಿತ್ರಪಟಗಳನ್ನು ಬಿಡುಗಡೆ ಮಾಡಿದರು   

ಚಾಮರಾಜನಗರ: ‘ಅರಣ್ಯ ಹಾಗೂ ವನ್ಯಜೀವಿ ಸಂರಕ್ಷಣೆ ಕೇವಲ ಅರಣ್ಯ ಇಲಾಖೆಯಿಂದ ಸಾಧ್ಯವಿಲ್ಲ. ಅದಕ್ಕೆ ಜನರ ಸಹಕಾರವೂ ಅಗತ್ಯ’ ಎಂದು ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಜಿ.ಸಂತೋಷ್‌ಕುಮಾರ್‌ ಅವರು ಹೇಳಿದರು.

66ನೇ ವನ್ಯಜೀವಿ ಸಪ್ತಾಹದ ಅಂಗವಾಗಿ ಕೊಳ್ಳೇಗಾಲದ ವನ್ಯಜೀವಿ ಟ್ರಸ್ಟ್‌, ಅರಣ್ಯ ಇಲಾಖೆ ಜಂಟಿಯಾಗಿ ಆಯೋಜಿಸಿದ್ದ ಚಿತ್ರಪಟ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ‘ವನ್ಯಜೀವಿ, ಅರಣ್ಯ ಸಂರಕ್ಷಣೆಗೆ ಸಂವಿಧಾನದಲ್ಲಿ ಪ್ರತ್ಯೇಕ ಕಲಂಗಳಿವೆ. ಸರ್ಕಾರ ಕೂಡ ಸಂರಕ್ಷಣಾ ಕಾನೂನುಗಳನ್ನು ರೂಪಿಸಿದೆ. ಸರ್ಕಾರ ಅಥವಾ ಇಲಾಖೆಗಳಿಂದ ಸಂರಕ್ಷಣೆ ಸಾಧ್ಯವಿಲ್ಲ. ಜನರು ಕೂಡ ವೈಯಕ್ತಿಕ ನೆಲೆಗಟ್ಟಿನಲ್ಲಿ ಸಂರಕ್ಷಣೆಯಲ್ಲಿ ತೊಡಗಬೇಕು’ ಎಂದು ಅವರು ಹೇಳಿದರು.

‘ಅಂದರೆ, ಸಾರ್ವಜನಿಕರು ಕಾಡಿನಲ್ಲಿ ಕಾವಲು ಕಾಯಬೇಕು, ಕಾಳ್ಗಿಚ್ಚು ಆರಿಸಬೇಕು ಎಂದು ಹೇಳುತ್ತಿಲ್ಲ. ಅರಣ್ಯ ಹಾಗೂ ವನ್ಯಜೀವಿಗಳ ಸಂರಕ್ಷಣೆ ಬಗ್ಗೆ ಇತರರಲ್ಲಿ ಜಾಗೃತಿ ಮೂಡಿಸಬೇಕು. ಅರಣ್ಯದಲ್ಲಿ ಸಂಚರಿಸುವಾಗ ಜವಾಬ್ದಾರಿಯಿಂದ ವರ್ತಿಸಬೇಕು’ ಎಂದರು.

ADVERTISEMENT

‘ಸಂರಕ್ಷಣೆ ಈ ವರ್ಷದ ವನ್ಯಜೀವಿ ಸಪ್ತಾಹದ ಧ್ಯೇಯೋದ್ದೇಶ ಆಗಿದೆ. ರಣಹದ್ದುಗಳು ನಮ್ಮ ಪರಿಸರ ಅತ್ಯಂತ ಪ್ರಮುಖವಾದ ಜೀವಿ. ಸತ್ತ, ಕೊಳೆತ ಮಾಂಸಗಳನ್ನು ತಿಂದು ಬದುಕುತ್ತವೆ. ಅಂತ್ರಾಕ್ಸ್‌ ಸೋಂಕು ಇರುವ ದೇಹವನ್ನು ಹೊಂದಿರುವ ತಿಂದು, ಸೋಂಕನ್ನು ಯಶಸ್ವಿಯಾಗಿ ಜೀರ್ಣಿಸಿಕೊಳ್ಳುವ ಶಕ್ತಿ ಅದಕ್ಕೆ ಇದೆ’ ಎಂದು ಹೇಳಿದರು.

ಕರ್ನಾಟಕ ವನ್ಯಜೀವಿ ಟ್ರಸ್ಟ್‌ನ ಸದಸ್ಯೆ ಡಾ.ಸಹನಾ ಪವಿತ್ರ ಅವರು ಮಾತ್ರ, ‘ಈಗಿನ ಕಾಲದಲ್ಲಿ ಆರೋಗ್ಯ ಅತ್ಯಂತ ಮುಖ್ಯ. ಪರಿಸರ ಉತ್ತಮವಾಗಿದ್ದರೆ, ನಮ್ಮ ಆರೋಗ್ಯವೂ ಚೆನ್ನಾಗಿರುತ್ತದೆ. ಗಿಡ ಮರಗಳನ್ನು ಬೆಳೆಸುವುದು, ಕೆರೆಗಳ ಸಂರಕ್ಷಣೆಗೆ ಒತ್ತು ನೀಡಬೇಕು. ಪ್ರಕೃತಿ ಜೊತೆಗೆ ಬೆರೆತು ಜೀವಿಸಬೇಕು’ ಎಂದರು.

ಟ್ರಸ್ಟ್‌ ಅಧ್ಯಕ್ಷ ಟಿ.ಜಾನ್ ಪೀಟರ್ ಪ್ರಾಸ್ತವಿಕವಾಗಿ ಮಾತನಾಡಿದರು.ಕರ್ನಾಟಕ ವನ್ಯಜೀವಿ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಮನೋಜ್‌ಕುಮಾರ್ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸತ್ಯಶ್ರೀ, ಆರ್‌ಎಫ್‌ಗಳಾದ ಶಾಂತಪ್ಪ ಪೂಜಾರ್‌, ಕಾಂತರಾಜು ಮತ್ತಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.