ADVERTISEMENT

ಚಾಮರಾಜನಗರ: ಫಲಕೊಡುವುದೇ ಬಿಜೆಪಿ– ಜೆಡಿಎಸ್‌ ಮೈತ್ರಿ?

ಈವರೆಗೂ ಜೊತೆಯಾಗಿ ಕಾಣಿಸಿಕೊಳ್ಳದ ಎರಡೂ ಪಕ್ಷಗಳ ಮುಖಂಡರು, ಹನೂರು ಶಾಸಕ ಮಂಜುನಾಥ್‌ ಮೌನ

ಸೂರ್ಯನಾರಾಯಣ ವಿ.
Published 2 ಏಪ್ರಿಲ್ 2024, 5:10 IST
Last Updated 2 ಏಪ್ರಿಲ್ 2024, 5:10 IST
ಸೈಯದ್‌ ಅಕ್ರಂ
ಸೈಯದ್‌ ಅಕ್ರಂ   

ಚಾಮರಾಜನಗರ: ಲೋಕಸಭಾ ಚುನಾವಣೆಗಾಗಿ ರಾಜ್ಯ ಮಟ್ಟದಲ್ಲಿ ಬಿಜೆಪಿ–ಜೆಡಿಎಸ್‌ ಪಕ್ಷಗಳು ಮೈತ್ರಿ ಮಾಡಿಕೊಂಡಿವೆ. ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲೂ ಮೈತ್ರಿ ಫಲ ನೀಡುವುದೇ ಎಂಬ ಕುತೂಹಲ ರಾಜಕೀಯ, ಸಾರ್ವಜನಿಕ ವಲಯದಲ್ಲಿ ಮೂಡಿದೆ. 

ಕ್ಷೇತ್ರ ವ್ಯಾಪ್ತಿಗೆ ಬರುವ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಹನೂರಿನಲ್ಲಿ ಮಾತ್ರ ಜೆಡಿಎಸ್‌ ಶಾಸಕ ಇದ್ದಾರೆ. ಎಂ.ಆರ್‌.ಮಂಜುನಾಥ್‌ ಅವರು ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ನ ಮೂರು ಬಾರಿಯ ಶಾಸಕ ಆರ್‌.ನರೇಂದ್ರ ಅವರನ್ನು ಸೋಲಿಸಿ, ಶಾಸನ ಸಭೆ ಪ್ರವೇಶಿಸಿದ್ದರು. 

ರಾಜ್ಯ ಮಟ್ಟದಲ್ಲಿ ಬಿಜೆಪಿ–ಜೆಡಿಎಸ್‌ ಮೈತ್ರಿ ಘೋಷಣೆಯಾಗಿ ತಿಂಗಳುಗಳು ಉರುಳಿದರೂ, ಚಾಮರಾಜನಗರ ಕ್ಷೇತ್ರದಲ್ಲಿ ಈವರೆಗೂ ಮೈತ್ರಿ ಅನುಷ್ಠಾನಕ್ಕೆ ಬಂದಂತೆ ಕಾಣುತ್ತಿಲ್ಲ. ಈವರೆಗೂ ಎರಡೂ ಪಕ್ಷಗಳ ಮುಖಂಡರು ‌ಎಲ್ಲೂ ಒಟ್ಟಾಗಿ ಕಾಣಿಸಿಕೊಂಡಿಲ್ಲ. 

ADVERTISEMENT

ಎಸ್‌.ಬಾಲರಾಜ್‌ ಅವರನ್ನು ಅಭ್ಯರ್ಥಿಯಾಗಿ ಘೋಷಿಸಿದ ಸಂದರ್ಭದಲ್ಲಿ ಶಾಸಕ ಎಂ.ಆರ್‌.ಮಂಜುನಾಥ್‌ ಅವರು ಬಿಜೆಪಿ ಮುಖಂಡರ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಹೇಳಲಾಗಿತ್ತು. 

ಇತ್ತೀಚೆಗೆ ಮೈಸೂರಿನಲ್ಲಿ ನಡೆದ ಬಿಜೆಪಿ ಜೆಡಿಎಸ್‌ ಸಮನ್ವಯ ಸಮಿತಿ ಸಭೆಯ ಬಳಿಕವೂ ಎರಡೂ ಪಕ್ಷಗಳ ಮುಖಂಡರು ಒಟ್ಟಿಗೆ ಕಾಣಿಸಿಕೊಂಡಿಲ್ಲ. 

‘ನಾಮಪತ್ರ ಸಲ್ಲಿಕೆಯ ಬಳಿಕ ಒಟ್ಟಾಗಿ ಕೆಲಸ ಮಾಡಲಿದ್ದೇವೆ’ ಎಂದು ಬಿಜೆಪಿ ಮುಖಂಡರು ಹೇಳುತ್ತಿದ್ದಾರೆ. ಶಾಸಕ ‌ಮಂಜುನಾಥ್‌ ಸೇರಿದಂತೆ ಜೆಡಿಎಸ್‌ ಮುಖಂಡರು ಎಲ್ಲೂ ಬಹಿರಂವಾಗಿ ಮಾತನಾಡಿಲ್ಲ. ‘ಬಿಜೆಪಿಯವರು ನಮ್ಮನ್ನು ಕರೆದಿಲ್ಲ’ ಎಂದು ಖಾಸಗಿಯಾಗಿ ಹೇಳುತ್ತಿದ್ದಾರೆ. 

ಹನೂರಿಗಷ್ಟೇ ಸೀಮಿತ: ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳ ಪೈಕಿ ಜೆಡಿಎಸ್‌ ಪ್ರಬಲವಾಗಿರುವುದು ಹನೂರಿನಲ್ಲಿ ಮಾತ್ರ. ಪ್ರತಿ ಲೋಕಸಭಾ ಚುನಾವಣೆಯಲ್ಲಿ ಹನೂರು ಕ್ಷೇತ್ರದಲ್ಲಿ ಕಾಂಗ್ರೆಸ್‌ ಹೆಚ್ಚಿನ ಮತಗಳ ಮುನ್ನಡೆ ಪಡೆಯುತ್ತದೆ. ಈ ಬಾರಿ ಅಲ್ಲಿ ಜೆಡಿಎಸ್‌ ಶಾಸಕರು ಇರುವುದರಿಂದ ಮೈತ್ರಿ ಅಭ್ಯರ್ಥಿಗೆ ಹೆಚ್ಚು ಮತಗಳು ಬರಬಹುದು ಎಂಬುದು ಬಿಜೆಪಿ ಮುಖಂಡರ ನಿರೀಕ್ಷೆ. 

ಹನೂರು ಬಿಜೆಪಿಯಲ್ಲಿ ಮೂರು ಬಣಗಳಿವೆ. ಮೇಲ್ನೋಟಕ್ಕೆ ಎಲ್ಲರೂ ಒಂದಾಗಿರುವಂತೆ ಕಂಡರೂ, ಅದು ಚುನಾವಣೆಯಲ್ಲಿ ಪ್ರತಿಫಲನವಾಗುತ್ತಿಲ್ಲ. ಕಳೆದ ವಿಧಾನಸಭಾ ಚುನಾವಣೆ ಫಲಿತಾಂಶ ಇದಕ್ಕೆ ತಾಜಾ ನಿದರ್ಶನ.  ಬೆಂಗಳೂರಿನಿಂದ ಬಂದು ಕ್ಷೇತ್ರದಲ್ಲಿ ಗೆದ್ದಿರುವ ಮಂಜುನಾಥ್‌ ಹಾಗೂ ಸ್ಥಳೀಯ ಬಿಜೆಪಿ ಮುಖಂಡರೊಂದಿಗೆ ಉತ್ತಮ ಒಡನಾಟವೂ ಇಲ್ಲ. 

ಜೊತೆಗೆ, ಕುರುಬ ಸಮುದಾಯದವರಾದ ಮಂಜುನಾಥ್‌ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಕೆಲವು ತಿಂಗಳ ಹಿಂದೆ ಅವರು ಕಾಂಗ್ರೆಸ್‌ ಸೇರುತ್ತಾರೆ ಎಂಬ ದಟ್ಟ ವದಂತಿಯೂ ಕ್ಷೇತ್ರದಾದ್ಯಂತ ಹರಡಿತ್ತು. ರಾಜ್ಯ ಸಭೆ ಚುನಾವಣೆಯಲ್ಲೂ ಅವರು ಅಡ್ಡಮತದಾನ ಮಾಡುತ್ತಾರೆ ಎಂದು ಹೇಳಲಾಗಿತ್ತು. ಆದರೆ, ಕೊನೆಗೆ ಅವರು ಮೈತ್ರಿ ಅಭ್ಯರ್ಥಿಯನ್ನೇ ಬೆಂಬಲಿಸಿದ್ದರು. 

‘ಜೆಡಿಎಸ್‌ ಶಾಸಕರಾಗಿದ್ದರೂ, ಕ್ಷೇತ್ರದ ಅಭಿವೃದ್ಧಿಯ ನಿಟ್ಟಿನಲ್ಲಿ ಶಾಸಕರು ಮುಖ್ಯಮಂತ್ರಿಯವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಆದರೆ, ಅವರು ಯಾವಾಗಲೂ ಜೆಡಿಎಸ್‌ಗೆ ನಿಷ್ಠರಾಗಿದ್ದಾರೆ. ವರಿಷ್ಠರ ಸೂಚನೆಯನ್ನು ಪಾಲಿಸುತ್ತಿದ್ದಾರೆ. ರಾಜ್ಯಸಭೆ ಚುನಾವಣೆಯಲ್ಲೂ ಅವರು ಪಕ್ಷವನ್ನು ಬೆಂಬಲಿಸಿದ್ದಾರೆ’ ಎಂದು ಹೇಳುತ್ತಾರೆ ಅವರ ಆಪ್ತರು.   

ಜಿಲ್ಲಾ ಜೆಡಿಎಸ್‌ ಅಧ್ಯಕ್ಷರೂ ಆಗಿರುವ ಶಾಸಕ ಮಂಜುನಾಥ್‌ ಅವರ ಪ್ರತಿಕ್ರಿಯೆ ಪಡೆಯಲು ‘ಪ್ರಜಾವಾಣಿ’ ಕರೆ ಮಾಡಿದರೂ, ಸಂಪರ್ಕ ಸಾಧ್ಯವಾಗಲಿಲ್ಲ. 

ನಾವು ಮೈತ್ರಿ ಧರ್ಮವನ್ನು ಪಾಲನೆ ಮಾಡುತ್ತೇವೆ. ಶಾಸಕರೂ ಇದೇ ಮಾತು ಹೇಳಿದ್ದಾರೆ ಇಂದು ಹನೂರಿನಲ್ಲಿ ಮುಖಂಡರ ಸಭೆ ನಡೆಯಲಿದೆ

–ಸೈಯದ್‌ ಅಕ್ರಂ ಜೆಡಿಎಸ್‌ ಜಿಲ್ಲಾ ವಕ್ತಾರ

ಜೆಡಿಎಸ್‌ ಕ್ಷೇತ್ರದಲ್ಲೂ ಬೆಂಬಲ ನೀಡಲಿದೆ. ನಾಮಪತ್ರ ಸಲ್ಲಿಕೆಗೆ ಎಚ್‌ಡಿಕೆ ಬರುತ್ತಾರೆ. ಶಾಸಕ ಮಂಜುನಾಥ್‌ ಕೂಡ ಇರುತ್ತಾರೆ

–ಎನ್‌.ಮಹೇಶ್‌ ಬಿಜೆಪಿ ರಾಜ್ಯ ಉಪಾಧ್ಯಕ್ಷ

‘ಬಿಜೆಪಿ ಮುಖಂಡರ ನಡವಳಿಕೆ ಮೇಲೆ ಅವಲಂಬಿತ’

‘ಈ ಚುನಾವಣೆಯಲ್ಲೂ ನಾವು ವರಿಷ್ಠರ ಸೂಚನೆಯನ್ನು ಪಾಲಿಸುತ್ತೇವೆ. ಆದರೆ ಹನೂರು ಕ್ಷೇತ್ರದಲ್ಲಿರುವ ಬಿಜೆಪಿ ಮುಖಂಡರು ನಮ್ಮ ಶಾಸಕರೊಂದಿಗೆ ಹೇಗೆ ನಡೆದುಕೊಳ್ಳುತ್ತಾರೆ ಎಂಬುದರ ಮೇಲೆ ಅದು ನಿಂತಿದೆ. ಈಗಾಗಲೇ ನಾವು ಮುಖಂಡರ ಅಭಿಪ್ರಾಯ ಸಂಗ್ರಹಿಸಿದ್ದೇವೆ. ಭಿನ್ನ ಅಭಿಪ್ರಾಯಗಳನ್ನು ವ್ಯಕ್ತವಾಗಿವೆ’ ಎಂದು ಮುಖಂಡರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.  ‘ಬಿಜೆಪಿಯ ಅಭ್ಯರ್ಥಿಯನ್ನು ನಾವು ಬೆಂಬಲಿಸುವುದು ಅವರು ನಮ್ಮನ್ನು ಹೇಗೆ ನಡೆಸಿಕೊಳ್ಳುತ್ತಾರೆ ಎಂಬುದರ ಮೇಲೆ ನಿಂತಿದೆ. ಮೈಸೂರಿನಲ್ಲಿ ಸಮನ್ವಯ ಸಮಿತಿ ಬಿಟ್ಟರೆ ಎರಡೂ ಪಕ್ಷಗಳ ಸ್ಥಳೀಯ ಮುಖಂಡರ ನಡುವೆ ಮಾತುಕತೆ ನಡೆದಿಲ್ಲ. ಹನೂರು ಕ್ಷೇತ್ರದ ಮುಖಂಡರ ಸಭೆ ಮಂಗಳವಾರ ಆಯೋಜಿಸಲಾಗಿದ್ದು ಈ ಬಗ್ಗೆ ವಿಸ್ತೃತ ಚರ್ಚೆ ನಡೆಯಲಿದೆ’ ಎಂದು ಅವರು ವಿವರಿಸಿದರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.