ಚಾಮರಾಜನಗರ: ‘ಕೋಲಾರದಲ್ಲಿ ಅಳಿಯನಿಗೆ ಟಿಕೆಟ್ ಸಿಕ್ಕಿಲ್ಲ ಎಂದು ಬೇಜಾರಿಲ್ಲ. ಪಕ್ಷದ ಅಭ್ಯರ್ಥಿ ಪರವಾಗಿ ಪ್ರಚಾರ ನಡೆಸುತ್ತಿದ್ದೇನೆ. ರಾಜ್ಯದಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲುವುದು ನಮ್ಮ ಗುರಿ’ ಎಂದು ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಗುರುವಾರ ಹೇಳಿದರು.
ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಮುನಿಸು ಎಲ್ಲಿದೆ? ಪಕ್ಷದ ಅಭ್ಯರ್ಥಿ ನಾಮಪತ್ರ ಸಲ್ಲಿಸುವಾಗ ನಾನು ಮತ್ತು ಮಗಳು ಹೋಗಿದ್ದೇವೆ. ಹೈಕಮಾಂಡ್ ತೀರ್ಮಾನಕ್ಕೆ ಬದ್ಧರಾಗಿದ್ದೇವೆ. ರಾಜಕೀಯದಲ್ಲಿ 30 ವರ್ಷಗಳ ಅನುಭವವಿದೆ. 10 ವರ್ಷ ಸಂಸದನಾಗಿದ್ದೆ. ಕೋರ್ ಕಮಿಟಿ ಸದಸ್ಯನೂ ಆಗಿದ್ದೆ. ಯಾವುದೋ ಒಂದು ಸೀಟು ಸಿಕ್ಕಿಲ್ಲ ಎಂದು ಯೋಚನೆ ಮಾಡುತ್ತೇನೆಯೇ’ ಎಂದು ಕೇಳಿದರು.
‘ಪ್ರಚಾರಕ್ಕೆ ಹೋಗಿದ್ದೇನೆ. ಎರಡು ದಿನ ಮೈಸೂರು, ಚಾಮರಾಜನಗರ ಪ್ರವಾಸ ಮಾಡಿ ಬರುತ್ತೇನೆ ಎಂದು ಹೇಳಿದ್ದೇನೆ. ಮತ್ತೆ ಹೋಗುವೆ. ಸೋಲಬಾರದು ಎಂಬ ಗುರಿ ಇಟ್ಟುಕೊಂಡು ವರಿಷ್ಠರು ಅಭ್ಯರ್ಥಿಯನ್ನು ಆಯ್ಕೆ ಮಾಡಿದ್ದಾರೆ. ರಾಜ್ಯದಲ್ಲಿ 28 ಸ್ಥಾನಗಳನ್ನು ಗೆಲ್ಲುವುದು ಪಕ್ಷದ ಗುರಿ. ಕೇಂದ್ರದಲ್ಲಿ ಜಾತ್ಯತೀತವಾದ ಸರ್ಕಾರ ಬಂದಾಗ ಈ ದೇಶದಲ್ಲಿ ಶಾಂತಿ ಸ್ಥಾಪನೆಯಾಗುತ್ತದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.