ADVERTISEMENT

ಅಡುಗೆ ಅನಿಲ ಬೆಲೆ ಏರಿಕೆ: ಮಹಿಳಾ ಕಾಂಗ್ರೆಸ್‌ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2023, 13:09 IST
Last Updated 6 ಮಾರ್ಚ್ 2023, 13:09 IST
ಅಡುಗೆ ಅನಿಲ ಸಿಲಿಂಡರ್‌ ಬೆಲೆ ಏರಿಕೆ ಖಂಡಿಸಿ ಮಹಿಳಾ ಕಾಂಗ್ರೆಸ್‌ ಸಮಿತಿ ರಾಜ್ಯ ಅಧ್ಯಕ್ಷೆ ಪುಷ್ಪಾ ಅಮರನಾಥ್‌ ನೇತೃತ್ವದಲ್ಲಿ ಜಿಲ್ಲಾ ಸಮಿತಿಯ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಚಾಮರಾಜನಗರದಲ್ಲಿ ಸೋಮವಾರ ಖಾಲಿ ಸಿಲಿಂಡರ್‌ ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು
ಅಡುಗೆ ಅನಿಲ ಸಿಲಿಂಡರ್‌ ಬೆಲೆ ಏರಿಕೆ ಖಂಡಿಸಿ ಮಹಿಳಾ ಕಾಂಗ್ರೆಸ್‌ ಸಮಿತಿ ರಾಜ್ಯ ಅಧ್ಯಕ್ಷೆ ಪುಷ್ಪಾ ಅಮರನಾಥ್‌ ನೇತೃತ್ವದಲ್ಲಿ ಜಿಲ್ಲಾ ಸಮಿತಿಯ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಚಾಮರಾಜನಗರದಲ್ಲಿ ಸೋಮವಾರ ಖಾಲಿ ಸಿಲಿಂಡರ್‌ ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು   

ಚಾಮರಾಜನಗರ: ಅಡುಗೆ ಅನಿಲ ಸಿಲಿಂಡರ್‌ ಬೆಲೆ ಏರಿಕೆ ಖಂಡಿಸಿ ಜಿಲ್ಲಾ ಮಹಿಳಾ ಕಾಂಗ್ರೆಸ್‌ ಸಮಿತಿಯ ಪದಾಧಿಕಾರಿಗಳು ನಗರದಲ್ಲಿ ಸೋಮವಾರ ಖಾಲಿ ಸಿಲಿಂಡರ್‌ ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು.

ಚಾಮರಾಜೇಶ್ವರ ಸ್ವಾಮಿ ದೇವಾಲಯದ ಮುಂಭಾಗ ಸೇರಿದ ಪ್ರತಿಭಟನಕಾರರು, ತಲೆ ಮೇಲೆ ಸಿಲಿಂಡರ್‌ ಹೊತ್ತುಕೊಂಡು ಭುವನೇಶ್ವರಿ ವೃತ್ತದವರೆಗೂ ಮೆರವಣಿಗೆ ನಡೆಸಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿದರು.

ಮಹಿಳಾ ಕಾಂಗ್ರೆಸ್‌ ಸಮಿತಿ ರಾಜ್ಯ ಅಧ್ಯಕ್ಷೆ ಪುಷ್ಪಾ ಅಮರನಾಥ್‌ ಕೂಡ ಖಾಲಿ ಸಿಲಿಂಡರ್‌ ಎತ್ತಿ ಹಿಡಿದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

‘ಭ್ರಷ್ಠ, ದುಷ್ಠ, ರಾಕ್ಷಸ ಬಿಜೆಪಿ ಸರ್ಕಾರ ಅಡುಗೆ ಅನಿಲ, ಅಗತ್ಯವಸ್ತುಗಳ ಬೆಲೆ ಏರಿಕೆ ಮಾಡಿದೆ. ಇದರಿಂದ ಜನರ ಜೀವನ ದುಸ್ತರವಾಗಿದೆ. ಕೂಡಲೇ ಬೆಲೆ ಇಳಿಸಬೇಕು’ ಎಂದು ಆಗ್ರಹಿಸಿದರು.

ಪ್ರತಿಭಟನಕಾರರು ಕೇಂದ್ರ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಪ್ರತಿಕ್ರಿತಿ ದಹಿಸಲು ಮುಂದಾದರು. ಇದಕ್ಕೆ ಪೊಲೀಸರು ಅವಕಾಶ ಕೊಡಲಿಲ್ಲ. ಈ ವೇಳೆ ಪ್ರತಿಭಟನಕಾರರು ಮತ್ತು ಪೊಲೀಸರ ನಡುವೆ ವಾಗ್ವಾದ ನಡೆಯಿತು.

ಸರ್ಕಾರ ಕಿತ್ತೊಗೆಯಬೇಕು: ಬಳಿಕ ಸುದ್ದಿಗೋಷ್ಠಿ ನಡೆಸಿದ ಪುಷ್ಪಾ ಅಮರನಾಥ್‌, ‘ರಾಜ್ಯ ಬಿಜೆಪಿ ಸರ್ಕಾರ 40 ಪರ್ಸೆಂಟ್‌ ಅಲ್ಲ, 60 ಪರ್ಸೆಂಟ್‌ ಕಮಿಷನ್‌ ಸರ್ಕಾರ. ಬಡವರ, ಮಧ್ಯಮ ವರ್ಗದವರ ವಿರೋಧಿಯಾಗಿದೆ. ಯುಪಿಎ ಸರ್ಕಾರದ ಅವಧಿಯಲ್ಲಿ ಸಿಲಿಂಡರ್‌ ಬೆಲೆ ₹410 ಇತ್ತು. ಅದೀಗ ₹1200ಕ್ಕೆ ತಲುಪಿದೆ. ಈ ಡಬಲ್‌ ಎಂಜಿನ್‌ ಸರ್ಕಾರ ತೆರಿಗೆಯನ್ನು ಡಬಲ್‌ ಮಾಡಿದೆ. ಅಗತ್ಯ ವಸ್ತುಗಳ ಬೆಲೆಯನ್ನೂ ದುಪ್ಪಟ್ಟು ಮಾಡಿದೆ. ಜನರ ಜೀವನ ದುಸ್ತರವಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ರಾಜ್ಯ ಬಿಜೆಪಿ ಸರ್ಕಾರ ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ. ಚಾಮರಾಜನಗರ ಜಿಲ್ಲೆಗೆ ಏನೂ ನೀಡಿಲ್ಲ. ಕೋವಿಡ್‌ ಸಮಯದಲ್ಲಿ ಆಮ್ಲಜನಕ ಸಮರ್ಪಕವಾಗಿ ಪೂರೈಸದೆ 36 ಜನರನ್ನು ಸಾಯಿಸಿದ್ದು ಬಿಟ್ಟರೆ ಬೇರೆ ಏನೂ ಮಾಡಿಲ್ಲ’ ಎಂದು ದೂರಿದರು.

‘ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಅನ್ನಭಾಗ್ಯ ಸೇರಿದಂತೆ ವಿವಿಧ ಯೋಜನೆಗಳ ಮೂಲಕ ಐದು ವರ್ಷಗಳ ಕಾಲ ಜನರಿಗೆ ಅನುಕೂಲಕರವಾದ ಆಡಳಿತ ನೀಡಿದ್ದಾರೆ. ಆದರೆ, ನಾಲ್ಕು ವರ್ಷ ಆಡಳಿತ ನಡೆಸಿರುವ ಬಿಜೆಪಿ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಈ ಸರ್ಕಾರವನ್ನು ಕಿತ್ತೊಗೆಯಬೇಕು. ಮುಂದಿನ ಚುನಾವಣೆಯಲ್ಲಿ ಎಲ್ಲರೂ ಕಾಂಗ್ರೆಸ್‌ ಬೆಂಬಲಿಸಬೇಕು’ ಎಂದು ಮನವಿ ಮಾಡಿದರು.

ಜಿಲ್ಲಾ ಕಾಂಗ್ರೆಸ್ ಮಹಿಳಾ ಅಧ್ಯಕ್ಷ ಲತಾ ರಾಜಶೇಖರ ಜತ್ತಿ, ಪ್ರಧಾನ ಕಾರ್ಯದರ್ಶಿ ನಾಗರತ್ನ, ಮುಖಂಡರಾದ ಪದ್ಮ ಪುರುಷೋತ್ತಮ್, ಭಾಗ್ಯಮ್ಮ, ನಾಗಶ್ರೀ, ಪುಟ್ಟಮ್ಮ, ಚಿನ್ನಮ್ಮ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.