ADVERTISEMENT

ಹಸಿರು ಸೀರೆಯಲ್ಲಿ ಕಂಗೊಳಿಸಿದ ಮಹಿಳೆಯರು

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2024, 14:09 IST
Last Updated 15 ಸೆಪ್ಟೆಂಬರ್ 2024, 14:09 IST
ಸಂತೇಮರಹಳ್ಳಿ ಸಮೀಪದ ಮೂಗೂರು ಕ್ರಾಸ್ ಬಳಿ ಆರಂಭವಾಗುವ ಚಾಮರಾಜನಗರ ಜಿಲ್ಲೆಗೆ ಸ್ವಾಗತ ಕೋರುವ ಕಮಾನು ಗೇಟ್ ಬಳಿ ಜೆಎಸ್‌ಎಸ್ ಶಾಲಾ ವಿದ್ಯಾರ್ಥಿಗಳು ಬ್ಯಾಂಡ್ ನುಡಿಸಿದರು.
ಸಂತೇಮರಹಳ್ಳಿ ಸಮೀಪದ ಮೂಗೂರು ಕ್ರಾಸ್ ಬಳಿ ಆರಂಭವಾಗುವ ಚಾಮರಾಜನಗರ ಜಿಲ್ಲೆಗೆ ಸ್ವಾಗತ ಕೋರುವ ಕಮಾನು ಗೇಟ್ ಬಳಿ ಜೆಎಸ್‌ಎಸ್ ಶಾಲಾ ವಿದ್ಯಾರ್ಥಿಗಳು ಬ್ಯಾಂಡ್ ನುಡಿಸಿದರು.   

ಸಂತೇಮರಹಳ್ಳಿ: ಶಿಕ್ಷಕರು ಹಾಗೂ ಅಧಿಕಾರಿ ವರ್ಗದ ಪುರುಷರು ಬಿಳಿ ಶರ್ಟ್ ಹಾಗೂ ಬಿಳಿ ಪಂಚೆ ಮತ್ತು ಶಿಕ್ಷಕಿಯರು ಹಾಗೂ ವಿವಿಧ ಸಂಘಟನೆಯ ಮಹಿಳೆಯರು ಹಸಿರು ಬಣ್ಣದ ಸೀರೆ ಧರಿಸಿ ಮಕ್ಕಳೊಂದಿಗೆ ಭಾನುವಾರ ನಡೆದ ವಿಶ್ವ ಪ್ರಜಾಪ್ರಭುತ್ವದ ದಿನದಲ್ಲಿ ಭಾಗವಹಿಸಿ ಯಶಸ್ಸಿಗೆ ಕಾರಣರಾದರು.

ವಿಶ್ವ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ನಡೆದ ಮಾನವ ಸರಪಳಿ ಕಾರ್ಯಕ್ರಮ ಶಾಲಾ ಕಾಲೇಜು ವಿದ್ಯಾರ್ಥಿಗಳು, ಅಧಿಕಾರಿಗಳು ಹಾಗೂ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.

ಮಹಿಳೆಯರು ಪೂರ್ಣಕುಂಭ, ವಿದ್ಯಾರ್ಥಿಗಳು ನೃತ್ಯ, ಕೋಲಾಟ, ಹುಲಿವೇಶ ಸೇರಿದಂತೆ ವಿಶ್ವ ಪ್ರಜಾಪ್ರಭುತ್ವ ದಿನದ ಮಾನವ ಸರಪಳಿಗೆ ಸಾಂಸ್ಕೃತಿಕ ಮೆರಗು ನೀಡಿದರು.

ADVERTISEMENT

ಮೈಸೂರು ಜಿಲ್ಲೆ ಗಡಿಯಾದ ಚಾಮರಾಜನಗರ ಜಿಲ್ಲೆ ಆರಂಭವಾಗುವ ಮೂಗೂರು ಕ್ರಾಸ್‌ನಿಂದ ಬಾಣಹಳ್ಳಿ ಗೇಟ್, ಕಮರವಾಡಿ ಗೇಟ್, ಬಸವಟ್ಟಿ, ಸಂತೇಮರಹಳ್ಳಿ ವೃತ್ತ ಹಾಗೂ ಮಂಗಲದ ಮೂಲಕ ಚಾಮರಾಜನಗರ ಜಿಲ್ಲಾ ಕೇಂದ್ರದವರೆಗೂ ಶಾಲಾ ಕಾಲೇಜು ವಿದ್ಯಾರ್ಥಿಗಳು ಮಾನವ ಸರಪಳಿ ನಿರ್ಮಿಸಿದ್ದರು.

 ಮೂಗೂರು ಗೇಟ್ ಬಳಿ ಸಂತೇಮರಹಳ್ಳಿಯ ಜೆಎಸ್‌ಎಸ್ ಶಾಲಾ ವಿದ್ಯಾರ್ಥಿಗಳು ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಹಾಗೂ ಶಾಸಕ ಎ.ಆರ್.ಕೃಷ್ಣಮೂರ್ತಿ ಅವರಿಗೆ ಬ್ಯಾಂಡ್ ಬಾರಿಸುವ ಮೂಲಕ ಸ್ವಾಗತ ಕೋರಿದರು.

ಅಲ್ಲಿಂದ ಸಂತೇಮರಹಳ್ಳಿ ವೃತ್ತದವರೆಗೂ ಕೊಳ್ಳೇಗಾಲ, ಯಳಂದೂರು ತಾಲ್ಲೂಕು ಹಾಗೂ ಸಂತೇಮರಹಳ್ಳಿ ವ್ಯಾಪ್ತಿ ಸರ್ಕಾರಿ ಶಾಲಾ ಕಾಲೇಜು, ಅನುದಾನಿತ ಹಾಗೂ ಅನುದಾನ ರಹಿತ ಶಾಲಾ ಕಾಲೇಜು ವಿದ್ಯಾರ್ಥಿಗಳು, ಅಂಗನವಾಡಿ, ಆಶಾ ಹಾಗೂ ವಿವಿಧ ಸಂಘಟನೆಯ ಮಹಿಳೆಯರು ಭಾಗವಹಿಸಿದ್ದರು.

ರಸ್ತೆ ಬದಿಯಲ್ಲಿ ಮಾನವ ಸರಪಳಿಯಲ್ಲಿ ನಿಂತು ನಾಡಗೀತೆ ಹಾಡಿದರು. ನಂತರ ಸಂವಿಧಾನ ಪೀಠಿಕೆ ವಾಚನ ಮಾಡಿದ ನಂತರ ರಾಷ್ಟ್ರಗೀತೆ ಹಾಡಲಾಯಿತು.

ಸಂತೇಮರಹಳ್ಳಿ ವೃತ್ತದಲ್ಲಿ ಹಸಿರು ತೋರಣ ಹಾಗೂ ಬೃಹದಾಕಾರದಲ್ಲಿ ನಿಲ್ಲಿಸಿದ್ದ ಸಂವಿಧಾನ ಪೀಠಿಕೆಗೆ ಶಿಕ್ಷಕರು ಹಾಗೂ ಗಣ್ಯರು ಪುಷ್ಬಾರ್ಚನೆ ಸಲ್ಲಿಸಿದರು.

ಸಂತೇಮರಹಳ್ಳಿಯಲ್ಲಿ ನಡೆದ ವಿಶ್ವ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಯಳಂದೂರು ಪಟ್ಟಣದ ಎಸ್‌ಡಿವಿಎಸ್ ಶಾಲಾ ವಿದ್ಯಾರ್ಥಿಗಳು ಸಂವಿಧಾನ ಪೀಠಿಕೆ ವಾಚನ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.