ADVERTISEMENT

Womens Day: ಗ್ರಾಮದ ಸ್ವಚ್ಛತಾ ಸೇನಾನಿ ಈ ಮಹೇಶ್ವರಿ!

ಮಹದೇವ್ ಹೆಗ್ಗವಾಡಿಪುರ
Published 8 ಮಾರ್ಚ್ 2024, 7:17 IST
Last Updated 8 ಮಾರ್ಚ್ 2024, 7:17 IST
ಚಾಮರಾಜನಗರ ತಾಲ್ಲೂಕಿನ ಕುದೇರು ಪಂಚಾಯಿತಿಯಲ್ಲಿ ಕಸ ಸಂಗ್ರಹ ವಾಹನ ಚಲಾಯಿಸುತ್ತಿರುವ ಮಹೇಶ್ವರಿ 
ಚಾಮರಾಜನಗರ ತಾಲ್ಲೂಕಿನ ಕುದೇರು ಪಂಚಾಯಿತಿಯಲ್ಲಿ ಕಸ ಸಂಗ್ರಹ ವಾಹನ ಚಲಾಯಿಸುತ್ತಿರುವ ಮಹೇಶ್ವರಿ    

ಸಂತೇಮರಹಳ್ಳಿ: ಇವರ ಹೆಸರು ಮಹೇಶ್ವರಿ. ಸದಾ ಸಾರ್ವಜನಿಕ ವ್ಯವಹಾರದಲ್ಲಿ ಗುರುತಿಸಿಕೊಂಡು ಜನರಿಗೆ ಸೇವೆ ಮಾಡಿ ಸಾಧನೆ ಮಾಡಬೇಕು ಎಂಬ ಹಂಬಲ ಹೊಂದಿರುವವರು. ಪುರುಷರಷ್ಟೇ ಮಾಡುತ್ತಿದ್ದ ಕಸ ಸಂಗ್ರಹ ವಾಹನ ಚಾಲನೆ ಹಾಗೂ ನಿರ್ವಹಣೆಯ ಜವಾಬ್ದಾರಿಯನ್ನು ಹೊತ್ತುಕೊಂಡು, ಅದನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದ್ದಾರೆ. 

ಕುದೇರು ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಮನೆ ಮನೆಗಳಿಗೆ ತೆರಳಿ ಕಸ ಸಂಗ್ರಹಿಸಿ ವಿಲೇವಾರಿ ಮಾಡುವ ಕಾಯಕವನ್ನು ಮಹೇಶ್ವರಿ ಆಯ್ಕೆ ಮಾಡಿಕೊಂಡಿದ್ದಾರೆ. ಆ ಮೂಲಕ ಗ್ರಾಮದ ಸ್ವಚ್ಛತಾ ಸೇನಾನಿಯಾಗಿದ್ದಾರೆ.   

ಗ್ರಾಮ ಪಂಚಾಯಿತಿಯ ತ್ಯಾಜ್ಯ ವಿಲೇವಾರಿ ವಾಹನಕ್ಕೆ ಚಾಲಕರು ಇರಲಿಲ್ಲ. ಆ ಸಮಯದಲ್ಲಿ ಮಹೇಶ್ವರಿ ಅವರು ಸ್ವ ಆಸಕ್ತಿಯಿಂದ ಚಾಮರಾಜನಗರದಲ್ಲಿ ಚಾಲಕ ವೃತ್ತಿ ತರಬೇತಿ ಪಡೆದರು. ಜಿಲ್ಲಾ ಪಂಚಾಯಿತಿಯ ಮೇಲ್ವಿಚಾರಣೆಯಲ್ಲಿ ಸ್ವಚ್ಛ ಭಾರತ್ ಅಭಿಯಾನದಲ್ಲಿ ಕಸ ವಿಲೇವಾರಿಯ ತರಬೇತಿಯನ್ನೂ ಪಡೆದರು.

ADVERTISEMENT

ಇದೀಗ ಕುದೇರು ಗ್ರಾಮಪಂಚಾಯಿತಿ ಕಚೇರಿ ವ್ಯಾಪ್ತಿಯಲ್ಲಿ ಕಸ ವಿಲೇವಾರಿ ವಾಹನಕ್ಕೆ ತಾವೇ ಚಾಲಕರಾಗಿ ಮನೆ ಮನೆಗಳಿಗೆ ಭೇಟಿ ನೀಡುತ್ತಾರೆ. ಅಲ್ಲಿ ಮನೆ ಮನೆಗಳಿಂದ ಕಸ ಸಂಗ್ರಹಿಸಿ ಗ್ರಾಮದ ಹೊರಭಾಗದಲ್ಲಿ ವಿಲೇವಾರಿ ಮಾಡುತ್ತಾರೆ. 

ಕಸ ವಿಲೇವಾರಿ ಮಾಡುವುದರ ಜತೆಗೆ ಗ್ರಾಮದ ಮಹಿಳೆಯರಿಗೆ ಸ್ವಚ್ಛ ಭಾರತ್ ಅಭಿಯಾನ, ನೈರ್ಮಲ್ಯದ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ. ಗ್ರಾಮವನ್ನು ಸ್ವಚ್ಛಗೊಳಿಸುವ ನಿಟ್ಟಿನಲ್ಲಿ ಪಂಚಾಯಿತಿ ರೂಪಿಸುವ ಕಾರ್ಯಕ್ರಮಗಳಲ್ಲಿ ಮಹೇಶ್ವರಿ ಅವರ ಭಾಗಿದಾರಿಕೆ ಹೆಚ್ಚಿದೆ. ಮೂಲದಲ್ಲಿ ಹಸಿ ಕಸ ಮತ್ತು ಒಣ ಕಸವನ್ನು ಪ್ರತ್ಯೇಕಗೊಳಿಸುವ ಬಗ್ಗೆ ಪ್ರತಿ ದಿನ ಜನರಿಗೆ ತಿಳಿ ಹೇಳುವ ಕೆಲಸವನ್ನು ಅವರು ಮಾಡುತ್ತಿದ್ದಾರೆ. 

ಬಿಡುವಿನ ವೇಳೆಯಲ್ಲಿ ಇವರು ರಾಷ್ಟ್ರೀಯ ಜೀವನೋಪಾಯ ಅಭಿಯಾನದಲ್ಲಿ (ಎನ್‌ಆರ್‌ಎಲ್‌ಎಂ) ತರಬೇತಿ ಪಡೆದು ಜನ ಉಪಯೋಗಿ ವಸ್ತುಗಳನ್ನು ತಯಾರಿಸುತ್ತಿದ್ದಾರೆ. ಫೈಲ್‌ಗಳನ್ನು ತಯಾರಿಸಿ ಜಿಲ್ಲಾ, ತಾಲ್ಲೂಕು ಹಾಗೂ ಗ್ರಾಮಪಂಚಾಯಿತಿ ಕಚೇರಿಗಳಿಗೆ ಮಾರಾಟ ಮಾಡಿಯೂ ಜೀವನ ನಿರ್ವಹಿಸುತ್ತಿದ್ದಾರೆ.  

ಮಹೇಶ್ವರಿ

Quote - ಇಷ್ಟಪಟ್ಟು ಈ ಕೆಲಸ ಆಯ್ಕೆ ಮಾಡಿಕೊಂಡಿದ್ದು ಖುಷಿ ಕೊಡುತ್ತಿದೆ. ಮನೆಯವರು ಗ್ರಾಮಸ್ಥರು ಸಹಕಾರ ನೀಡುತ್ತಿದ್ದಾರೆ. ಇದರಿಂದ ಹೆಚ್ಚು ಕೆಲಸ ಮಾಡಲು ಉತ್ತೇಜನ ಸಿಗುತ್ತಿದೆ. ಮಹೇಶ್ವರಿ ಕುದೇರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.