ADVERTISEMENT

ಏಡ್ಸ್ ತಡೆಯಲು ಜನಜಾಗೃತಿ ಅಗತ್ಯ: ಶ್ರೀಧರ

ವಿಶ್ವ ಏಡ್ಸ್‌ ದಿನಾಚರಣೆ, ಜಾಗೃತಿ ಜಾಥಾ, ಮೊಂಬತ್ತಿ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2023, 6:37 IST
Last Updated 2 ಡಿಸೆಂಬರ್ 2023, 6:37 IST
ಜಿಲ್ಲಾಡಳಿತ, ಆರೋಗ್ಯ ಇಲಾಖೆಯ ವತಿಯಿಂದ ಆಯೋಜಿಸಲಾಗಿದ್ದ ವಿಶ್ವ ಏಡ್ಸ್‌ ದಿನಾಚರಣೆ ಕಾರ್ಯಕ್ರಮದಲ್ಲಿ ನರ್ಸಿಂಗ್‌ ವಿದ್ಯಾರ್ಥಿಗಳು ಹಾಗೂ ಆರೋಗ್ಯ ಕಾರ್ಯಕರ್ತರು ಭಾಗವಹಿಸಿದ್ದರು
ಜಿಲ್ಲಾಡಳಿತ, ಆರೋಗ್ಯ ಇಲಾಖೆಯ ವತಿಯಿಂದ ಆಯೋಜಿಸಲಾಗಿದ್ದ ವಿಶ್ವ ಏಡ್ಸ್‌ ದಿನಾಚರಣೆ ಕಾರ್ಯಕ್ರಮದಲ್ಲಿ ನರ್ಸಿಂಗ್‌ ವಿದ್ಯಾರ್ಥಿಗಳು ಹಾಗೂ ಆರೋಗ್ಯ ಕಾರ್ಯಕರ್ತರು ಭಾಗವಹಿಸಿದ್ದರು   

ಚಾಮರಾಜನಗರ: ಎಚ್‌ಐವಿ ಸೋಂಕಿತರ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ, ಸೋಂಕು ಇತರರಿಗೆ ಹರಡದಂತೆ ತಡೆಯಲು ಜನಜಾಗೃತಿ ಮೂಡಿಸುವುದು ಅಗತ್ಯವಾಗಿದೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶ್ರೀಧರ ಎಂ. ಅವರು ಶುಕ್ರವಾರ ಹೇಳಿದರು. 

ನಗರದ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್‌ಷನ್ ಸೊಸೈಟಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ಪ್ರತಿಬಂಧಕ ಹಾಗೂ ನಿಯಂತ್ರಣ ಘಟಕ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಹಾಗೂ ವಿವಿಧ ಸ್ಥಳೀಯ ಸ್ವಯಂ ಸೇವಾ ಸಂಸ್ಥೆಗಳ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವ ಏಡ್ಸ್ ದಿನಾಚರಣೆ ಕಾರ್ಯಕ್ರಮದಲ್ಲಿ  ಅವರು ಮಾತನಾಡಿದರು.

‘ಸಮಾಜದಲ್ಲಿ ಎಚ್‌ಐವಿ ಸೋಂಕಿತರಿಗೂ ಎಲ್ಲರಂತೆ ಬದುಕುವ ಹಕ್ಕಿದೆ. ಸೋಂಕಿತರನ್ನು ಸಮಾನತೆಯಿಂದ ನೊಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ. ಮುಂದಿನ ದಿನಗಳಲ್ಲಿ ಏಡ್ಸ್ ಇತರರಿಗೆ ಹರಡದಂತೆ ತಡೆಯುವುದು ಅತ್ಯಾವಶ್ಯಕ. ಈ ನಿಟ್ಟಿನಲ್ಲಿ ಸಂಘಸಂಸ್ಥೆಯವರೊಂದಿಗೆ ಸಮನ್ವಯ ಸಾಧಿಸಿ ಎಲ್ಲರ ಸಹಕಾರ ಪಡೆದು ಸೋಂಕು ತಡೆಗೆ ಮುಂದಾಗಬೇಕು’ ಎಂದು ತಿಳಿಸಿದರು.

ADVERTISEMENT

‘ವಿಶ್ವದಲ್ಲಿ ಎಚ್‌ಐವಿ ಸೋಂಕಿತರ ಸಂಖ್ಯೆ ಹೆಚ್ಚು ಇರುವ ದೇಶಗಳಲ್ಲಿ ಭಾರತ 9ನೇ ಸ್ಥಾನದಲ್ಲಿದೆ. ಸೋಂಕಿನ ಬಗ್ಗೆ ಅರಿವು ಮೂಡಿಸಲು ವಿಶ್ವ ಏಡ್ಸ್ ದಿನ ಆಚರಣೆಯನ್ನು 1988ರಿಂದ ಈವರೆಗೂ ಸತತವಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಏಡ್ಸ್ ದಿನದ ಮಹತ್ವವನ್ನು ಪ್ರತಿಯೊಬ್ಬರು ಅರಿಯಬೇಕು. 2030ರೊಳಗೆ ದೇಶವನ್ನು ಏಡ್ಸ್‌ನಿಂದ ಮುಕ್ತಗೊಳಿಸಲು ಎಲ್ಲರು ಪಣತೊಡಬೇಕು’ ಎಂದು ಶ್ರೀಧರ ಅವರು ಕರೆ ನೀಡಿದರು. 

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಚಿದಂಬರ ಮಾತನಾಡಿ, ‘1981ರಲ್ಲಿ ಪ್ರಪಂಚದಲ್ಲಿ ಏಡ್ಸ್ ವೈರಸ್ ಪತ್ತೆಯಾಯಿತು. 1983ರಲ್ಲಿ ದೇಶದಲ್ಲಿ ಮೊದಲ ಬಾರಿಗೆ ಸೋಂಕು ಕಂಡು ಬಂತು. ಅಸುರಕ್ಷಿತ ಲೈಂಗಿಕತೆ, ಉಪಯೋಗಿಸಿ ಸಂಸ್ಕರಿಸದ ಸೂಜಿಯಿಂದ, ತಾಯಿಯಿಂದ ಮಗುವಿಗೆ, ಪರೀಕ್ಷೆ ಮಾಡಿಸಿಲ್ಲದ ರಕ್ತದಾನಿಗಳಿಂದ ಸೋಂಕು ಹರಡುವ ಸಂಭವ ಹೆಚ್ಚಾಗಿದೆ. ಏಡ್ಸ್ ತಡೆಯಲು ಎಲ್ಲರೂ ದೃಢಸಂಕಲ್ಪ ಮಾಡಬೇಕು’ ಎಂದರು.

ಜಿಲ್ಲಾ ಏಡ್ಸ್ ಪ್ರತಿಬಂಧಕ ಹಾಗೂ ನಿಯಂತ್ರಣಾ ಅಧಿಕಾರಿ ಡಾ. ಎಂ.ಎಸ್. ರವಿಕುಮಾರ್, ವಿವಿಧ ಸ್ವಯಂ ಸೇವಾ ಸಂಘದ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಜಾಗೃತಿ ಜಾಥಾ ಮೊಂಬತ್ತಿ ಮೆರವಣಿಗೆ:

ಇದಕ್ಕೂ ಮೊದಲು ನಗರದ ಚಾಮರಾಜೇಶ್ವರ ದೇವಸ್ಥಾನ ಬಳಿ ಆಯೋಜಿತವಾಗಿದ್ದ ಜಾಗೃತಿ ಜಾಥಾಗೆ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಜಿಲ್ಲಾ ಪಂಚಾಯಿತಿ ಸಿಇಒ ಆನಂದ್ ಪ್ರಕಾಶ್ ಮೀನಾ ನ್ಯಾಯಾಧೀಶ ಶ್ರೀಧರ ಎಂ. ಜಿಲ್ಲಾ ಆರೋಗ್ಯಾಧಿಕಾರಿ ಇತರರು ಚಾಲನೆ ನೀಡಿದರು.

ಜಾಥಾ ಆರಂಭದಲ್ಲಿ ಜನಜಾಗೃತಿ ಕುರಿತ ಬೀದಿನಾಟಕವನ್ನು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ನಡೆಸಿಕೊಟ್ಟರು. ಸಂಜೆ ನಡೆದ ಕಾರ್ಯಕ್ರಮದಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ಮೇಣದ ಬತ್ತಿ ಹಚ್ಚಿ ಜಿಲ್ಲಾಡಳಿತ ಭವನದಿಂದ  ಭವನದ ಗೇಟ್‌ವರೆಗೆ ಮೆರವಣಿಗೆ ನಡೆಸಿದರು. ಜಿಲ್ಲಾಡಳಿತ ಗೇಟ್‌ ಮೂಂಭಾಗ ಬಣ್ಣಗಳಿಂದ ಬಿಡಿಸಿದ ಏಡ್ಸ್ ಲಾಂಛನದ ಆಕಾರದಲ್ಲಿ ಮೇಣದ ಬತ್ತಿಗಳನ್ನು ಇಟ್ಟು ಸೋಂಕಿನಿಂದಾಗಿ ನಿಧನರಾದವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.