ಯಳಂದೂರು: ಮನೆ, ಮಾಡು, ಹೊಲ, ಕಾನನ ಎನ್ನದೆ ಹೂ ಮೇಲೆ ಕುಳಿತು ಮಕರಂದ ಹೀರುವ ದುಂಬಿಗಳ ಝೇಂಕಾರ ಎಲ್ಲರ ಚಿತ್ತವನ್ನು ಸೆಳೆಯುತ್ತದೆ. ಹತ್ತಿರ ಇಣುಕಿದಾಗ ಬಗೆ ಬಗೆ ಜೇನ್ದುಂಬಿಗಳ ಸಾಂಗತ್ಯದಲ್ಲಿ ಪರಾಗಸ್ಪರ್ಶ ಕ್ರಿಯೆ ಜರುಗಿರುತ್ತದೆ. ಭೂ ಗ್ರಹದ ಸಮಸ್ತ ಸಸ್ಯಲೋಕವನ್ನು ಹೊಸ ಹುಟ್ಟಿನೊಂದಿಗೆ ಧರೆಗೆ ಇಳಿಸುವ ಜೇನು ಸಂತತಿ ಈ ವರ್ಷದ ಬಿಸಿಲಿಗೆ ಆವಾಸ ಬದಲಿಸಿದೆ. ಸುಮಧುರ ವನಸುಮ ಹುಡುಕುತ್ತ ವಲಸೆ ಹೊರಟ ಜೇನು ಕುಟುಂಬಗಳನ್ನು ಕರೆತರಲು ಮಳೆರಾಯನು ಮಾನ್ಸೂನ್ ರಾಗ ಹಾಡಬೇಕಿದೆ.
ತಾಲ್ಲೂಕಿನ ಬಿಆರ್‌ಟಿ ವನ್ಯಧಾಮ ಸಂಕ್ರಾಂತಿಯಿಂದ ಸಪ್ತಮಾಸ ಕಾಲ ತರುಲತೆಗಳಿಗೆ ಜೀವ ತುಂಬುತ್ತದೆ. ಈ ಸಮಯದಲ್ಲಿ ಜೇನು ನೊಣಗಳು ಬಗೆ ಬಗೆ ಪುಷ್ಪಗಳಿಂದ ಮಕರಂದ ಸಂಗ್ರಹಿಸಿ, ಗೂಡುಗಳಿಗೆ ಹಿಂದಿರುಗುತ್ತವೆ. ಪರಿಸರ, ಆಹಾರ ಭದ್ರತೆ ಮತ್ತು ಜೀವ ವೈವಿಧ್ಯತೆಗಾಗಿ ತುಡಿಯುವ ಜೇನುನೊಣಗಳ ಆವಾಸ ಉತ್ತಮ ಇರಬೇಕು. ಇದು ಬೀಜಗಳ ಫಲೀಕರಣಕ್ಕೆ, ಸಾವಿರಾರು ಫಲ, ಪುಷ್ಪಗಳನ್ನು ಸ್ಪರ್ಶಿಸಿ ಜೇನುಜೀವ ಜಗತ್ತನ್ನು ಪೊರೆಯುತ್ತದೆ.
ನಿಸರ್ಗದಲ್ಲಿ ಸಸ್ಯಗಳು ವೇಗವಾಗಿ ಮತ್ತು ಆರೋಗ್ಯಯುತವಾಗಿ ಬೆಳೆಯಲು ಜೇನು ಸಂಸರ್ಗ ಇರಬೇಕು. ಕೃಷಿ ಕ್ಷೇತ್ರದಲ್ಲಿ ಉತ್ಪಾದಕತೆ ಹೆಚ್ಚಿಸುವಲ್ಲಿ ಜೇನುನೊಣದ ಸಮೃದ್ಧತೆ ಜೀವ ತುಂಬಬೇಕು. ಆದರೆ, ಆಧುನಿಕ ಕೃಷಿ ಪದ್ಧತಿಯ ಭಾಗವಾದ ರಸಗೊಬ್ಬರ ಮತ್ತು ಕೀಟನಾಶಕ ಬಳಕೆ ಜೇನು ಸಂತತಿ ಕುಸಿಯಲು ಕಾರಣವಾಗಿದೆ. ಎರಡು ವರ್ಷಗಳಿಂದ ನಾಡು-ಕಾಡುಗಳಲ್ಲಿ ಬರ ಆವರಿಸಿದೆ. ತೇವಾಂಶ ಕೊರತೆಯೂ ಕಾಡಿದೆ.
‘ಬಿಆರ್‌ಟಿ ಕಾಡಿನ ಹೆಜ್ಜೇನು ವರ್ಷದಲ್ಲಿ ಒಮ್ಮೆ ವಲಸೆ ಹೋಗಿ ಮಳೆಗಾಲದಲ್ಲಿ ಹಿಂದಿರುಗುತ್ತವೆ. ಈ ಅವಧಿಯಲ್ಲಿ ಹೂ ಅರಳಿಸುವ ಗಿಡ, ವೃಕ್ಷ, ಸಸ್ಯಗಳ ದಟ್ಟಣೆ ಆಧಾರದಲ್ಲಿ ಜೇನು ಸಂಗ್ರಹದಲ್ಲೂ ವ್ಯತ್ಯಾಸ ಆಗುತ್ತದೆ. ಆದರೆ, ಈ ಸಲ ಮಳೆ ಕುಸಿದು ಜೇನಿನ ಉತ್ಪಾದಕತೆಯನ್ನು ಕಡಿಮೆ ಮಾಡಿದೆ’ ಎಂದು ಬುಡಕಟ್ಟು ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ಮಾದೇಗೌಡ ಹೇಳಿದರು.
ಜೇನ್ನೊಣ ದಿನದ ಮಹತ್ವ: ‘ಪ್ರತಿ ವರ್ಷ ಮೇ 20 ಅನ್ನು ಜೇನು ನೊಣಗಳ ದಿನವನ್ನಾಗಿ ಆಚರಿಸಲಾಗುತ್ತದೆ. ಜೇನ್ನೊಣ ಮಾತ್ರವಲ್ಲದೆ, ಪರಾಗಸ್ಪರ್ಶ ಮಾಡುವ ಕೀಟಗಳ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ವಿಶ್ವ ಜೇನು ನೊಣಗಳ ದಿನ ಆಚರಿಸಲಾಗುತ್ತದೆ.
‘ಜೊತೆ ಯುವಕರು' ಈ ವರ್ಷದ ಧ್ಯೇಯ ವಾಕ್ಯ. ಮನುಕುಲದ ಉದ್ಧಾರಕ್ಕೆ ತುಡಿಯುವ ಜೇನು ಉಳಿಸಬೇಕು. ಹಾಗಾಗಿ, ಆಧುನಿಕ ಜೇನು ಸಾಕಣೆ ಪ್ರವರ್ತಕ ಆಂಟನ್ ಜಾನ್ಸಾ ಜನ್ಯದಿನದ ಅಂಗವಾಗಿ ಜೇನುನೊಣ ದಿನ ಆಚರಿಸಲಾಗುತ್ತದೆ. ಸಾಂಪ್ರದಾಯಿಕ ಕೃಷಿ ಚಟುವಟಿಕೆ ಅಂಗವಾಗಿ ಜೇನು ಉತ್ಪಾದಿಸುವುದು. ಜೇನು ಜೀವನೋಪಾಯ ಮತ್ತು ಸುಸ್ಥಿರ ಅಭಿವೃದ್ಧಿಗೆ ನೆರವು ನೀಡುವುದು. ಕಾನನ ಮತ್ತು ಸಸ್ಯ ಸಂಪತ್ತು ಉಳಿಸುವಲ್ಲಿ ಪರಾಗಸ್ಪರ್ಶ ಕ್ರಿಯೆಯಲ್ಲಿ ಜೀನಿನ ಮಹತ್ವ ಸಾರುವ ಉದ್ಧೇಶವನ್ನು ವಿಶ್ವಸಂಸ್ಥೆ ಹೊಂದಿದೆ. 2018ರ ಮೇ 20 ರಿಂದ ಸದಸ್ಯ ದೇಶಗಳಿಗೆ ‘ಜೇನು ದಿನ’ ಆಚರಿಸಲು ಕರೆ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.