ADVERTISEMENT

ದಾದಿಯರು ಆಸ್ಪತ್ರೆ ಬೆನ್ನೆಲುಬು: ಡಾ.ಮಂಜುನಾಥ್‌

ಜೆಎಸ್‌ಎಸ್‌ ಆಸ್ಪತ್ರೆಯಲ್ಲಿ ವಿಶ್ವ ದಾದಿಯರ ದಿನಾಚರಣೆ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 15 ಮೇ 2024, 4:36 IST
Last Updated 15 ಮೇ 2024, 4:36 IST
ಚಾಮರಾಜನಗರದ ಜೆಎಸ್ಎಸ್ ಆಸ್ಪತ್ರೆಯಲ್ಲಿ ನಡೆದ ವಿಶ್ವ ದಾದಿಯರ ದಿನಾಚರಣೆ ಕಾರ್ಯಕ್ರಮದಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿರುವ ರಾಣಿ, ಎಸ್.ಮಂಜುನಾಥ್ ಮತ್ತು ಮಧು ಅವರನ್ನು ಗಣ್ಯರು ಸನ್ಮಾನಿಸಿದರು. ಸಿಮ್ಸ್‌ ಡೀನ್‌ ಡಾ.ಮಂಜುನಾಥ್‌, ಡಾ.ಮಹೇಶ್‌, ಡಾ.ವಿಕಾಸ್‌, ವಿನಯ್‌ಕುಮಾರ್‌ ಇತರರು ಪಾಲ್ಗೊಂಡಿದ್ದರು
ಚಾಮರಾಜನಗರದ ಜೆಎಸ್ಎಸ್ ಆಸ್ಪತ್ರೆಯಲ್ಲಿ ನಡೆದ ವಿಶ್ವ ದಾದಿಯರ ದಿನಾಚರಣೆ ಕಾರ್ಯಕ್ರಮದಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿರುವ ರಾಣಿ, ಎಸ್.ಮಂಜುನಾಥ್ ಮತ್ತು ಮಧು ಅವರನ್ನು ಗಣ್ಯರು ಸನ್ಮಾನಿಸಿದರು. ಸಿಮ್ಸ್‌ ಡೀನ್‌ ಡಾ.ಮಂಜುನಾಥ್‌, ಡಾ.ಮಹೇಶ್‌, ಡಾ.ವಿಕಾಸ್‌, ವಿನಯ್‌ಕುಮಾರ್‌ ಇತರರು ಪಾಲ್ಗೊಂಡಿದ್ದರು   

ಚಾಮರಾಜನಗರ: ದಾದಿಯರು ಆಸ್ಪತ್ರೆಗಳ ಬೆನ್ನೆಲುಬು ಎಂದು ಚಾಮರಾಜನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಗಳ ಡೀನ್ ಹಾಗೂ ನಿರ್ದೇಶಕ ಡಾ.ಎಚ್.ಜಿ.ಮಂಜುನಾಥ್ ಮಂಗಳವಾರ ಹೇಳಿದರು. 

ನಗರದ ಜೆ.ಎಸ್.ಎಸ್. ಆಸ್ಪತ್ರೆಯಲ್ಲಿ ನಡೆದ ವಿಶ್ವ ದಾದಿಯರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಚಿಕಿತ್ಸೆಗಾಗಿ ಬಂದಂತಹ ರೋಗಿಗಳನ್ನು ದಾದಿಯರು ನಗು ಮುಖದಿಂದ ಸ್ವಾಗತಿಸಿದಾಗಲೇ ರೋಗಿಗಳ ಅರ್ಧ ಕಾಯಿಲೆ ಗುಣ ಆಗಿರುತ್ತದೆ ಮತ್ತು ಅವರು ರೋಗಿಗಳೊಂದಿಗೆ ಆತ್ಮೀಯವಾಗಿ ಒಡನಾಡಿ ಮಾನಸಿಕವಾಗಿ ಧೈರ್ಯ ತುಂಬುವ ಕೆಲಸ ಮಾಡುತ್ತಾರೆ. ನರ್ಸಿಂಗ್ ವೃತ್ತಿ ಎಷ್ಟು ಪ್ರಾಮುಖ್ಯವಾದುದು ಎಂಬುದನ್ನು ಫ್ಲಾರೆನ್ಸ್‌ ನೈಟಿಂಗೇಲ್ ತೋರಿಸಿಕೊಟ್ಟಿದ್ದಾರೆ’ ಎಂದರು. 

‘ಶುಷ್ರೂಷಕರು ತಮ್ಮ ಕೆಲಸವನ್ನು ಬೇಸರ ಮಾಡಿಕೊಳ್ಳದೆ, ಶ್ರದ್ಧೆ ಮತ್ತು ಪ್ರಾಮಾಣಿಕತೆಯಿಂದ ಮಾಡಿದರೆ ವೃತ್ತಿಯಲ್ಲಿ ಮೇಲೆ ಬರಲು ಸಾಧ್ಯ’ ಎಂದು ಮಂಜುನಾಥ್‌ ಕಿವಿ ಮಾತು ಹೇಳಿದರು. 

ADVERTISEMENT

ಜಿಲ್ಲಾಸ್ಪತ್ರೆಯ ಸ್ಥಾನಿಕ ವೈದ್ಯಾಧಿಕಾರಿ ಡಾ.ಎಂ.ಮಹೇಶ್ ಮಾತನಾಡಿ, ‘ಎಲ್ಲರೂ ಕೆಲಸ ಮಾಡುತ್ತಾರೆ. ಆದರೆ, ತಮ್ಮ ಕೆಲಸದ ಮೂಲಕ ಗುರುತಿಸಿಕೊಳ್ಳುವುದು ಬಹಳ ಮುಖ್ಯ. ದಾದಿಯರ ವೃತ್ತಿಗೆ ವಿಶೇಷ ಸ್ಥಾನಮಾನ ಇದೆ. ನಾವು ಯಾವುದೇ ಕೆಲಸ ಮಾಡಿದರೂ ಅದನ್ನು ದಾಖಲಿಸಬೇಕು. ಅದು ಮುಂದಕ್ಕೆ ಪ್ರಯೋಜನಕ್ಕೆ ಬರುತ್ತದೆ’ ಎಂದರು. 

ಜೆಎಸ್ಎಸ್ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲ ಜಿ.ವಿನಯಕುಮಾರ್ ಮಾತನಾಡಿಮ, ‘ನರ್ಸಿಂಗ್‌ ಕೋರ್ಸ್‌ ಹಾಗೂ ವೃತ್ತಿಗೆ ಬಹಳ ಬೇಡಿಕೆ ಇದೆ. ರಾಜ್ಯದಲ್ಲಿ 800ಕ್ಕೂ ಹೆಚ್ಚು ನರ್ಸಿಂಗ್ ಶಾಲೆ ಇದ್ದು, ಪ್ರತಿ ವರ್ಷ 45 ಸಾವಿರ ವಿದ್ಯಾರ್ಥಿಗಳು ತರಬೇತಿ ಪಡೆದು ಹೊರಗಡೆ ಬರುತ್ತಿದ್ದಾರೆ’ ಎಂದರು.

ರೋಗಿಗಳ ಪಾಲಿನ ನರ್ಸ್‌ಗಳು ಸಂಜೀವಿನಿಗಳು. ಪರಿಸರ, ಗಾಳಿ, ನೈರ್ಮಲ್ಯಕ್ಕೆ ಎಷ್ಟು ಪ್ರಾಮುಖ್ಯ ಕೊಡಬೇಕು ಎಂದು ಫ್ಲಾರೆನ್ಸ್‌ ನೈಟಿಂಗೇಲ್ ಅವರು  ಅಂದೇ ತಿಳಿಸಿದ್ದರು. ನರ್ಸಿಂಗ್ ಈಗ ಬರೀ ಸೇವೆ ಆಗಿರದೆ ವೃತ್ತಿ ಆಗಿದೆ. ಒಂದು ಆಸ್ಪತ್ರೆ ಚೆನ್ನಾಗಿದೆ ಎಂದರೆ, ಅಲ್ಲಿ ಕೆಲಸ ಮಾಡುವ ದಾದಿಯರು ಮುಖ್ಯ ಕಾರಣ ಆಗುತ್ತಾರೆ’ ಎಂದರು. 

ಆಸ್ಪತ್ರೆಯಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿರುವ ನರ್ಸ್‌ಗಳಾದ ರಾಣಿ, ಎಸ್.ಮಂಜುನಾಥ್ ಮತ್ತು ಮಧು ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಜೆ.ಎಸ್.ಎಸ್ ಶಿಕ್ಷಣ ಸಂಸ್ಥೆಗಳ ಸಾರ್ವಜನಿಕ ಸಂಪರ್ಕಾಧಿಕಾರಿ ಆರ್.ಎಂ.ಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಜೆ.ಎಸ್.ಎಸ್. ಆಸ್ಪತ್ರೆಯ ಸಹಾಯಕ ಆಡಳಿತಾಧಿಕಾರಿ ವಿಕಾಸ್‌ ನಂದಿ ಎನ್, ವೈದ್ಯರು, ಸಿಬ್ಬಂದಿ ಭಾಗವಹಿಸಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.