ಚಾಮರಾಜನಗರ: ಹಿರಿಯರ ಅನುಭವ ಹಾಗೂ ಮಾರ್ಗದರ್ಶನವನ್ನು ಯುವ ಪೀಳಿಗೆಯವರು ಸದ್ಬಳಕೆ ಮಾಡಿಕೊಂಡು ಉತ್ತಮ ಜೀವನ ರೂಪಿಸಿಕೊಳ್ಳಬೇಕು ಎಂದು ಶಾಸಕ ಸಿ. ಪುಟ್ಟರಂಗಶೆಟ್ಟಿ ಶನಿವಾರ ಹೇಳಿದರು.
ಜಿಲ್ಲಾಡಳಿತ ಭವನದಲ್ಲಿರುವ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಹಿರಿಯ ನಾಗರಿಕರ ಸಬಲೀಕರಣ ಕ್ಷೇತ್ರದಲ್ಲಿ ಭಾಗಿಯಾಗಿರುವ ಸ್ಥಳೀಯ ಸ್ವಯಂ ಸೇವಾ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ನಡೆದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಹಿರಿಯರ ಮಾರ್ಗದರ್ಶನ ಯುವಪೀಳಿಗೆಗೆ ದಾರಿದೀಪವಾಗಬೇಕು. ಉತ್ತಮ ಶಿಕ್ಷಣ ಕೊಡಿಸಿ, ಭದ್ರ ಬದುಕು ಕಟ್ಟಿಕೊಳ್ಳಲು ನೆರವಾದ ತಂದೆ ತಾಯಿಯನ್ನು ಸಲಹುವುದೇ ನಮ್ಮ ಕರ್ತವ್ಯ. ತನ್ನ ಕುಟುಂಬದ ಏಳಿಗೆಗೆ ಹಗಲಿರುಳು ದುಡಿದು ಬದುಕಿನ ಸಂಧ್ಯಾಕಾಲದಲ್ಲಿರುವ ಹಿರಿಯರಿಗೆ ಪ್ರೀತಿ, ಗೌರವಗಳಿಂದ ನೋಡಿಕೊಳ್ಳಬೇಕು’ ಎಂದು ಸಲಹೆ ನೀಡಿದರು.
‘ಹಿರಿಯ ನಾಗರಿಕರಿಗೆ ಉತ್ತಮ ಗುಣಮಟ್ಟದ ಜೀವನ ಒದಗಿಸಿಕೊಡುವ ಉದ್ದೇಶದಿಂದ ಹಿರಿಯ ನಾಗರಿಕರಿಗೆ ನೀಡಲಾಗುತ್ತಿರುವ ವೃದ್ಧಾಪ್ಯ ವೇತನವನ್ನು ಹೆಚ್ಚಳ ಮಾಡುವುದರಿಂದ ಸಂಧ್ಯಾಕಾಲದ ಜೀವನ ಸುಧಾರಿಸುತ್ತದೆ’ ಎಂದು ಪುಟ್ಟರಂಗಶೆಟ್ಟಿ ತಿಳಿಸಿದರು.
ನಗರಸಭಾ ಅಧ್ಯಕ್ಷೆ ಸಿ.ಎಂ.ಆಶಾ ಮಾತನಾಡಿ, ‘ಮನೆಗಳಲ್ಲಿ ಹಿರಿಯರನ್ನು ಪ್ರೀತಿ ಗೌರವಗಳಿಂದ ನೋಡಿಕೊಳ್ಳಬೇಕು. ಹಿರಿಯರ ಮಾರ್ಗದರ್ಶನ, ಆಶೀರ್ವಾದ ಇದ್ದರೆ ಮಾತ್ರ ನಾವು ಮುಂದೆ ಬರಲು ಸಾಧ್ಯ’ ಎಂದು ತಿಳಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ ಮಾತನಾಡಿ, ‘ಡಿವಿಜಿಯವರ ಹಳೆ ಬೇರು, ಹೊಸ ಚಿಗುರಿನಂತೆ ನಾವೆಲ್ಲರೂ ಜೀವಿಸಬೇಕು. ಕುಟುಂಬದಲ್ಲಿ ಅಜ್ಜ ಅಜ್ಜಿ, ತಂದೆ ತಾಯಿ, ಮಕ್ಕಳು ಎಲ್ಲರೂ ಇದ್ದಾಗ ಸಿಗುವ ಸಂತೋಷ ಒಂಟಿಯಾಗಿದ್ದಾಗ ಸಿಗುವುದಿಲ್ಲ. ಸರ್ಕಾರ ಹಿರಿಯ ನಾಗರಿಕರಿಗೆ ವೃದ್ದಾಪ್ಯ ವೇತನ ಸೇರಿದಂತೆ ಹಲವು ಬಗೆಯ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಿದೆ’ ಎಂದರು.
ಹಿರಿಯ ನಾಗರಿಕರಾದ ಹುಚ್ಚೇಗೌಡ ಅವರು ಮಾತನಾಡಿ, ‘ಹಿರಿಯ ನಾಗರಿಕರಿಗಾಗಿ ಸರ್ಕಾರ ಇಂತಹ ಕಾರ್ಯಕ್ರಮಗಳನ್ನು ಮಾಡುತ್ತಿರುವುದು ಸಂತಸ ತಂದಿದೆ. ಬಡವರು, ಬಲಹೀನರನ್ನು ಗುರುತಿಸಿ ಸರ್ಕಾರ ಸಹಾಯ ಮಾಡಬೇಕು’ ಎಂದರು.
ಹಿರಿಯ ನಾಗರಿಕರು ಹಾಗೂ ಸ್ವಾತಂತ್ರ್ಯ ಹೋರಾಟಗಾರರಾದ ಲಲಿತ ಜಿ. ತಗತ್, ಹುಚ್ಚೇಗೌಡ, ದಾಸಯ್ಯ, ಸಿ. ಮಾದಯ್ಯ, ಇಬ್ರಾಹಿಂ, ನಿವೃತ್ತ ಶಿಕ್ಷಕ ಸಿ. ಪುಟ್ಟಸ್ವಾಮಿ ಅವರನ್ನು ಸನ್ಮಾನಿಸಲಾಯಿತು.
ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಪ್ರೇಮಕುಮಾರ್, ಸ್ವಯಂ ಸೇವಾ ಸಂಸ್ಥೆಗಳ ಮುಖ್ಯಸ್ಥರಾದ ಗುರುರಾಜ್, ಮಹದೇವಸ್ವಾಮಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.