ಯಳಂದೂರು: ‘ಮಾನವನ ಆವಾಸದಲ್ಲಿ ಸದಾ ಚಿಲಿಪಿಲಿ ಸದ್ದಿನೊಂದಿಗೆ ಮುಂಜಾವಿನ ಸಡಗರ ಸಾರುವ ಹಕ್ಕಿ ಗುಬ್ಬಚ್ಚಿ. ಇವುಗಳ ಸೌಮ್ಯ ಸ್ವಭಾವ ನಮಗೆ ಪಾಠ ಆಗಬೇಕು. ಕಾಳು ಆರಿಸುತ್ತ ಲವಲವಿಕೆಯ ಬದುಕು ಕಟ್ಟಿಕೊಂಡಿರುವ ಇವು ಕೃಷಿ ಪರಿಸರ ಸ್ವಚ್ಛ ಮಾಡುವ ಹಕ್ಕಿಗಳು. ಸದಾ ಕ್ರಿಯಾಶೀಲ ಜೀವನ ನಡೆಸುವ ಇವುಗಳ ಆದರ್ಶ ನಮಗೆ ಪ್ರೇರಕ ಆಗಬೇಕು'
-ಇದು ಮಹಾತ್ಮ ಗಾಂಧೀಜಿ ಮಾತು.
ತಾಲ್ಲೂಕಿನ ಕಾಡು, ಮೇಡು, ಊರು, ಕೇರಿಗಳಲ್ಲಿ ಗುಬ್ಬಿಗಳ ಜಾಡು ಹಿಡಿದು ಹೋದರೆ, ಬಾಪು ಹೇಳಿದ ಮಾತು ನಿಜ ಎನಿಸುತ್ತದೆ. ಗುಬ್ಬಿ ಆವಾಸದತ್ತ ಕಣ್ಣು ಹಾಯಿಸಿದರೆ, ಅವುಗಳ ಸಂಖ್ಯೆ ಕ್ಷೀಣಿಸುತ್ತ ಸಾಗಿರುವುದರ ಅರಿವಾಗುತ್ತದೆ. ಒಂದೆರಡು ದಶಕಗಳಿಂದ ಹೊಲ, ಗದ್ದೆಗಳ ಬದಿ, ಮನೆ, ಪೇಟೆ ಸಾಲಿನಲ್ಲಿ ಸಮೃದ್ಧವಾಗಿ ಇಣುಕುತ್ತಿದ್ದ ಈ ಹಕ್ಕಿಗಳ ಸಂಖ್ಯೆ ಗಣನೀಯವಾಗಿ ಕುಸಿಯುತ್ತಿರುವುದು ಆತಂಕಕಾರಿ ಬೆಳವಣಿಗೆ.
ತಾಲ್ಲೂಕಿನ ಸಾವಿರಾರು ರೈತರು ಹಟ್ಟಿ ಗೊಬ್ಬರ ಸುರಿದು, ಹೊಲದಲ್ಲಿ ಕಾಳು ಚೆಲ್ಲುತ್ತಿದ್ದರು. ಸಮೃದ್ಧ ಭತ್ತ, ರಾಗಿ, ನವಣೆ ಬೆಳೆದು ತೂಗುತ್ತಿತ್ತು. ಗಿಡಗಳಿಗೆ ಮಿಡತೆ, ಕೀಟ, ಹುಳ ಹುಪ್ಪಟೆ ಬಾಧೆ ಇದ್ದರೆ, ಗುಬ್ಬಿಗಳು ತಕ್ಷಣ ಹೆಕ್ಕಿ ಭಕ್ಷಿಸುತ್ತಿದ್ದವು. ಇಳುವರಿಯೂ ಹೆಚ್ಚಾಗುತ್ತಿತ್ತು. ಕೀಟ ಕೊಲ್ಲುವ ಉಸಾಬರಿ ಬೇಸಾಯಗಾರರಿಗೆ ಇರುತ್ತಿರಲಿಲ್ಲ. ಈಗ ಕಾಲ ಬದಲಾಗಿದ್ದು, ಬಿತ್ತನೆಯಿಂದ ಕೊಯ್ಲಿನ ತನಕ ಕೀಟನಾಶಕ ಸಿಂಪಡಿಸಬೇಕಾದ ಸ್ಥಿತಿ ಇದೆ. ಕೀಟ ಭಕ್ಷಣೆ ಮಾಡುತ್ತಿದ್ದ ಪುಟ್ಟ ಪಕ್ಷಿಗಳ ಜೀವ ಲೋಕಕ್ಕೂ ಅಪಾಯ ಎದುರಾಗಿದೆ ಎನ್ನುತ್ತಾರೆ ಪಕ್ಷಿಪ್ರಿಯರು.
ಕಣ್ಮರೆ ಆತಂಕ: ‘ಮಾನವನ ಆವಾಸದಲ್ಲಿ ಪ್ರೀತಿಯಿಂದ ಬದುಕುವ ಕಲೆಗಾರಿಕೆ ಗುಬ್ಬಿಗಳಿಗೆ ಸಿದ್ಧಿಸಿದೆ. ಬಂಧುವಿನಂತೆ ಮನೆ ಅಂಗಳದಲ್ಲಿ ಬದುಕುತ್ತಿದ್ದ ಗುಬ್ಬಿಗಳ ಬದುಕಿಗೂ ತಲ್ಲಣ ಶುರುವಾಗಿದೆ. ಹೆಂಚಿನ ಮನೆ, ತೆರೆದ ಬಾವಿಗಳ ಕೊರತೆ, ಕೈತೋಟಗಳ ಇಳಿಕೆ, ಧಾನ್ಯ ಕೇರುವ, ಒಣಗಿಸುವಲ್ಲಿ ಯಂತ್ರದ ಬಳಕೆ, ಗೋಣಿ ಚೀಲಗಳ ಕಣ್ಮರೆ, ಪ್ಲಾಸ್ಟಿಕ್ ಚೀಲಗಳಲ್ಲಿ ಕಾಳಿನ ಸಂಗ್ರಹ, ರಾಸಾಯನಿಕ ಸೇವಿಸಿದ ಕೀಟಗಳನ್ನು ಗುಬ್ಬಿ ತನ್ನ ಸಂತತಿಗೆ ಉಣಿಸಬೇಕಾದ ಅನಿವಾರ್ಯತೆ ಅವುಗಳ ಅಸ್ತಿತ್ವಕ್ಕೆ ಕಂಟಕವಾಗಿದೆ’ ಎಂದು ಏಟ್ರೀ ವಿಜ್ಞಾನಿ ಸಿದ್ದಪ್ಪಶೆಟ್ಟಿ ‘ಪ್ರಜಾವಾಣಿ’ಗೆ ತಿಳಿಸಿದರು.
‘ಬೇಸಿಗೆ ಸಮಯದಲ್ಲಿ ಮನೆಯ ಮಾಡಿನಲ್ಲಿ ನೀರು, ಧಾನ್ಯ ಇಡುವುದು, ಕೃಷಿಯಲ್ಲಿ ರಾಸಾಯನಿಕ ಬಳಕೆ ತಗ್ಗಿಸುವುದು, ಎಳೆಯರಿಗೆ ಗುಬ್ಬಚ್ಚಿ ಕಥೆ, ಮರಿಗಳ ಆರೈಕೆ, ಗೂಡುಗಳ ಶೈಲಿ ಬಗ್ಗೆ ತಿಳಿಸಬೇಕಿದೆ. ಆ ಮೂಲಕ ಗುಬ್ಬಿ ಸಂತಾನ ವೃದ್ಧಿಸಬೇಕು’ ಎನ್ನುತ್ತಾರೆ ಇವರು.
ವಿಶ್ವ ಗುಬ್ಬಚ್ಚಿ ದಿನ
‘ಐ ಲವ್ ಸ್ಪಾರೋಸ್’ (ನಾನು ಗುಬ್ಬಿಗಳನ್ನು ಪ್ರೀತಿಸುತ್ತೇನೆ) ಎಂಬುದು ಈ ವರ್ಷದ ಗುಬ್ಬಚ್ಚಿ ದಿನದ ಧ್ಯೇಯ ವಾಕ್ಯ.
‘ಜೀವ ವೈವಿಧ್ಯತೆಯಲ್ಲಿ ಈ ಪಕ್ಷಿಗಿರುವ ಮಹತ್ವವನ್ನು ಕಾಲೇಜು ವಿದ್ಯಾರ್ಥಿಗಳಿಗೆ ತಿಳಿಸಿ, ಪಕ್ಷಿ ವೀಕ್ಷಣೆಯಂತಹ ಚೇತೋಹಾರಿ ಹವ್ಯಾಸದಲ್ಲಿ ತೊಡಗಿಸಬೇಕು. ನೀರಿನ ಅಭಾವ ಇರುವಲ್ಲಿ ಮಣ್ಣಿನ ಅಥವಾ ಮರದ ಪೆಟ್ಟಿಗೆಯಲ್ಲಿ ಗೂಡು ಇಟ್ಟು ನೀರು ಪೂರೈಸುವ ಹವ್ಯಾಸ ಬೆಳೆಸಬೇಕಿದೆ.
‘ಸಿಟಿಜನ್ ಸ್ಪಾರೋ’ ಸಂಸ್ಥೆ ದೇಶದ ಸುಮಾರು 11 ಸಾವಿರ ಸ್ಥಳದಲ್ಲಿ ಗುಬ್ಬಚ್ಚಿ ಸಂಖ್ಯೆಯ ಸರ್ವೇಕ್ಷಣೆ ಮಾಡಿದೆ. ‘ಫ್ರಾನ್ಸ್ ಎಕೊ-ಸಿಸ್ ಆ್ಯಕ್ಷನ್ ಫೌಂಡೇಷನ್’ ಸಂಸ್ಥೆ ಮತ್ತು ಭಾರತದ ‘ನೇಚರ್ ಫಾರ್-ಎವರ್’ ಸೊಸೈಟಿ ಸಂಯುಕ್ತವಾಗಿ ಗುಬ್ಬಚ್ಚಿ ದಿನ ಆಚರಿಸುತ್ತವೆ’ ಎಂದು ಪರಿಸರ ಪ್ರಿಯ ನವೀನ್ ಜಗಲಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.