ADVERTISEMENT

ಬಂಡೀಪುರ: ಗಾಯಗೊಂಡ ಹುಲಿ ಸೆರೆ, ಚಿಕಿತ್ಸೆಗಾಗಿ ಮೈಸೂರಿಗೆ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2021, 13:26 IST
Last Updated 21 ಅಕ್ಟೋಬರ್ 2021, 13:26 IST
ಸೆರೆ ಹಿಡಿದಿರುವ ಹುಲಿ 
ಸೆರೆ ಹಿಡಿದಿರುವ ಹುಲಿ    

ಗುಂಡ್ಲುಪೇಟೆ: ಬಂಡೀಪುರ ರಾಷ್ಟ್ರೀಯ ಹುಲಿ ಸಂರಕ್ಷಿತ ಪ್ರದೇಶದ ಬಂಡೀಪುರ ವಲಯದಗಂಜಿಕಟ್ಟೆ ಅರಣ್ಯ ಪ್ರದೇಶದಲ್ಲಿ ಗಾಯಗೊಂಡು ನಿತ್ರಾಣಗೊಂಡಿದ್ದ ಗಂಡು ಹುಲಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಗುರುವಾರ ಸೆರೆ ಹಿಡಿದಿದ್ದಾರೆ.

ಹುಲಿಗೆ ತುರ್ತು ಚಿಕಿತ್ಸೆಯ ಅಗತ್ಯವಿರುವುದರಿಂದ ಮೈಸೂರಿನ ಮೃಗಾಯದ ಕೂರ್ಗಳ್ಳಿ ಪುನರ್ವಸತಿ ಮತ್ತು ರಕ್ಷಣಾ ಕೇಂದ್ರಕ್ಕೆ ಕಳುಹಿಸಲಾಗಿದೆ.

ತೀವ್ರವಾಗಿ ಗಾಯಗೊಂಡಿದ್ದ ಏಳೆರಿಂದ ಎಂಟು ವರ್ಷದ ಗಂಡು ಹುಲಿಯು ನಿಶ್ಯಕ್ತಿಯಿಂದ ಬಳಲುತ್ತಿತ್ತು. ಅದರ ಮೇಲೆ ನಿಗಾ ಇರಿಸಲು ಸಿಬ್ಬಂದಿ ಕ್ಯಾಮೆರಾ ಟ್ರ್ಯಾಪ್‌ ಅಳವಡಿಸಿದ್ದರು. ಹುಲಿಯು ಸಹಜವಾಗಿ ಚೇತರಿಸಿಕೊಳ್ಳುವುದು ಕಷ್ಟ ಎಂಬ ಕಾರಣಕ್ಕೆ ಅಧಿಕಾರಿಗಳು ಅದನ್ನು ಸೆರೆ ಹಿಡಿಯುವ ನಿರ್ಧಾರ ಕೈಗೊಂಡರು.

ADVERTISEMENT

ಅರಿವಳಿಕೆ ಚುಚ್ಚುಮದ್ದು ನೀಡಿ ಗುರುವಾರ ಹುಲಿಯನ್ನು ಸೆರೆಹಿಡಿಯಲಾಗಿದೆ.ಹುಲಿ ಮೈ ಮೇಲೆ ಆಗಿರುವ ಗಾಯಗಳನ್ನು ಗಮನಿಸಿದೆರೆ ಆನೆಯೊಂದಿಗೆ ಕಾದಾಡುವ ಸಮಯದಲ್ಲಿ ದಂತ ಚುಚ್ಚಿ ಗಾಯ ಆದ ರೀತಿ ಕಾಣಿಸುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

‘ಬುಧವಾರ ಬಂಡೀಪುರ ಸಫಾರಿ ವಲಯದ ಗಂಜಿಕಟ್ಟೆ ಬಳಿ ಹುಲಿ ನಿತ್ರಾಣವಾಗಿರುವುದು ಕಂಡು ಬಂದಿತ್ತು. ಗುರುವಾರ ಅರಿವಳಿಕೆ ನೀಡಿ ಸೆರೆ ಹಿಡಿದು ಚೇತರಿಕೆಗೆ ಚುಚ್ಚುಮದ್ದು ನೀಡಲಾಗಿದೆ. ಚಿಕಿತ್ಸೆಗೆ ಹುಲಿ ಸ್ಪಂದಿಸುವ ಲಕ್ಷಣಗಳು ಕಂಡುಬಂದಿದೆ. ಹಾಗಾಗಿ ಹೆಚ್ಚಿನ ಚಿಕಿತ್ಸೆಗೆ ಮೈಸೂರಿಗೆ ಕಳುಹಿಸಲಾಯಿತು’ ಎಂದು ಹುಲಿ ಯೋಜನೆ ನಿರ್ದೇಶಕ ಎಸ್‌.ಆರ್.ನಟೇಶ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇಲಾಖಾ ಪಶುವೈದ್ಯಾಧಿಕಾರಿಗಳಾದ ಡಾ.ವಾಸಿಂ ಮಿರ್ಜಾ ಹಾಗೂ ಡಾ.ಮುಜೀಬ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ಕೆ.ಪರಮೇಶ್, ಸುಮಿತ್ ಕುಮಾರ್ ಎಸ್. ಪಾಟೀಲ, ಬಂಡೀಪುರ ವಲಯ ಅರಣ್ಯಾಧಿಕಾರಿ ಪಿ.ನವೀನ್‌ಕುಮಾರ್, ಬಂಡೀಪುರ ವಲಯದ ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯ ನಾಗರಾಜು, ಮತ್ತು ಸಿಬ್ಬಂದಿಗಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.