ADVERTISEMENT

ಯಳಂದೂರು: ಬೆಳೆಗಾರರ ಪಾಲಿಗೆ ಸಿಹಿಯಾಗದ ಮಾವು

ಕೊನೆ ಕೊಯ್ಲು, ಪಾತಾಳ ಮುಟ್ಟಿದ ಇಳುವರಿ; ಬೆಲೆಯೂ ಇಲ್ಲ, ವಿಮೆಯೂ ಇಲ್ಲ

ನಾ.ಮಂಜುನಾಥ ಸ್ವಾಮಿ
Published 14 ಜೂನ್ 2024, 7:41 IST
Last Updated 14 ಜೂನ್ 2024, 7:41 IST
ಯಳಂದೂರು ತಾಲ್ಲೂಕಿನಲ್ಲಿ ಮಾರಾಟಕ್ಕೆ ಕೊಯ್ಲಾದ ಮಾವು
ಯಳಂದೂರು ತಾಲ್ಲೂಕಿನಲ್ಲಿ ಮಾರಾಟಕ್ಕೆ ಕೊಯ್ಲಾದ ಮಾವು   

ಯಳಂದೂರು: ತಾಲ್ಲೂಕಿನ ಪ್ರಮುಖ ತೋಟಗಾರಿಕಾ ಬೆಳೆಗಳಲ್ಲಿ ಒಂದಾಗಿರುವ ಮಾವು ಹವಾಮಾನ ವೈಪರೀತ್ಯಕ್ಕೆ ಸಿಲುಕಿ ಶೇ 90 ಇಳುವರಿ ಕುಸಿತವಾಗಿದೆ. ಮಾವು ನಂಬಿ ಬಂಡವಾಳ ಹೂಡಿದ್ದ ಬೆಳೆಗಾರರು ಈ ಬಾರಿ ನಷ್ಟದ ಸುಳಿಯಲ್ಲಿದ್ದಾರೆ.

ಒಂದೆಡೆ ಹವಾಮಾನದ ಒಡೆತವಾದರೆ ಮತ್ತೊಂದೆಡೆ ಮಾವು ಬೆಳೆಗಾರರಿಗೆ ಆಪತ್‌ಕಾಲದಲ್ಲಿ ನೆರವಾಗಬೇಕಿದ್ದ ವಿಮೆಯೂ ಸಿಗದಂತಹ ಪರಿಸ್ಥಿತಿ ಎದುರಾಗಿದೆ.

ಬರ ಹಾಗೂ ಬೆಳೆ ನಾಶದಿಂದ ಎದುರಾಗುವ ಆರ್ಥಿಕ ನಷ್ಟದಂದ ಪಾರಾಗಲು ತಾಲ್ಲೂಕಿನ ಬೆರಳೆಣಿಕೆ ಮಾವು ಬೆಳೆಗಾರರು ಬೆಳೆ ವಿಮೆ ಮಾಡಿಸಿದ್ದರು. ಹವಾಮಾನ ವೈಪರೀತ್ಯದಿಂದ ಇಳುವರಿ ಕುಸಿತವಾಗಿರುವ ಈ ಹೊತ್ತಿನಲ್ಲಿ ಸಂಕಷ್ಡದಲ್ಲಿ ಸಿಲುಕಿದ ಮಾವು ಬೆಳೆಗಾರರಿಗೆ ವಿಮೆ ಪರಿಹಾರ ಸಿಗುವ ಲಕ್ಷಣಗಳು ಕಾಣಿಸುತ್ತಿಲ್ಲ. ಕಾರಣ ವಿಮೆ ಭರಿಸಿಕೊಳ್ಳಲು ಅನುಸರಿಸಬೇಕಾದ ಮಾನದಂಡಗಳು ರೈತರ ಪರವಾಗಿಲ್ಲ.

ADVERTISEMENT

ತಾಲ್ಲೂಕಿನಲ್ಲ 50 ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆ ಇದೆ. ಮೂವರು ರೈತರು ಮಾತ್ರ ವಿಮೆ ಮಾಡಿಸಿದ್ದಾರೆ. ಜಿಲ್ಲೆಯಾದ್ಯಂತ ಗಣನೆಗೆ ತೆಗೆದಕೊಂಡರೆ ಮಾವು ಬೆಳೆಗಾರರ ಸಂಖ್ಯೆ ಹಾಗೂ ವಿಮೆ ಮಾಡಿಸಿಕೊಂಡವರು ಮತ್ತಷ್ಟು ಹೆಚ್ಚಾಗುತ್ತದೆ.

ತಾಲ್ಲೂಕಿನಲ್ಲಿ ಮಾವು ಬೆಳೆಗೆ ಬೇಕಾದ ಹಿತಕರ ವಾತಾವರಣ ಮತ್ತು ಉತ್ತಮ ತಳಿ ಸೌಲಭ್ಯ ಇದ್ದರೂ, ಮಳೆಕೊರತೆ ಹಾಗೂ ಅತಿಯಾದ ತಾಪಮಾನದಿಂದ ಈ ವರ್ಷ ಮಾವು ಇಳುವರಿ ಸಂಪೂರ್ಣ ಕುಸಿದಿದೆ.

‘ಪ್ರತಿ ವರ್ಷ ಸಾವಯವ ವಿಧಾನದಲ್ಲಿ ದಶೇರಿ, ಮಲ್ಲಿಕಾ, ಇಮಾಂ ಪಸಂದ್, ರಸಪೂರಿ, ಬಾದಾಮಿ, ಮಲಗೋವ, ತೋತಾಪುರಿ ತಳಿಯ ಮಾವು ಬೆಳೆಯುತ್ತಿದ್ದೇವೆ. ಆನ್‌ಲೈನ್‌ ಮೂಲಕ ಹಣ್ಣುಗಳಿಗೆ ಬಹು ಬೇಡಿಕೆ ಇದ್ದರೂ ಪ್ರಸಕ್ತ ವರ್ಷ ಶೇ 10 ಮಾತ್ರ ಫಸಲು ಕೈಸೇರಿದೆ. ಮಾವು ನಂಬಿದವರಿಗೆ ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಅಧಿಕಾರಿಗಳು ಮಾವು ತೋಟಕ್ಕೆ ತೆರಳಿ ಮಾವು ಕೃಷಿಕರ ಬವಣೆ ತಿಳಿಯಬೇಕು’ ಎಂದು ಒತ್ತಾಯಿಸುತ್ತಾರೆ ಬೆಳೆಗಾರ ಕೆಸ್ತೂರು ಬಸವಣ್ಣ.

ಮಾರ್ಚ್ ಮತ್ತು ಏಪ್ರಿಲ್ ಸಮಯದಲ್ಲಿ ಜಿಲ್ಲೆಯಲ್ಲಿ ಅತಿಯಾದ ತಾಪಮಾನದಿಂದ ಅವಧಿ ಪೂರ್ವದಲ್ಲಿ ಹೂ ಉದುರಿತ್ತು. ಕಾಯಿ ಕಚ್ಚುವುದು ತಡವಾಯಿತು. ನಂತರ ನುಸಿ ಹುಳು ಕಾಟವೂ ಕಾಡಿತು. ಇವೆಲ್ಲ ಸಂಗತಿಗಳು ಬೆಳೆಗಾರರನ್ನು ನಷ್ಟಕ್ಕೆ ದೂಡಿವೆ. ಗುಣಮಟ್ಟದ ಮಾವಿಗೆ ಬೇಡಿಕೆ ಇದ್ದರೂ ಪೂರೈಸಲಾಗದ ಸ್ಥಿತಿ ಇದೆ ಎನ್ನುತ್ತಾರೆ ರೈತರು.

ನಿಯಮಗಳು ಅವೈಜ್ಞಾನಿಕ:

ಮಾವು ಬೆಳೆಗೆ ವಿಮಾ ಪರಿಹಾರ ನೀಡಲು ಮಳೆಯನ್ನು ಪ್ರಮುಖವಾಗಿ ಮಾನದಂಡವಾಗಿ ಪರಿಗಣಿಸಲಾಗುತ್ತದೆ. ಗಾಳಿಯ ವೇಗ, ಆದ್ರತೆ, ಮಳೆಯ ಪ್ರಮಾಣದ ಮೇಲೆ ಪರಿಹಾರ ನಿರ್ಧರಿಸಲಾಗುತ್ತದೆ. ಸರ್ಕಾರದ ಬಿಗಿಯಾದ ನಿಯಮಗಳಿಂದ ಮಾವು ಬೆೆಳೆಗಾರರು ವಿಮೆ ಮಾಡಿಸಲು ಹಿಂದೇಟು ಹಾಕುತ್ತಿದ್ದಾರೆ.

ತಾಲ್ಲೂಕಿನ ಕೆಸ್ತೂರು, ಆಲಹಳ್ಳಿ ಹಾಗೂ ಚಾಮರಾನಗರ ತಾಲ್ಲೂಕಿನ ದಡದಳ್ಳಿ ತೋಟದಲ್ಲಿ 1,500 ಗಿಡಗಳಲ್ಲಿ ಇಳುವರಿ ಕುಸಿದಿದ್ದು  ಶೇ 10ರಷ್ಟು ಫಸಲು ಮಾತ್ರ ಕೈ ಸೇರಿದೆ. ವರ್ಷ ಪೂರ್ತಿ ಮಾವಿನ ತೋಟದ ನಿರ್ವಹಣೆ ಮಾಡಿ ಬೆಳೆಗಾರರು ಸೋತಿದ್ದಾರೆ. ಈ ವರ್ಷ ಬೆಲೆಯೂ ಇಲ್ಲ, ಪರಿಹಾರವೂ ಇಲ್ಲ ಎಂಬಂತಾಗಿದೆ. ಪ್ರತಿ ವರ್ಷ ಮಾವು ಬೆಳೆದು ₹ 5 ಲಕ್ಷದವರೆಗೆ ನಡೆಯುತ್ತಿದ್ದ ಸಂಪಾದನೆ ಈ ವರ್ಷ ತೀರಾ ಕಡಿಮೆಯಾಗಿದೆ ಎನ್ನುತ್ತಾರೆ ಬೆಳೆಗಾರ ಕೆಸ್ತೂರು ಲೋಕೇಶ್.

ಕಳೆದ ವರ್ಷ ಅತಿವೃಷ್ಟಿಯಿಂದ ಬೆಳೆ ಕೈಕೊಟ್ಟಿತ್ತು. ಈ ಸಲ ಬರ ಕಾಡಿದೆ. ಸಾವಯವ ಮಾವಿಗೆ ಬೇಡಿಕೆ ಹೆಚ್ಚಿದ್ದರೂ ಉತ್ಪಾದನೆ ಪಾತಾಳ ಮುಟ್ಟಿದೆ. ಹೀಗೆ ಒಂದಲ್ಲ ಒಂದು ಸಮಸ್ಯೆಯಿಂದ ಮಾವು ಬೆಳೆಗಾರರು ನರಳುತ್ತಿದ್ದಾರೆ ಎಂದರು.

ಮಾವು

Highlights - ತುಂತುರು ನೀರಾವರಿ ಮೂಲಕ ಬೆಳೆ ಉಳಿಸಿಕೊಂಡಿದ್ದ ರೈತರು ಮಾವಿಗೆ ಬೇಡಿಕೆ ಇದ್ದರೂ ಇಳುವರಿ ಕುಸಿತ ಬೆಳೆ ವಿಮೆ ನಿಯಮ ಬದಲಾವಣೆಗೆ ಒತ್ತಾಯ

Cut-off box - ವಿಮೆ ಇದೆ ಕಳೆದ ವರ್ಷ ಕೇವಲ ಮೂವರು ಮಾವಿನ ಬೆಳೆಗಾರರು ವಿಮೆ ಪಡೆದಿದ್ದಾರೆ. 2024-25ನೇ ಸಾಲಿನಲ್ಲಿ 1 ಹೆಕ್ಟೇರ್‌ಗೆ 80 ಸಾವಿರದವರೆಗೆ ವಿಮೆ ಪರಿಹಾರ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಈ ಮೊತ್ತದಲ್ಲಿ ಬೆಳೆಗಾರರು ಶೇ 5ರಷ್ಟು ಮಾತ್ರ ವಂತಿಗೆ ಭರಿಸಬೇಕು ಎಂದು ತಾಲ್ಲೂಕು ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಜಿ.ಎಸ್.ರಾಜು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.