ADVERTISEMENT

ಯಳಂದೂರು: ನ್ಯಾನೋ ಯೂರಿಯಾ, ಡಿಎಪಿ ಬಳಕೆಗೆ ರೈತರ ನಿರ್ಲಕ್ಷ

ಭತ್ತ ಸಾಗುವಳಿಗೆ ವರವಾದ ಮಳೆ: ಯೂರಿಯಾ ರಸಗೊಬ್ಬರಕ್ಕೆ ಬೇಡಿಕೆ ಹೆಚ್ಚು

ಎನ್.ಮಂಜುನಾಥಸ್ವಾಮಿ
Published 15 ಅಕ್ಟೋಬರ್ 2024, 8:34 IST
Last Updated 15 ಅಕ್ಟೋಬರ್ 2024, 8:34 IST
ಯಳಂದೂರು ತಾಲ್ಲೂಕಿನ ಬನ್ನಿಸಾರಿಗೆ ಗ್ರಾಮದ ಹೊರ ವಲಯದ ಭತ್ತದ ತಾಕಿನಲ್ಲಿ ಬೆಳೆಗಾರರು ಸೋಮವಾರ ಮಳೆ ನಡುವೆ ಕಳೆ ನಿರ್ವಹಣೆ ಮಾಡಿದರು. 
ಯಳಂದೂರು ತಾಲ್ಲೂಕಿನ ಬನ್ನಿಸಾರಿಗೆ ಗ್ರಾಮದ ಹೊರ ವಲಯದ ಭತ್ತದ ತಾಕಿನಲ್ಲಿ ಬೆಳೆಗಾರರು ಸೋಮವಾರ ಮಳೆ ನಡುವೆ ಕಳೆ ನಿರ್ವಹಣೆ ಮಾಡಿದರು.    

ಯಳಂದೂರು: ತಾಲ್ಲೂಕಿನಾದ್ಯಂತ ಸೋಮವಾರವೂ ತುಂತುರು ಮಳೆ ಮುಂದುವರಿದಿದ್ದು ಕೃಷಿ ಚಟುವಟಿಕೆಗಳು ಬಿರುಸು ಪಡೆದುಕೊಂಡಿವೆ. ಉತ್ತಮ ಮಳೆ ಹಾಗೂ ಹವಾಗುಣದಿಂದ ಸೆಪ್ಟೆಂಬರ್‌ನಲ್ಲಿ ಬಿತ್ತನೆಯಾಗಿದ್ದ ಭತ್ತದ ಪೈರು ಉತ್ತಮ ಬೆಳವಣಿಗೆ ಕಂಡಿದ್ದು ಕಳೆ ತೆಗೆಯುವ ಪ್ರಕ್ರಿಯೆ ಆರಂಭವಾಗಿದೆ.

ಇದೇ ಸಮಯ ಕೃಷಿಕರು ಬೆಳೆಗಳಿಗೆ ಮೇಲು ಗೊಬ್ಬರ ನೀಡಲು ಮುಂದಾಗಿದ್ದು ಹರಳು ರೂಪದ ಯೂರಿಯಾಕ್ಕೆ ಬೇಡಿಕೆ ಹೆಚ್ಚಾಗಿದ್ದು ನ್ಯಾನೋ ಯೂರಿಯಾ, ಡಿಎಪಿ ಬಳಕೆಗೆ ರೈತರು ಹೆಚ್ಚು ಆಸಕ್ತಿ ತೋರದಿರುವುದು ಕಂಡುಬಂದಿದೆ. ಇದರಿಂದ ಕೃಷಿಗೆ ತಗುಲುವ ವೆಚ್ಚದ ಪ್ರಮಾಣ ಹೆಚ್ಚಾಗುತ್ತಿದೆ.

ತಾಲ್ಲೂಕಿನಲ್ಲಿ 3 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬಿತ್ತನೆಯಾಗಿದ್ದು ನಿರೀಕ್ಷೆಗೂ ಮೀರಿ  ಮಳೆ ಸುರಿಯುತ್ತಿರುವುದರಿಂದ ಭೂಮಿಯಲ್ಲಿ ತೇವಾಂಶ ಹೆಚ್ಚಾಗಿದ್ದು ರೈತರು ಭತ್ತ, ಮೆಕ್ಕೆಜೋಳ, ರಾಗಿ ಬೆಳೆಗಳಿಗೆ ಯೂರಿಯಾ ಗೊಬ್ಬರ ನೀಡುತ್ತಿದ್ದಾರೆ. ಆದರೆ, ಕಡಿಮೆ ಬೆಲೆಯಲ್ಲಿ ಸಿಗುವ ರಸಗೊಬ್ಬರಕ್ಕೆ ಪರ್ಯಾಯವಾಗಿ ಬಳಸಬಹುದಾದ ನ್ಯಾನೋ ಯೂರಿಯಾ ನಿರ್ಲಕ್ಷಿಸಿದ್ದಾರೆ. ಇದು ಕೃಷಿ ವೆಚ್ಚದ ಹೆಚ್ಚಳಕ್ಕೆ ಕಾರಣವಾಗಿದೆ ಎಂಬುದು ಕೃಷಿ ಅಧಿಕಾರಿಗಳ ಮಾತು.

ADVERTISEMENT

84.5 ಎಂ.ಎಂ ಹೆಚ್ಚುವರಿ ಮಳೆ:

ಅಕ್ಟೋಬರ್ ಆರಂಭದಿಂದ 13ರವರೆಗೆ ತಾಲ್ಲೂಕಿನಲ್ಲಿ 175 ಮಿ.ಮೀ ಮಳೆಯಾಗಿದೆ. ಕಳೆದ ವರ್ಷ 91.5 ಮಿ.ಮೀ ಮಾತ್ರ ಮಳೆ ಸುರಿದಿತ್ತು. 84.5 ಎಂ.ಎಂ ಹೆಚ್ಚುವರಿ ಮಳೆ ಬಂದಿದ್ದು ಭತ್ತದ ಇಳುವರಿ ಹೆಚ್ಚಾಗುವ ನಿರೀಕ್ಷೆ ರೈತರದ್ದು.

ಆದರೆ, ಈ ಬಾರಿ ಬಹತೇಕ ಕೃಷಿಕರು ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಅರಳು ರೂಪದ ಯೂರಿಯಾ ಬಳಸುತ್ತಿದ್ದಾರೆ. ಇದರಿಂದ ಬೆಳೆ ಹೆಚ್ಚು ಹಸಿರಾಗಿ ಕಂಡರೂ ರೋಗ ಮತ್ತು ಕೀಟ ಬಾಧೆ ಕಾಡಲಿದೆ ಎಂದು ಕೃಷಿ ಇಲಾಖೆಯ ತಾಂತ್ರಿಕ ಅಧಿಕಾರಿ ಎ.ವೆಂಕಟರಂಗಶೆಟ್ಟಿ ಹೇಳಿದರು.

ಬೆಳೆಗೆ ಹರಳು ರೂಪದ ಯೂರಿಯಾ ಬಳಸುವುದರಿಂದ ಶೇ 55 ಪೋಷಕಾಂಶ ಪೂರೈಕೆಯಾದರೆ, ಉಳಿದ ಪೋಷಕಾಂಶಗಳು ಹರಿಯುವ ನೀರಿನಲ್ಲಿ ಪೋಲಾಗುವ ಸಾಧ್ಯತೆ ಇರುತ್ತದೆ. ಆದರೆ, ನ್ಯಾನೋ ಯೂರಿಯಾ ಸಾರಜನಕ ದ್ರವರೂಪದ ಗೊಬ್ಬರವಾಗಿದ್ದು ನೇರವಾಗಿ ಬೆಳೆಗೆ ಕೊಡಬಹುದು. ಈ ಪ್ರಕ್ರಿಯೆಯಲ್ಲಿ ಶೇ 85 ರಷ್ಟು ಉಪಯುಕ್ತ ಪೋಷಕಾಂಶಗಳು ಫಸಲಿಗೆ ನೇರವಾಗಿ ತಲುಪುತ್ತದೆ ಎನ್ನುತ್ತಾರೆ ಕೃಷಿ ಇಲಾಖೆ ಅಧಿಕಾರಿಗಳು.

ಸತತ ಮಳೆಯಿಂದ ಭತ್ತ, ಗೋವಿನಜೋಳ ಮತ್ತು ರಾಗಿ ಫಸಲು ಚೆನ್ನಾಗಿದೆ. ಮಳೆ ಸಂದರ್ಭ ಯೂರಿಯಾ ನೀಡುವುದರಿಂದ ಉತ್ತಮ ಬೆಳೆ ಸಿಗುವ ನಿರೀಕ್ಷೆ ಇದೆ. ಆದರೆ. ನ್ಯಾನೂ ಯೂರಿಯಾ ಬಳಸುವ ಬಗ್ಗೆ ಕೃಷಿಕರಿಗೆ ಇನ್ನೂ ನಂಬಿಕೆ ಬಂದಿಲ್ಲ. ಬೆಳೆ ಉತ್ಪಾದಕತೆ ಹೆಚ್ಚಾಗುವ ಬಗ್ಗೆಯೂ ಅರಿವಿಲ್ಲ. ಈ ಬಗ್ಗೆ ಜಾಗೃತಿ ಮೂಡಿಸಬೇಕಾದ ಅಗತ್ಯವಿದೆ ಎನ್ನುತ್ತಾರೆ ಬನ್ನಿಸಾರಿಗೆ ಗ್ರಾಮದ ಕೃಷಿಕ ಮಹೇಶ್.

ಕಳೆ ಕಡಿಮೆ: ಉತ್ಪಾದಕತೆ ಹೆಚ್ಚಳ

ನ್ಯಾನೋ ಯುರಿಯಾ ಭತ್ತಕ್ಕೆ ಬೇಕಾದ ಸಾರಜನಕ ಮತ್ತು ಪೋಷಕಾಂಶ ನೀಡುವ ಸಂಯೋಜಿತ ಮಾರ್ಗವನ್ನು ಪ್ರಚೋದಿಸುತ್ತದೆ. ನ್ಯಾನೋ ಯೂರಿಯಾ ಬಳಕೆಯಿಂದ ಕಳೆ ನಿರ್ವಹಣೆ ಸುಲಭವಾಗಲಿದ್ದು ಉತ್ಪಾದನೆ ಹೆಚ್ಚಾಗಿ ವೆಚ್ಚ ತಗ್ಗಲಿದೆ. ತಾಲ್ಲೂಕಿನಲ್ಲಿ 13 ರಸಗೊಬ್ಬರ ಮಾರಾಟ ಕೇಂದ್ರಗಳಿದ್ದು, ಐದಾರು ಕೇಂದ್ರಗಳಲ್ಲಿ ದ್ರವರೂಪದ ಪೊಟ್ಯಾಷ್ ಮತ್ತು ಯುರಿಯಾ ಸಿಗಲಿದೆ.

‘ದರ ಕಡಿಮೆ ಇಳುವರಿ ಹೆಚ್ಚು’

ಯೂರಿಯಾ ರಸಗೊಬ್ಬರದ ಚೀಲವೊಂದಕ್ಕೆ (50 ಕೆ.ಜಿ) ₹ 266 ಇದೆ. ಆದರೆ 1 ಬಾಟಲ್ ನ್ಯಾನೋ ಯೂರಿಯಾ (500 ಮಿ.ಲೀ) ಒಂದು ಚೀಲ ಹರಳು ರೂಪದ ಯೂರಿಯಾಗೆ ಸಮವಾಗಿದ್ದು ₹ 225 ದರ ಇದೆ. ಡಿಎಪಿಗೆ ₹ 600 (ಅರ್ಧ ಲೀಟರ್‌) ದರ ಇದೆ. ಅರಳು ರೂಪದ ಡಿಎಪಿಗೆ ಕನಿಷ್ಠ 1350 ದರ ಇದೆ. ನ್ಯಾನೋ ಗೊಬ್ಬರದಂತಹ ಅಮೂಲ್ಯ ದೇಶಿ ಸಂಶೋಧನೆಯ ದ್ರವರೂಪದ ಗೊಬ್ಬರ ಬಳಸಿ ವಿದೇಶಿ ವಿನಿಮಯದ ಮೇಲಿನ ಅವಲಂಬನೆ ತಗ್ಗಿಸಬಹುದು. ಸರ್ಕಾರಕ್ಕೆ ಧನಸಹಾಯದ ಹೊರೆಯೂ ಕಡಿಮೆ ಆಗಲಿದೆ ಎನ್ನುತ್ತಾರೆ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಎನ್.ಜಿ.ಅಮೃತೇಶ್ವರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.