ADVERTISEMENT

ಯಳಂದೂರು | ಸಮಾಧಿಗಳಿಗೆ ಆಕರ್ಷಕ ಹೈಟೆಕ್‌ ಸ್ಪರ್ಶ!

ಹಲವೆಡೆ ವೈಭವದ ಮರಣ ಮಂಟಪ: ಬಡವರಿಗೆ ಸ್ಮಶಾನ ಹುಡುಕುವ ಸಂಕಟ

​ಪ್ರಜಾವಾಣಿ ವಾರ್ತೆ
Published 30 ಜೂನ್ 2024, 7:16 IST
Last Updated 30 ಜೂನ್ 2024, 7:16 IST
ಯಳಂದೂರು ತಾಲ್ಲೂಕಿನ ಯರಿಯೂರು-ಮದ್ದೂರು ಹೆದ್ದಾರಿ ನಡುವೆ ಕೋವಿಡ್ ವಾರಿಯರ್ ಗಾಗಿ ಬಂಧುಗಳು ನಿರ್ಮಿಸಿದ ಸುಂದರ ಸಮಾಧಿ
ಯಳಂದೂರು ತಾಲ್ಲೂಕಿನ ಯರಿಯೂರು-ಮದ್ದೂರು ಹೆದ್ದಾರಿ ನಡುವೆ ಕೋವಿಡ್ ವಾರಿಯರ್ ಗಾಗಿ ಬಂಧುಗಳು ನಿರ್ಮಿಸಿದ ಸುಂದರ ಸಮಾಧಿ   

ಯಳಂದೂರು: ಕೆಲ ಊರುಗಳಲ್ಲಿ ಸ್ಮಶಾನಕ್ಕೂ ಸ್ಥಳ ಸಿಗದ ಪರಿಸ್ಥಿತಿ ಇರುವುದು ಒಂದೆಡೆಯಾದರೆ, ಮತ್ತೊಂದೆಡೆ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಹೈಟೆಕ್ ಸಮಾಧಿಗಳು ನಿರ್ಮಾಣವಾಗುತ್ತಿವೆ. ತಾಲ್ಲೂಕಿನ ಸುತ್ತಮುತ್ತ ಕೆಲವು ಮರಣ ಮಂಟಪಗಳು  ಆಕರ್ಷಕ ವಿನ್ಯಾಸದಿಂದ ಗಮನ ಸೆಳೆಯುತ್ತಿವೆ.

ಯರಿಯೂರು, ಮಾಂಬಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವೈವಿಧ್ಯಮಯ ಸಮಾಧಿಗಳನ್ನು ನಿರ್ಮಿಸಲಾಗಿದೆ. ಸ್ವಂತ ತೋಟ, ಗದ್ದೆಗಳನ್ನು ಹೊಂದಿದವರು ಭಿನ್ನ ಮಾದರಿಯಲ್ಲಿ ಮೃತರಿಗೆ ಸಮಾಧಿಗಳನ್ನು ಕಟ್ಟುತ್ತಾರೆ. ಸುತ್ತಲೂ ಮರ, ಗಿಡಗಳನ್ನು ನೆಟ್ಟು ಪರಿಸರ ಕಾಳಜಿ ತೋರುತ್ತಿದ್ದಾರೆ. ಕೆಲವರು ತಮ್ಮ ಪೋಷಕರಿಗೆ ಚಂದದ ಗುಡಿ ಕಟ್ಟಿಸಿದ್ದಾರೆ. ಇವು ನೋಡುಗರನ್ನು ಆಕರ್ಷಿಸುತ್ತಿದ್ದು, ನವನವೀನ ಸಮಾಧಿಗಳನ್ನು ನಿರ್ಮಾಣ ಮಾಡುವ ಟ್ರೆಂಡ್ ಹೆಚ್ಚಾಗಿದೆ.

ಆರ್ಥಿಕವಾಗಿ ಸಬಲರಾದ ಸ್ಥಿತಿವಂತರು ಸಿಮೆಂಟ್, ಗಾರೆ, ಕಲ್ಲು ಮತ್ತು ಗ್ರಾನೈಟ್ ಬಳಸಿ ಸಮಾಧಿ ನಿರ್ಮಿಸುತ್ತಿದ್ದಾರೆ. ಕೆಲವು ಹಳ್ಳಿಗಳಲ್ಲಿ ಮಾಡು ನಿರ್ಮಿಸಿ ಬಿಸಿಲು, ಮಳೆ ಬೀಳದಂತೆ ಸಮಾಧಿ ಕಟ್ಟಲಾಗಿದೆ. ಕೆಲವರು ಪೂಜೆಗೆ ಅನುವಾಗುವಂತೆ ವರಾಂಡ ನಿರ್ಮಿಸಿ ಸುಣ್ಣ ಬಣ್ಣ ಬಳಿದು ಚಂದಗೊಳಿಸಿದ್ದಾರೆ.

ADVERTISEMENT

‘ಮಾಂಬಳ್ಳಿ, ಕೆಸ್ತೂರು ಸುತ್ತಮುತ್ತ ಇಂತಹ ಹಲವು ಸಮಾಧಿಗಳು ಮೇಲೆದ್ದಿವೆ. ಕೆಲವರು ನಾಲ್ಕೈದು ಲಕ್ಷ ವ್ಯಯಿಸಿ ಮೃತರ ನೆನಪಿಗೆ ಪುತ್ಥಳಿ ನಿರ್ಮಿಸಿದ್ದಾರೆ. ಸಮಾಧಿಗಳನ್ನೂ ಗಮನಸೆಳೆಯುವಂತೆ ಅಲಂರಿಸುತ್ತಿರುವುದು ಅಲ್ಲಲ್ಲಿ ಕಂಡು ಬರುತ್ತಿದೆ. ಕಪ್ಪು ಶಿಲೆ ಬಳಸಿ ಮಂಚದ ಆಕಾರದಲ್ಲೂ ಸಮಾಧಿಗಳನ್ನು ನಿರ್ಮಿಸಲಾಗಿದೆ’ ಎನ್ನುತ್ತಾರೆ ಮದ್ದೂರು ಬಸವರಾಜು.

ಮೂಢನಂಬಿಕೆ ಹೋಗಬೇಕಿದೆ: ಮೃತರ ಶವಗಳನ್ನು ನೋಡುವುದು, ಅಂತಿಮ ಸಂಸ್ಕಾರಕ್ಕೆ ತೆರಳಲು ಹಿಂದೇಟು ಹಾಕುವುದು, ಮರಣ ಹೊಂದಿದವರ ಕುಟುಂಬ ಸದಸ್ಯರ ಮನೆಗಳಿಗೆ ತೆರಳದೆ ಸೂತಕ ಆಚರಿಸುವ ಪದ್ಧತಿ ಇನ್ನೂ ಆಚರಣೆಯಲ್ಲಿದೆ. ‘ಕಂದಚಾರವನ್ನು ತೊಲಗಿಸಿ, ಸಮಾಧಿ ಸ್ಥಳವೂ ಪವಿತ್ರ ಎಂಬುದನ್ನು ಸಾರುವ ಉದ್ದೇಶದಿಂದ ಮರಣ ಮಂಟಪವನ್ನು ಆಕರ್ಷಕವಾಗಿ ನಿರ್ಮಿಸಲಾಗುತ್ತಿದೆ. ಈ ಸ್ಥಳದಲ್ಲಿ ಉದ್ಯಾನವಿದ್ದು ಸಮಾಧಿ ಎಂಬ ಪ್ರಜ್ಞೆ ಮೂಡದಂತೆ ವಿಶೇಷವಾಗಿ ಕಟ್ಟಿದ್ದೇವೆ’  ಎನ್ನುತ್ತಾರೆ ಪತ್ನಿಯ ಸಮಾಧಿಗೆ ₹ 3 ಲಕ್ಷ ಖರ್ಚುಮಾಡಿರುವ ಯರಿಯೂರು ರಾಜಣ್ಣ.

ಕೋವಿಡ್ ವಾರಿಯರ್ ಸಮಾಧಿ: ಕೋವಿಡ್ ಅವಧಿಯಲ್ಲಿ ಕೋವಿಡ್ ವಾರಿಯರ್ ಆಗಿದ್ದು, ಮೃತಪ್ಪಟ್ಟ ಎಂಜಿನಿಯರ್ ಶಂಕರ್ ಅವರ ಸ್ಮರಣಾರ್ಥ ಅವರ ಬಂಧುಗಳ ಮತ್ತು ಮನೆಯವರು ಮದ್ದೂರು ರಸ್ತೆಯಲ್ಲಿ 15 ಅಡಿ ಎತ್ತರದ ಸಮಾಧಿ ನಿರ್ಮಿಸಿದ್ದಾರೆ. ಮಂಟಪದ ನಡುವೆ ಅವರ ಭಾವಚಿತ್ರ ಇರಿಸಿ ಸುತ್ತಲೂ ಹಸಿರ ಹಂದರ ಸೃಷ್ಟಿಸಿದ್ದಾರೆ. ಹೆದ್ದಾರಿಯಲ್ಲಿ ತೆರಳುವವರು ಸ್ವಲ್ಪ ಸಮಯ ನಿಂತು ಸಮಾಧಿ ನೋಡುತ್ತಾರೆ ಎನ್ನುತ್ತಾರೆ ಅವರ ಬಂಧುಗಳು.

ಸಮಾಧಿಗೆ ಸ್ಥಳ ಇಲ್ಲ ಇಂದಿಗೂ ಗ್ರಾಮೀಣ ಭಾಗಗಳಲ್ಲಿ ಶವ ಹೂಳಲು ಪರದಾಡಬೇಕಾದ ಪರಿಸ್ಥಿತಿ ಇದೆ. ಕೆಲವರು ಜಾಗವಿಲ್ಲದೆ ಗ್ರಾಮ ಪಂಚಾಯಿತಿ ಆವರಣದಲ್ಲಿ ಮಣ್ಣು ಮಾಡಿದ ಉದಾಹರಣೆಗಳು ಇವೆ. ಸ್ಮಶಾನಕ್ಕೆ ಸ್ಥಳ ಕೊಡಿ ಎಂದು ಶಾಸಕ ಮತ್ತು ಅಧಿಕಾರಿಗಳಿಗೆ ಮನವಿ ನೀಡುವುದು ಇಂದಿಗೂ ಚಾಲ್ತಿಯಲ್ಲಿದೆ. ಇಂತಹ ಕಷ್ಟಗಳ ನಡುವೆಯೂ ಸ್ವಂತ ಭೂಮಿ ಹೊಂದಿದವರು ದೈಹಿಕವಾಗಿ ಇಲ್ಲವಾದವರನ್ನು ಮಾನಸಿಕವಾಗಿ ಸದಾ ತಮ್ಮೊಂದಿಗೆ ಇರುವಂತೆ ಸ್ಮರಿಸಿಕೊಳ್ಳಲು ಅಂದಚಂದದ ಸಮಾಧಿ ಕಟ್ಟುತ್ತಿರುವುದು ಎಲ್ಲರನ್ನು ಬೆರಗುಗೊಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.