ಯಳಂದೂರು: ‘ರಾಜ್ಯದ ಸರ್ಕಾರಿ ಆಸ್ಪತ್ರೆಗಳ ಗುಣಮಟ್ಟ ಮತ್ತು ಸೇವಾ ವೈಖರಿ ತಿಳಿಯಲು ರಾಜ್ಯ ಸರ್ಕಾರ ವಿವಿಧ ಮಾನದಂಡ ನಿಗಧಿ ಮಾಡಿದ್ದು, ಇದರಲ್ಲಿ ಪಟ್ಟಣದ ಸಾರ್ವಜನಿಕ ಆಸ್ಪತ್ರ ಶೇ 89 ಅಂಕಗಳನ್ನು ಪಡೆದು ಪ್ರಥಮ ಸ್ಥಾನ ಪಡೆದಿದೆ’ ಎಂದು ಆಸ್ಪತ್ರೆ ವೈದ್ಯಾಧಿಕಾರಿ ಡಾ.ಶ್ರೀಧರ್ ಹೇಳಿದರು.
ಪಟ್ಟಣದ ಆಸ್ಪತ್ರೆ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ವೈದ್ಯರನ್ನು ಸನ್ಮಾನಿಸಿ ಮಾತನಾಡಿದರು.
‘ವೈದ್ಯರು ಮತ್ತು ಅರೆ ವೈದ್ಯಕೀಯ ಸಿಬ್ಬಂದಿ ರೋಗಿಗಳಿಗೆ ನೀಡುವ ಸೇವೆ. ಆಸ್ಪತ್ರೆಯಲ್ಲಿ ಸಿಗುವ ತುರ್ತು ಚಿಕಿತ್ಸೆ, ಶುಶ್ರೂಷಕರು ರೋಗಿಗಳೊಂದಿಗೆ ನಡೆದುಕೊಳ್ಳುವ ಆಪ್ತತೆ, ಉತ್ತಮ ಒಡನಾಟ ಮೊದಲಾದ ಮಾಹಿತಿ ಪಡೆದು ಮೌಲ್ಯಮಾಪನದಲ್ಲಿ ಪರಿಗಣಿಸಲಾಗುತ್ತದೆ. 20 ವರ್ಷಗಳಿಂದ ತಾಲ್ಲೂಕಿನ ಜನರ ಯೋಗಕ್ಷೇಮಕ್ಕೆ ರೂಪಿಸಿರುವ ಯೋಜನೆಗಳನ್ನು ಪರಿಗಣಿಸಿ ಪ್ರಥಮ ಸ್ಥಾನ ಪಡೆದಿದ್ದು, ಸತತವಾಗಿ 20 ವರ್ಷಗಳಿಂದ ಸೇವೆ ಸಲ್ಲಿಸಿರುವ ವೈದ್ಯರು ಮತ್ತು ಸಿಬ್ಬಂದಿ ವಿವಿಧ ಸಂಘ ಸಂಸ್ಥೆಗಳು ಗೌರವಿಸಿವೆ’ ಎಂದರು.
ಕಾಂಗ್ರೆಸ್ ಮುಖಂಡ ನಾಗರಾಜು ಮಾತನಾಡಿ, ‘ರಾಜ್ಯ ಮಟ್ಟದಲ್ಲಿ ಇಲ್ಲಿನ ವೈದ್ಯರ ಸೇವೆ ಗುರುತಿಸಿದ್ದು, ಇವರ ಸೇವಾ ಕೈಂಕರ್ಯ ಇತರರಿಗೂ ಮಾದರಿ ಆಗಬೇಕಿದೆ. ಮತ್ತಷ್ಟು ಜನರಿಗೆ ಆರೋಗ್ಯ ಸೇವೆಗಳು ತಲುಪಬೇಕಿದೆ. ಸಂಪನ್ಮೂಲಗಳ ಇತಿಮಿತಿಯ ನಡುವೆಯೂ ಆಸ್ಪತ್ರೆ ಸಿಬ್ಬಂದಿ ಉತ್ತಮ ಕೆಲಸ ಮಾಡಿದ್ದಾರೆ’ ಎಂದರು.
ಡಾ.ನಾಗೇಂದ್ರ ಮೂರ್ತಿ, ಡಾ,ಶಶಿರೇಖಾ, ಡಾ.ನಾಗೇಶ್, ವಕೀಲ ಸಂಪತ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.