ADVERTISEMENT

ಯಳಂದೂರು: ಸಂತಾನ ನಿಯಂತ್ರಣ ಚಿಕಿತ್ಸೆಗೆ ಪುರುಷರ ಹಿಂದೇಟು!

ಎನ್.ಮಂಜುನಾಥಸ್ವಾಮಿ
Published 11 ಜುಲೈ 2024, 5:40 IST
Last Updated 11 ಜುಲೈ 2024, 5:40 IST
ಸಾಂದರ್ಬಿಕ ಚಿತ್ರ
ಸಾಂದರ್ಬಿಕ ಚಿತ್ರ   

ಯಳಂದೂರು: ತಾಲ್ಲೂಕಿನಲ್ಲಿ ಕಳೆದ 6 ತಿಂಗಳಲ್ಲಿ ಕೇವಲ ಒಬ್ಬ ವ್ಯಕ್ತಿ ಮಾತ್ರ ಸಂತಾನ ನಿಯಂತ್ರಣ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿದ್ದು, ಮಹಿಳೆಯರ ಸಂತಾನ ನಿಯಂತ್ರಣ ಶಸ್ತ್ರಚಿಕಿತ್ಸೆಯ ಸಂಖ್ಯೆ ಮಾತ್ರ ಏರುಗತಿ ದಾಖಲಿಸಿದೆ.

ತಾಲ್ಲೂಕಿನ 28 ಗ್ರಾಮ ಮತ್ತು ಪಟ್ಟಣ ಸೇರಿ 84,500 ಜನಸಂಖ್ಯೆ ಇದ್ದು ಸಾಕ್ಷರತೆ ಪ್ರಮಾಣ ಶೇ 75 ಮೀರಿಲ್ಲ. ಬಡತನ, ಅನಕ್ಷರತೆ, ನಿರುದ್ಯೋಗ ಮತ್ತಿತರ ಸಮಸ್ಯೆಗಳು  ಜನಸಂಖ್ಯೆ ಹೆಚ್ಚಳಕ್ಕೆ ಇಂಬು ನೀಡಿವೆ. ಇದೇವೇಳೆ ಸ್ತ್ರೀ ಶಿಕ್ಷಣ ಮತ್ತು ತಡ ವಿವಾಹಗಳು ಜನಸಂಖ್ಯೆಯ ವೇಗವನ್ನು ಅಲ್ಪ ತಗ್ಗಿಸಿದ್ದು, ಲಿಂಗ ಸಮಾನತೆಯತ್ತ ಮುಂದಡಿ ಇಟ್ಟಿರುವುದು ಸಕಾರಾತ್ಮಕ ಬೆಳವಣಿಗೆ.

ತಾಲ್ಲೂಕಿನಲ್ಲಿ 4 ಪ್ರಾಥಮಿಕ ಹಾಗೂ 1 ತಾಲ್ಲೂಕು ಆಸ್ಪತ್ರೆ ಇದೆ. ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಟೂಬೆಕ್ಟಮಿ ಮತ್ತು ಲ್ಯಾಪ್ರೋಸ್ಕೊಪಿ ಮಾಡಲಾಗುತ್ತಿದೆ. ಸಂತಾನ ನಿರೋಧಕ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡ ಬಿಪಿಎಲ್ ಕುಟುಂಬದ ಮಹಿಳೆಯರಿಗೆ ₹ 600, ಎಪಿಎಲ್ ಕುಟುಂಬದ ಮಹಿಳಯರಿಗೆ ₹ 200 ಪರಿಹಾರ ಧನ ನೀಡಲಾಗುತ್ತದೆ.

ADVERTISEMENT

ಪುರುಷರ ಹಿಂದೇಟು:

ಪುರುಷರ ಸಂತಾನ ನಿಯಂತ್ರಣ ಶಸ್ತ್ರ ಚಿಕಿತ್ಸೆ ಗಾಯ ಇಲ್ಲದ ಸುರಕ್ಷಿತ ಚಿಕಿತ್ಸಾ ವಿಧಾನವಾಗಿದ್ದು 5 ರಿಂದ 10 ನಿಮಿಷದಲ್ಲಿ ಶಸ್ತ್ರಚಿಕಿತ್ಸೆ ಮುಗಿಯುತ್ತದೆ. ಶಸ್ತ್ರಚಿಕಿತ್ಸೆಗೆ ಒಳಗಾದ ಒಂದು ತಾಸಿನಲ್ಲಿ ಮನೆಗೂ ತೆರಳಬಹುದು. ಇದರಿಂದ ಯಾವುದೇ ಅಡ್ಡ ಪರಿಣಾಮವೂ ‌ಇರುವುದಿಲ್ಲ. ಆದರೂ ಸಂತಾನ ನಿಯಂತ್ರಣ ಶಸ್ತ್ರಚಿಕಿತ್ಸೆಗೆ ಪುರುಷರು ಆಸಕ್ತಿ ತೋರುತ್ತಿಲ್ಲ ಎನ್ನುತ್ತಾರೆ ಆಸ್ಪತ್ರೆ ವೈದ್ಯಾಧಿಕಾರಿ ಶ್ರೀಧರ್.

ಪ್ರಸಕ್ತ ವರ್ಷ ಒಬ್ಬರು ಮಾತ್ರ ವ್ಯಾಸೆಕ್ಟಮಿ ಮಾಡಿಸಿಕೊಂಡಿದ್ದಾರೆ. ಇವರಿಗೆ ಸರ್ಕಾರ 1 ಸಾವಿರ ಗೌರವಧನ ನೀಡಿದೆ. ದುಡಿಯುವ ಪುರುಷರು ವ್ಯಾಸೆಕ್ಟಮಿಗೆ ಮುಂದಾದರೆ, ಪತ್ನಿಯರೇ ವಿರೋಧ ವ್ಯಕ್ತಪಡಿಸುತ್ತಿರುವುದೂ ನಡೆಯುತ್ತಿದೆ. ಆದರೂ, ಆರೋಗ್ಯ ಇಲಾಖೆ ಸಿಬ್ಬಂದಿ ಪುರುಷರನ್ನು ಮನವೊಲಿಸುವತ್ತ ಕಾರ್ಯಪ್ರವೃತ್ತರಾಗಿದ್ದು ವ್ಯಾಸೆಕ್ಟಮಿ ನಿಧಾನವಾಗಿ ಜನಪ್ರಿಯತೆ ಪಡೆಯುತ್ತಿದೆ ಎನ್ನುತ್ತಾರೆ ಅವರು.

‘ಅಂತರ’ ಚುಚ್ಚುಮದ್ದು:

ತಾಲ್ಲೂಕಿನ ಜನನ ದರ ಶೇ 10ರಷ್ಟು ಇದೆ. ಆದರೆ, ಮರಣ ಪ್ರಮಾಣ ಶೇ 11ರಷ್ಟಿದೆ. ಗ್ರಾಮೀಣ ಪ್ರದೇಶದಲ್ಲಿ 70 ಸಾವಿರ ಹಾಗೂ ಪಟ್ಟಣದಲ್ಲಿ 11,800 ಜನಸಂಖ್ಯೆ ಇದ್ದು ಲಿಂಗಾನುಪಾತ ಸ್ಥಿರವಾಗಿದೆ. ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರತಿ ತಿಂಗಳು 30 ಮಹಿಳೆಯರಿಗೆ ಜನನ ನಿಯಂತ್ರಣ ಶಸ್ತ್ರ ಚಿಕಿತ್ಸೆ ನಡೆಯುತ್ತಿದ್ದು ವರ್ಷದಲ್ಲಿ 400 ಮಹಿಳೆಯರು ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುತ್ತಿದ್ದಾರೆ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ. ತನುಜಾ ಮಾಹಿತಿ ನೀಡಿದರು.

ಶಸ್ತ್ರ ಚಿಕಿತ್ಸೆಗೆ ಹಿಂಜರಿಯುವವರಿಗೆ  ರಾಜ್ಯ ಸರ್ಕಾರ ‘ಅಂತರ’ ಎನ್ನುವ ಚುಚ್ಚುಮದ್ದು ಪರಿಚಯಿಸಿದೆ. ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳ ಪ್ರಕಾರ ಒಂದು ಕುಟುಂಬಕ್ಕೆ 2 ಮಕ್ಕಳು ಸಾಕು ಎನ್ನುವ ನಿಯಮ ಇದೆ. ಇದರಂತೆ ಒಂದು ಮಗುವಿನ ನಂತರ ಕನಿಷ್ಠ 3 ವರ್ಷಗಳ ಅಂತರ ಕಾಯ್ದುಕೊಳ್ಳಬೇಕು. ಈ ಉದ್ದೇಶದಿಂದ ‘ಅಂತರ’ ಲಸಿಕೆಯನ್ನು ಪಡೆದುಕೊಂಡರೆ ಸಾಕು. ಸಂತಾನ ನಿಯಂತ್ರಣ ಸುಲಭವಾಗಲಿದೆ. ವರ್ಷಕ್ಕೆ 4 ಬಾರಿ ಹಾಕಿಸಿಕೊಂಡರೆ ಜನಸಂಖ್ಯಾ ಹೆಚ್ಚಳ ತಡೆಯಬಹದು ಎನ್ನುತ್ತಾರೆ ಡಾ.ತನುಜಾ.

Cut-off box - ಇಂದು ವಿಶ್ವ ಜನಸಂಖ್ಯಾ ದಿನ ‘ಯಾರನ್ನು ಬಿಡದಿರಿ. ಎಲ್ಲರನ್ನು ಎಣಿಸಿ’ ಎಂಬುದು ಈ ವರ್ಷದ ಜನಸಂಖ್ಯೆ ದಿನದ ಧ್ಯೇಯ ವಾಕ್ಯವಾಗಿದೆ. ಜನಸಂಖ್ಯೆ ಸಂಪತ್ತು ಆಗಬೇಕು. ಆಪತ್ತು ಆಗಬಾರದು. ಹಾಗಾಗಿ ಶಾಲಾ ದಾಖಲಾತಿಗಳಲ್ಲಿ ಲಿಂಗ ಸಮಾನತೆ ಸಂತಾನೋತ್ಪತಿ ಆರೋಗ್ಯದ ಮಾಹಿತಿ ಪಡೆದು ಜನ ಸಮುದಾಯದ ಆರೋಗ್ಯ ಹಕ್ಕುಗಳ ಬಗ್ಗೆ ಬೆಳಕು ಚೆಲ್ಲುವ ನಿಟ್ಟಿನಲ್ಲಿ ಜನಸಂಖ್ಯಾ ಶಿಕ್ಷಣಕ್ಕೆ ದಿನಕ್ಕೆ ಮಹತ್ವ ಪ್ರಾಪ್ತವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.