ಚಾಮರಾಜನಗರ: ಗಡಿ ಜಿಲ್ಲೆ ಪಾಲಿಗೆ 2022ರ ಜಲಸಂಪದ್ಭರಿತ ವರ್ಷ. ಮುಂಗಾರು ಪೂರ್ವದಿಂದಲೇ ಅಬ್ಬರಿಸಿದ ವರುಣ ಜಿಲ್ಲೆಯ ಜನರಿಗೆ ಸಿಹಿಯೊಂದಿಗೆ ಕಹಿಯನ್ನೂ ಉಣಿಸಿದ್ದಾನೆ.
ಎರಡು ಮೂರು ದಶಕಗಳಿಂದ ತುಂಬದೇ ಇದ್ದ ಕೆರೆ ಕಟ್ಟೆ, ಜಲಾಶಯಗಳು ಈ ವರ್ಷದ ಸತತ ಮಳೆಗೆ ತುಂಬಿದರೆ, ಮಿತಿ ಮೀರಿದ ವರ್ಷಧಾರೆ, ನೆರೆ ಉಂಟು ಮಾಡಿ ಜೀವ,ಮನೆ, ಬೆಳೆ ಹಾನಿಗೂ ಕಾರಣವಾಯಿತು.
ಮಾರ್ಚ್ ಕೊನೆಯ ವಾರದಿಂದಲೇ ಜಿಲ್ಲೆಗೆ ಮಳೆಯ ಸಿಂಚನವಾಗಿತ್ತು. ಏಪ್ರಿಲ್ ಮೇ ಹೊತ್ತಿಗೆ ಕೆರೆಕಟ್ಟೆ, ಜಲಾಶಯಗಳು ಭರ್ತಿಯಾಗಿದ್ದವು. ಆಗಸ್ಟ್ ತಿಂಗಳಲ್ಲಿ ಎಡೆಬಿಡದೆ ಸುರಿದ ಮಳೆಗಾಗಿ ಕೆರೆ ಕಟ್ಟೆಗಳು ಉಕ್ಕಿ ಹರಿದು ಚಾಮರಾಜನಗರ, ಯಳಂದೂರು ಹಾಗೂ ಕೊಳ್ಳೇಗಾಲ ವ್ಯಾಪ್ತಿಯಲ್ಲಿ ಪ್ರವಾಹ ಉಂಟು ಮಾಡಿತು. ಐದು ದಶಕಗಳಲ್ಲೇ ಕಂಡು ಕೇಳರಿಯದ ನೆರೆ ಪರಿಸ್ಥಿತಿಗೆ ಗಡಿ ಜಿಲ್ಲೆ ಈ ವರ್ಷ ಸಾಕ್ಷಿಯಾಯಿತು.
ಮಳೆಯ ಹೊಡೆತದಿಂದ ಒಂಬತ್ತು ಮಂದಿ ಮೃತಪಟ್ಟರೆ, 1,717 ಮನೆಗಳಿಗೆ ಹಾನಿಯಾದವು. 2,500 ಹೆಕ್ಟೇರ್‌ಗೂ ಹೆಚ್ಚು ಪ್ರದೇಶದಲ್ಲಿ ಬೆಳೆದಿದ್ದ ಬೆಳೆ ಹಾನಿಯಾಯಿತು. ಉತ್ತಮ ಮಳೆಯಿಂದಾಗಿ ಅ ಅನ್ನದಾತ ಖುಷಿ ಪಟ್ಟರೆ ಬೆಳೆ ನಷ್ಟದಿಂದಾಗಿ ದುಃಖವನ್ನೂ ಪಡೆಯುವಂತಾಯಿತು.
ಕಾಡದ ಕೋವಿಡ್: 2021ರಲ್ಲಿ ಜಿಲ್ಲೆಯನ್ನು ಇನ್ನಿಲ್ಲದಂತೆ ಕಾಡಿದ ಕೋವಿಡ್ ಕಾಟ ಈ ವರ್ಷ ಇರಲಿಲ್ಲ. ಎರಡನೇ ಅಲೆಯ ಕೊನೆಯ ಹಂತದೊಂದಿಗೆ 2022 ಆರಂಭವಾಗಿತ್ತು. ಒಂದೂವರೆ ತಿಂಗಳ ಅವಧಿಯಲ್ಲಿ ಕೊರೊನಾ ವೈರಸ್ ಬಾಲ ಮುದುಡಿತ್ತು. ಕೆಲವೇ ದಿನಗಳಲ್ಲಿ ಜನ ಜೀವನ ಸಹಜ ಸ್ಥಿತಿಗೆ ಬಂದಿತ್ತು.
ಜಾತ್ರೆ, ಉತ್ಸವಗಳು
ಶಿವರಾತ್ರಿಯ ಬಳಿಕ ಎಲ್ಲ ಹಬ್ಬ ಜಾತ್ರೆ ಉತ್ಸವಗಳು ವಿಜೃಂಭಣೆಯಿಂದ ನಡೆದವು. ಆರು ವರ್ಷಗಳ ನಂತರ ಬಿಳಿಗಿರಿರಂಗನಾಥಸ್ವಾಮಿಯ ರಥೋತ್ಸವ (ಏಪ್ರಿಲ್ 16) ನಡೆದರೆ, ಆಷಾಢ ಮಾಸದಲ್ಲಿ ನಡೆಯುವ ಅಪರೂಪದ ಚಾಮರಾಜನಗರದ ಚಾಮರಾಜೇಶ್ವರ ಸ್ವಾಮಿ ರಥೋತ್ಸವ ಐದು ವರ್ಷಗಳ ನಂತರ ನಡೆಯಿತು. ಹೊಸ ರಥ ನಿರ್ಮಾಣವಾಗದಿರುವ ಕಾರಣಕ್ಕೆ ಎರಡೂ ರಥೋತ್ಸವಗಳು ನಡೆದಿರಲಿಲ್ಲ. ಮಹದೇಶ್ವರ ಬೆಟ್ಟದಲ್ಲಿ ಶಿವರಾತ್ರಿ, ಯುಗಾದಿ ಜಾತ್ರೆ ಸೇರಿದಂತೆ ವರ್ಷದ ಎಲ್ಲ ಜಾತ್ರೆಗಳು, ರಥೋತ್ಸವಗಳು ಲಕ್ಷಾಂತರ ಭಕ್ತರ ಉಪಸ್ಥಿತಿಯಲ್ಲಿ ವೈಭವಯುತವಾಗಿ ಜರುಗಿದವು.
ಚಾಮರಾಜನಗರ ತಾಲ್ಲೂಕಿನ ಕನಕಗಿರಿ ಜೈನ ಕ್ಷೇತ್ರದಲ್ಲಿ ಏಪ್ರಿಲ್ 27ರಿಂದ ಮೇ 5ರವರೆಗೆ ಅತಿಶಯಮಹೋತ್ಸವ ಹಾಗೂ ಬಾಹುಬಲಿಗೆ ಮಹಾಮಸ್ತಕಾಭಿಷೇಕ ಅದ್ದೂರಿಯಾಗಿ ನಡೆಯಿತು
ಕೊಳ್ಳೇಗಾಲ ತಾಲ್ಲೂಕಿನ ಪಾಳ್ಯಗ್ರಾಮದ ಸೀಗಮಾರಮ್ಮನ ಬಲಿ ಹಬ್ಬವು 19 ವರ್ಷಗಳ ಬಳಿಕ ಸಾವಿರಾರು ಭಕ್ತರ ಸಮ್ಮುಖದಲ್ಲಿ ಮೇ 10ರಂದು ನಡೆಯಿತು. ಎರಡು ವರ್ಷಗಳ ಬಳಿಕ ಜಿಲ್ಲಾ ದಸರಾ ಸಂಭ್ರಮ ನಾಲ್ಕು ದಿನಗಳ ಕಾಲ ಅದ್ಧೂರಿಯಾಗಿ ನಡೆಯಿತು.
ಉಮ್ಮತ್ತೂರಿನ ಉರುಕಾತೇಶ್ವರಿ ದೇವಾಲಯವನ್ನು ಮುಜರಾಯಿ ಇಲಾಖೆಯು ಜೂನ್ ತಿಂಗಳಲ್ಲಿ ತನ್ನ ವಶಕ್ಕೆ ಪಡೆದುಕೊಂಡಿತು.
ರಾಜಕೀಯ ಬೆಳವಣಿಗೆ
ಈ ವರ್ಷ ಜಿಲ್ಲೆಯಲ್ಲಿ ರಾಜಕೀಯವಾಗಿ ಪ್ರಮುಖ ಬೆಳವಣಿಗೆಗಳು ನಡೆಯಲಿಲ್ಲ. ಏಪ್ರಿಲ್‌ನಲ್ಲಿ ಚಾಮರಾಜನಗರ ಹಾಗೂ ಗುಂಡ್ಲುಪೇಟೆಗಳ ಎಪಿಎಂಸಿಗೆ ಚುನಾವಣೆ ನಡೆಯಿತು. ಎರಡರಲ್ಲೂ ಬಿಜೆಪಿ ಬೆಂಬಲಿಗರು ಹೆಚ್ಚಿನ ಸ್ಥಾನ ಗೆದ್ದು ಅಧಿಕಾರ ಹಿಡಿದರು. ಜೂನ್ ತಿಂಗಳಲ್ಲಿ ಚಾಮುಲ್ ಚುನಾವಣೆ ನಡೆಯಿತು ಇಲ್ಲೂ ಬಿಜೆಪಿಯೇ ಅಧಿಕಾರ ಸ್ಥಾಪಿಸಿತು.
ಬಿಎಸ್‌ಪಿಯ ಆರು ಮಂದಿಯ ಸದಸ್ವಯತ್ವ ಅನರ್ಹತೆಯಿಂದಾಗಿ ತೆರವಾಗಿದ್ದ ಕೊಳ್ಳೇಗಾಲದ ನಗರಸಭೆಯ ಏಳು ವಾರ್ಡ್‌ಗಳಿಗೆ ಅಕ್ಟೋಬರ್ ಕೊನೆಯ ವಾರದಲ್ಲಿ ಚುನಾವಣೆ ನಡೆಯಿತು. ಅನರ್ಹಗೊಂಡ ಏಳು ಮಂದಿಯಲ್ಲಿ ಆರು ಮಂದಿ ಬಿಜೆಪಿ ಟಿಕೆಟ್‌ನಿಂದ ಸ್ಪರ್ಧಿಸಿದ್ದರು. ಈ ಪೈಕಿ ಐವರು ಗೆಲುವು ಸಾಧಿಸಿದರು.
ಹನೂರು ಬಿಜೆಪಿಯಲ್ಲಿ ಪರಿಮಳಾ ನಾಗಪ್ಪ ಹಾಗೂ ಬಿ.ವೆಂಕಟೇಶ್ ಬೆಂಬಲಿಗರ ನಡುವೆ ಕಲಹಕ್ಕೂ ಈ ವರ್ಷ ಸಾಕ್ಷಿಯಾಯಿತು.
ರಾಜ್ಯ ಸರ್ಕಾರದ ಭ್ರಷ್ಟಾಚಾರ, ಅಗತ್ಯ ವಸ್ತುಗಳ ಬೆಲೆ ಏರಿಕೆ, ಗುತ್ತಿಗೆದಾರ ಸಂತೋಷ್ ಕೆ.ಪಾಟೀಲ ಆತ್ಮಹತ್ಯೆ ಪ್ರಕರಣದಲ್ಲಿ ಕೆ.ಎಸ್.ಈಶ್ವರಪ್ಪ ಅವರ ವಿರುದ್ಧ ಭ್ರಷ್ಟಾಚಾರ ಆರೋಪದ ಅಡಿಯಲ್ಲಿ ಪ್ರಕರಣ ದಾಖಲಿಸಿ ಬಂಧಿಸುವಂತೆ ಒತ್ತಾಯಿಸಿ ಕಾಂಗ್ರೆಸ್ ಏಪ್ರಿಲ್ 19ರಂದು ಚಾಮರಾಜನಗರದಲ್ಲಿ ಪ್ರತಿಭಟನಾ ರ‍್ಯಾಲಿ ನಡೆಸಿತು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನವೆಂಬರ್ 13ರಂದು ಜಿಲ್ಲೆಗೆ ಭೇಟಿ ನೀಡಿ, ಚಾಮರಾಜನಗರ ಹಾಗೂ ಹನೂರಿನಲ್ಲಿ ಬೃಹತ್ ಸಮಾವೇಶದಲ್ಲಿ ಪಾಲ್ಗೊಂಡರು.
ಮುಂದುವರಿದ ಮಾನವ ವನ್ಯಜೀವಿ ಸಂಘರ್ಷ
ಶೇ 48ರಷ್ಟು ಅರಣ್ಯ ಪ್ರದೇಶ ಇರುವ ಜಿಲ್ಲೆಯಲ್ಲಿ ಮಾನವ ವನ್ಯಜೀವಿ ಸಂಘರ್ಷ ಈ ವರ್ಷವೂ ಮುಂದುವರಿಯಿತು. ಜನ, ಜಾನುವಾರುಗಳ ಮೇಲೆ ಹುಲಿ, ಆನೆ, ಚಿರತೆ ದಾಳಿಯಂತಹ ಪ್ರಕರಣಗಳು ಬಂಡೀಪುರ, ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶ, ಮಲೆ ಮಹದೇಶ್ವರ ವನ್ಯಧಾಮ ಹಾಗೂ ಕಾವೇರಿ ವನ್ಯಧಾಮದ ವ್ಯಾಪ್ತಿಯಲ್ಲಿ ವರದಿಯಾದವು. ಜೀವ ಹಾನಿಯೂ ಸಂಭವಿಸಿದವು.
ಮದ್ರಾಸ್ ಹೈಕೋರ್ಟ್‌ನ ತೀರ್ಪಿನಂತೆ ರಾಜ್ಯದ ಗಡಿಭಾಗದಲ್ಲಿರುವ ತಮಿಳುನಾಡಿನ ದಿಂಬಂ ಘಾಟಿ ರಸ್ತೆಯಲ್ಲಿ ರಾತ್ರಿ ಸಂಚಾರ ನಿಷೇಧವಾಯಿತು. ಆ ಬಳಿಕ ಮಹದೇಶ್ವರ ಬೆಟ್ಟ, ನಾಲ್‌ರೋಟ್ ಆಂದಿಯೂರು ರಸ್ತೆಗಳಲ್ಲಿ ವಾಹನಗಳು ಓಡಾಡಲು ಆರಂಭವಾಗಿದ್ದರಿಂದ ಜಿಲ್ಲಾಡಳಿತ ಆ ರಸ್ತೆಗಳಲ್ಲೂ ರಾತ್ರಿ ಭಾರಿ ಲಾರಿಗಳ ಓಡಾಟ ನಿರ್ಬಂಧಿಸಿತು.
ಸಾಂಸ್ಕೃತಿಕ, ಸಾಹಿತ್ಯ ಚಟುವಟಿಕೆಗಳು
ಕಾಮಗಾರಿ ಆರಂಭಗೊಂಡ 12 ವರ್ಷಗಳ ಬಳಿಕ ಜಿಲ್ಲಾ ರಂಗ ಮಂದಿರ ಉದ್ಘಾಟನೆಯಾಯಿತು. ಅದಕ್ಕೆ ವರನಟ ಡಾ.ರಾಜ್‌ಕುಮಾರ್ ಅವರ ಹೆಸರನ್ನೂ ಇಡಲಾಯಿತು.
ಲೇಖಕ ಡಾ.ಮೂಡ್ನಾಕೂಡು ಚಿನ್ನಸ್ವಾಮಿ ಅವರ ‘ಬಹುತ್ವದ ಭಾರತ ಮತ್ತು ಬೌದ್ಧ ತಾತ್ವಿಕತೆ ಕೃತಿ’ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಗೆ ಆಯ್ಕೆಯಾಯಿತು.
ಗೊರವರ ಕುಣಿತದ ಆರ್.ಎಂ. ಶಿವಮಲ್ಲೇಗೌಡ ಅವರಿಗೆ ಜಾನಪದ ಅಕಾಡೆಮಿ–2021ನೇ ಸಾಲಿನ ಪ್ರಶಸ್ತಿಗೆ ಆಯ್ಕೆಯಾದರು. 2022ನೇ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿಗೆ ಚಾಮರಾಜನಗರ ತಾಲ್ಲೂಕಿನ ಗಂಗವಾಡಿ ಗ್ರಾಮದ ವೀರಭದ್ರ ಕುಣಿತದ ಕಲಾವಿದ ಶಿವರುದ್ರಸ್ವಾಮಿ ಆಯ್ಕೆಯಾದರು. ಹನೂರು ತಾಲ್ಲೂಕಿನ ಜೀರಿಗೆ ಗದ್ದೆಯ ಸೋಲಿಗರ ಮಾದಮ್ಮ ಈ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದರು.
ಗಣರಾಜ್ಯೋತ್ಸವದ ಪ್ರಯುಕ್ತ ಆಲ್ ಇಂಡಿಯಾ ರೇಡಿಯೊ ಪ್ರಸಾರ ಭಾರತಿ ನಡೆಸಿದ, ಅಖಿಲ ಭಾರತ ಸರ್ವಭಾಷಾ ಕವಿ ಸಮ್ಮೇಳನದಲ್ಲಿ ಕೊಳ್ಳೇಗಾಲದ ಸಾಹಿತಿ ಮಹದೇವ ಶಂಕನಪುರ ಕವಿತೆ ವಾಚಿಸಿದರು.
ಮೈಸೂರು ದಸರಾ ಮಹೋತ್ಸವ ಸಮಿತಿಯಿಂದ ರಾಜ್ಯಮಟ್ಟದ ರಾಜಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿಗೆ ಜಾನಪದ ಕಲಾವಿದ ಜಾನಪದ ಗಾಯಕ ಸಿ.ಎಂ.ನರಸಿಂಹಮೂರ್ತಿ ಆಯ್ಕೆಯಾದರು.
ಅಗಲಿದವರು
ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಕಾಗಲವಾಡಿ ಬಸವಯ್ಯ (95) ಅವರು ಸೆ.23ರಂದು ಹಾಗೂ ಅ.11ರಂದು ಲಲಿತಾ ಜಿ.ತಗತ್ (90) ನಿಧನರಾದರು.
ಜಿಲ್ಲೆಗೆ ಬೆಳ್ಳಿ ಹಬ್ಬದ ಸಂಭ್ರಮ
ಚಾಮರಾಜನಗರವು ಮೈಸೂರಿನಿಂದ ಪ್ರತ್ಯೇಕಗೊಂಡು ಜಿಲ್ಲೆಯಾಗಿ ರಚನೆಯಾಗಿ ಈ ವರ್ಷ 25 ವರ್ಷ ಪೂರ್ಣಗೊಂಡಿತು. ಆದರೆ, ಜಿಲ್ಲಾಡಳಿತ ಬೆಳ್ಳಿ ಹಬ್ಬ ಆಚರಿಸಲಿಲ್ಲ. ಸಂಘ ಸಂಸ್ಥೆಗಳು ವಿಶಿಷ್ಟ ಸಮಾರಂಭ ಆಯೋಜಿಸುವ ಮೂಲಕ ರಜತಮಹೋತ್ಸವನ್ನು ಆಚರಿಸಿದವು.
ಅಯ್ಯಪ್ಪನ್‌ಗೆ ಪದ್ಮಶ್ರೀ ಗೌರವ
ವಿಜ್ಞಾನ–ತಂತ್ರಜ್ಞಾನ ಕ್ಷೇತ್ರದಲ್ಲಿ 2022ನೇ ಸಾಲಿನ ಪದ್ಮಶ್ರೀ ಪುರಸ್ಕಾರಕ್ಕೆ ಜಿಲ್ಲೆಯವರಾದ ಡಾ.ಎಸ್.ಅಯ್ಯಪ್ಪನ್ ಅವರು ಆಯ್ಕೆಯಾದರು.
ಗಣಿ ದುರಂತ, ರಥಕ್ಕೆ ಸಿಲುಕಿ ಸಾವು
2022ರಲ್ಲಿ ಜಿಲ್ಲೆಯಲ್ಲಿ ಎರಡು ಗಣಿ ದುರಂತ ನಡೆದವು. ಮಾರ್ಚ್ 4ರಂದು ಗುಂಡ್ಲುಪೇಟೆ ತಾಲ್ಲೂಕಿನ ಮಡಹಳ್ಳಿಯ ಬಿಳಿಕಲ್ಲು ಕ್ವಾರಿ ಗುಡ್ಡ ಕುಸಿದು, ಉತ್ತರ ಪ್ರದೇಶದ ಮೂವರು ಮೃತಪಟ್ಟರೆ; ಡಿ.26ರಂದು ಚಾಮರಾಜನಗರ ತಾಲ್ಲೂಕಿನ ಬಿಸಲವಾಡಿ ಗ್ರಾಮದಲ್ಲಿ ಬಿಳಿಕಲ್ಲು ಕ್ವಾರಿಯಲ್ಲಿ ಕಲ್ಲು ಕುಸಿದು ಕಾಗಲವಾಡಿ ಮೋಳೆಯ ಮೂವರು ಕಾರ್ಮಿಕರು ಅಸು ನೀಗಿದರು.
ಮೇ 15ರಂದು ಗುಂಡ್ಲುಪೇಟೆ ತಾಲ್ಲೂಕಿನ ಪಾರ್ವತಿ ಬೆಟ್ಟದಲ್ಲಿ ರಥೋತ್ಸವದ ವೇಳೆ ರಥದ ಚಕ್ರಕ್ಕೆ ಸಿಲುಕಿ ಇಬ್ಬರು ಮೃತಪಟ್ಟರು.
ಆಗಸ್ಟ್ 5ರಂದು ಸಂತೇಮರಹಳ್ಳಿ ಕುದೇರು ರಸ್ತೆಯಲ್ಲಿ ಆಲದ ಮರ ಓಮಿನಿ ಮೇಲೆ ಬಿದ್ದು ತಂದೆ ಹಾಗೂ ಮಗ ಮೃತಪಟ್ಟರು.
ಹಣದಾಸೆಗೆ ತನ್ನ 25 ದಿನದ ಮಗುವನ್ನು ಮಾರಾಟ ಮಾಡಿದ ಪ್ರಕರಣ ಸೆ.20ರಂದು ಬೆಳಕಿಗೆ ಬಂತು. ಪ್ರಕರಣ ದಾಖಲಾದ ಮೇಲೆ ಪೊಲೀಸರು ಮಗುವನ್ನು ಪತ್ತೆ ಹಚ್ಚಿ ಪೋಷಕರಿಗೆ ಒಪ್ಪಿಸಿದರು.
ನವೆಂಬರ್ 30ರಂದು ಮಾಂಬಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕುಂತೂರು ಮೋಳೆ ಗ್ರಾಮದ ಯುವಕ ಪೊಲೀಸ್ ಜೀಪಿನಿಂದ ಹಾರಿ ಸಾವು. ಕರ್ತವ್ಯ ಲೋಪ ಆರೋಪದ ಮೇಲೆ ಸರ್ಕಲ್ ಇನ್‌ಸ್ಪೆಕ್ಟರ್, ಸಬ್ ಇನ್‌ಸ್ಪೆಕ್ಟರ್ ಸೇರಿ ಐವರು ಪೊಲೀಸ್ ಸಿಬ್ಬಂದಿ ಅಮಾನತು ಮಾಡಲಾಗಿತ್ತು.
ಚಾಮರಾಜನಗರ ತಾಲ್ಲೂಕಿನ ಚೆನ್ನಪ್ಪನಪುರದ ಅಮಚವಾಡಿ ಗುಡ್ಡದ ಮಠದ ವೀರಭದ್ರೇಶ್ವರ ದೇವಾಲಯದಲ್ಲಿ ನ.1ರಂದು ರಥೋತ್ಸವ ನಡೆಯುತ್ತಿದ್ದ ಸಂದರ್ಭದಲ್ಲಿ ರಥದ ಚಕ್ರದ ಪಟ್ಟಿ ತುಂಡಾಗಿ ರಥ ಉರುಳಿ ಬಿತ್ತು.
ಕೇರಳಕ್ಕೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 766ರಲ್ಲಿ ಬಂಡೀಪುರ ಹುಲಿ ಸಂರಕ್ಷಿತ ಅರಣ್ಯದೊಳಗೆ ಲಾರಿ ಡಿಕ್ಕಿಯಾಗಿ ಹೆಣ್ಣಾನೆ ಮೃತಪಟ್ಟ ಪ್ರಕರಣ ಡಿ.14ರಂದು ನಡೆಯಿತು.
ಉಕ್ರೇನ್‌ನಲ್ಲಿ ಸಿಲುಕಿದ ವಿದ್ಯಾರ್ಥಿಗಳು
ರಷ್ಯಾ–ಉಕ್ರೇನ್ ನಡುವೆ ಯುದ್ಧ ಆರಂಭವಾದಾಗ ಜಿಲ್ಲೆಯ ನಾಲ್ವರು ವೈದ್ಯಕೀಯ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದರು.
ಹನೂರು ತಾಲ್ಲೂಕಿನ ಒಡೆಯರ್‌ಪಾಳ್ಯದ ಸಿದ್ದೇಶ್, ಹನೂರಿನ ಸ್ವಾತಿ, ಅಜ್ಜೀಪುರದ ಭೂಮಿಕಾ ಹಾಗೂ ಗುಂಡ್ಲುಪೇಟೆ ತಾಲ್ಲೂಕಿನ ಕಾವ್ಯ ಸುರಕ್ಷಿತವಾಗಿ ತವರಿಗೆ ಮರಳಿದ್ದರು.
ಭಾರತ್ ಜೋಡೋ ಯಾತ್ರೆ
ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆದ ಭಾರತ್ ಜೋಡೋ ಯಾತ್ರೆಯು ಸೆ.30ರಂದು ಗುಂಡ್ಲುಪೇಟೆ ಮೂಲಕ ರಾಜ್ಯವನ್ನು ಪ್ರವೇಶಿಸಿತು.
ಕಾಂಗ್ರೆಸ್‌ನ ರಾಷ್ಟ್ರೀಯ, ರಾಜ್ಯ ಮುಖಂಡರು ಇದರಲ್ಲಿ ಭಾಗವಹಿಸಿದ್ದರು. ಈ ಯಾತ್ರೆಯ ಮೂಲಕ ಕಾಂಗ್ರೆಸ್ ರಾಜ್ಯದಲ್ಲಿ ತನ್ನ ಶಕ್ತಿ ಪ್ರದರ್ಶಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.