ADVERTISEMENT

ಚಾಮರಾಜನಗರ: ಏಲಕ್ಕಿ, ಪಚ್ಚೆ ಬಾಳೆ ಬೆಲೆ ಕುಸಿತ; ರೈತ ಕಂಗಾಲು

ಸತತ ಮಳೆಯ ಬಳಿಕ ದಿಢೀರ್‌ ಕುಸಿತ; ನಷ್ಟದಲ್ಲಿ ಬೆಳೆಗಾರ

ಸೂರ್ಯನಾರಾಯಣ ವಿ.
Published 4 ಜನವರಿ 2022, 19:30 IST
Last Updated 4 ಜನವರಿ 2022, 19:30 IST
ಸಂತೇಮರಹಳ್ಳಿಯ ರೈತರೊಬ್ಬರ ಜಮೀನಿನಲ್ಲಿ ಗೊನೆ ಬಿಟ್ಟಿರುವ ಏಲಕ್ಕಿ ಬಾಳೆ
ಸಂತೇಮರಹಳ್ಳಿಯ ರೈತರೊಬ್ಬರ ಜಮೀನಿನಲ್ಲಿ ಗೊನೆ ಬಿಟ್ಟಿರುವ ಏಲಕ್ಕಿ ಬಾಳೆ   

ಚಾಮರಾಜನಗರ: ನವೆಂಬರ್‌ನಲ್ಲಿ ನಿರಂತರವಾಗಿ ಮಳೆ ಸುರಿದ ನಂತರ ಜಿಲ್ಲೆಯಲ್ಲಿ ಏಲಕ್ಕಿ, ಪಚ್ಚೆ ಬಾಳೆಯ ದರದಲ್ಲಿ ಗಣನೀಯ ಕುಸಿತ ಕಂಡು ಬಂದಿದ್ದು, ಬೆಳೆಗಾರರು ಕಂಗಾಲಾಗಿದ್ದಾರೆ.

ಬಾಳೆಕಾಯಿ ಖರೀದಿ ಮಾಡಲು ವ್ಯಾಪಾರಿಗಳೇ ಮುಂದಾಗುತ್ತಿಲ್ಲ. ಕೊಳ್ಳುವವರೂ ಕಡಿಮೆ ಬೆಲೆಗೆ ಕೇಳುತ್ತಿದ್ದಾರೆ. ಇದರಿಂದಾಗಿ ರೈತರಿಗೆ ಹಾಕಿದ ಬಂಡವಾಳವೇ ಬರುತ್ತಿಲ್ಲ. ಹಲವು ರೈತರು ನಷ್ಟವಾಗುತ್ತಿದೆ ಎಂಬ ಕಾರಣಕ್ಕೆ ಬಾಳೆಗೊನೆಯನ್ನು ಕೊಯ್ಯಲೂ ಮುಂದಾಗುತ್ತಿಲ್ಲ.

ಉತ್ತಮ ಗುಣಮಟ್ಟದ ಏಲಕ್ಕಿ ಬಾಳೆಕಾಯಿಯನ್ನು ವ್ಯಾಪಾರಿಗಳು ಕೆ.ಜಿ.ಗೆ ₹ 16ರಿಂದ ₹ 18ಕ್ಕೆ ಖರೀದಿಸುತ್ತಿದ್ದಾರೆ. ಗರಿಷ್ಠ ಎಂದರೆ ₹ 20 ಸಿಗುತ್ತಿದೆ.ಒಂದೂವರೆ ತಿಂಗಳ ಹಿಂದೆ ₹ 28ರಿಂದ ₹ 30ರವರೆಗೆ ಬೆಲೆ ಇತ್ತು.

ADVERTISEMENT

ಶೀತ ವಾತಾವರಣ ಮತ್ತು ಮಳೆಯಿಂದಾಗಿ ಈ ಬಾರಿ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಏಲಕ್ಕಿ ಬಾಳೆ ಫಸಲು ಚೆನ್ನಾಗಿ ಬಂದಿಲ್ಲ. ಸಾಧಾರಣ ಬಾಳೆಕಾಯಿಗೆ ಕೆ.ಜಿ.ಗೆ ₹ 14ರಿಂದ ₹ 16ಕ್ಕೆ ವ್ಯಾಪಾರಿಗಳು ಕೇಳುತ್ತಿದ್ದಾರೆ. ಮಂಡಿಗಳಲ್ಲಿ ಕೂಡ ಕೆ.ಜಿ.ಗೆ ₹ 5ರಿಂದ ₹ 6ಕ್ಕೆ ಹರಾಜು ಕೂಗುತ್ತಿದ್ದಾರೆ.

ಹಾಪ್‌ಕಾಮ್ಸ್‌ನಲ್ಲಿ ಕೆ.ಜಿ.ಗೆ ₹ 20ರಿಂದ ₹ 24ರವರೆಗೆ ಬೆಲೆ ಹೇಳುತ್ತಿದ್ದಾರೆ. ಆದರೆ, ಅಲ್ಲಿ ಖರೀದಿಯಾಗುವ ಪ್ರಮಾಣ ತುಂಬಾ ಕಡಿಮೆ ಎಂದು ಹೇಳುತ್ತಾರೆ ರೈತರು.

‘ಕಳೆದ ವರ್ಷ ಇದೇ ಅವಧಿಯಲ್ಲಿ ಏಲಕ್ಕಿ ಬಾಳೆ ಕಾಯಿಗೆ ₹ 40ರಿಂದ ₹ 45 ಬೆಲೆ ಇತ್ತು. ಈ ವರ್ಷ ನಾವು ಹಾಕಿದ ಬಂಡವಾಳವೇ ಬರದಷ್ಟು ಕಡಿಮೆ ಬೆಲೆ ಇದೆ. ₹ 18, ₹ 20ಕ್ಕೆ ಕೇಳುತ್ತಿದ್ದಾರೆ. ಹಾಗಾಗಿ, ಇನ್ನೂ ಬಾಳೆಗೊನೆ ಕಡಿದಿಲ್ಲ’ ಎಂದು ರಾಮಸಮುದ್ರದ ರೈತ ಶಿವಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮಳೆ ಆರಂಭಕ್ಕೂ ಮೊದಲು ಏಲಕ್ಕಿ ಬಾಳೆಗೆ ಕಳೆದ ವರ್ಷದಷ್ಟು ಇಲ್ಲದಿದ್ದರೂ ರೈತರಿಗೆ ನಷ್ಟವಾಗದ ರೀತಿಯ ಬೆಲೆ ಇತ್ತು. ನವೆಂಬರ್‌ನಲ್ಲಿ ಮಳೆ ಬಂದ ನಂತರ ಬೆಲೆ ಏಕಾಏಕಿ ಇಳಿದಿದೆ. ಒಂದು ಎಕರೆಯಲ್ಲಿ ಬಾಳೆ ಬೆಳೆಯಲು ₹ 1.25 ಲಕ್ಷದಿಂದ ₹ 1.50 ಲಕ್ಷದವರೆಗೂ ಖರ್ಚಿದೆ. ಎಕರೆಗೆ ಸರಾಸರಿ 8 ಟನ್‌ಗಳಷ್ಟು ಇಳುವರಿ ಬರುತ್ತದೆ. ಶೀತ, ಚಳಿಯ ವಾತಾವರಣದಿಂದಾಗಿ ಕಾಯಿಗಳು ಚೆನ್ನಾಗಿ ಬಂದಿಲ್ಲ. ಹಾಗಾಗಿ, ಮಾರುಕಟ್ಟೆಯಲ್ಲಿರುವಷ್ಟು ಬೆಲೆಯೂ ರೈತರಿಗೆ ಸಿಗುತ್ತಿಲ್ಲ. ಹಾಕಿದ ಬಂಡವಾಳ ಬಂದರೆ ಹೆಚ್ಚು’ ಎಂದು ರೈತ ತಮ್ಮಡಹಳ್ಳಿ ರವಿಶಂಕರ್‌ ಮಾಹಿತಿ ನೀಡಿದರು.

ಪಚ್ಚೆ ಬಾಳೆಗೂ ಇದೇ ಸ್ಥಿತಿ: ಪಚ್ಚೆಬಾಳೆ ಬೆಳೆಯ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಸಾಮಾನ್ಯವಾಗಿ ಕೆ.ಜಿ.ಗೆ ₹ 10ರಿಂದ ₹ 12 ಬೆಲೆ ಇರುತ್ತದೆ. ಈ ಬಾರಿ ₹ 5–₹ 6 ಇದೆಯಷ್ಟೆ. ಹಾಪ್‌ಕಾಮ್ಸ್‌ನಲ್ಲಿ ಕೆ.ಜಿ.ಗೆ ₹ 7 ನೀಡುತ್ತಿದ್ದಾರೆ.

ನೇಂದ್ರ ಬೆಳೆಗಾರರಿಗೆ ಖುಷಿ

ಏಲಕ್ಕಿ, ಪಚ್ಚೆ ಬೆಳೆದಿರುವವರಿಗೆ ಹೋಲಿಸಿದರೆ, ನೇಂದ್ರ ಬೆಳೆಗಾರರು ಈ ವರ್ಷ ಖುಷಿಯಲ್ಲಿದ್ದಾರೆ.

ಮಾರುಕಟ್ಟೆಯಲ್ಲಿ ಕೆ.ಜಿ. ನೇಂದ್ರ ಬಾಳೆಕಾಯಿಗೆ ₹ 30ರಿಂದ ₹ 32 ಬೆಲೆ ಇದೆ. ಕ್ರಿಸ್‌ಮಸ್‌ ಅವಧಿಯಲ್ಲಿ ₹ 36ರವರೆಗೂ ಬೆಲೆ ಇತ್ತು.

‘ಕಳೆದ ವರ್ಷ ನೇಂದ್ರ ಬಾಳೆಯ ಬೆಲೆ ಕುಸಿದು ಬೆಳೆಗಾರರು ತೀವ್ರ ನಷ್ಟ ಅನುಭವಿಸಿದ್ದರು. ಈ ವರ್ಷ ಇದಕ್ಕೆ ಬೆಲೆ ಇದೆ. ಉಳಿದ ಎರಡು ಬಾಳೆಗೆ ಬೆಲೆ ಇಲ್ಲದೆ, ರೈತರು ನಷ್ಟ ಅನುಭವಿಸಬೇಕಾಗಿದೆ’ ಎಂದು ರವಿಶಂಕರ್‌ ಹೇಳಿದರು.

22 ಸಾವಿರ ಹೆಕ್ಟೇರ್‌ನಲ್ಲಿ ಬೆಳೆ

ತೋಟಗಾರಿಕಾ ಇಲಾಖೆಯ ಅಂಕಿ ಅಂಶಗಳ ಪ್ರಕಾರ,ಜಿಲ್ಲೆಯಲ್ಲಿ 22 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಬಾಳೆ ಬೆಳೆಯುತ್ತಾರೆ. ಏಲಕ್ಕಿ, ನೇಂದ್ರ, ಪಚ್ಚೆ ಬಾಳೆ ಪ್ರಮುಖ ಬೆಳೆಗಳು. ಸಣ್ಣ ಪ್ರಮಾಣದಲ್ಲಿ ಇತರ ಬಾಳೆಗಳ ತಳಿಯನ್ನೂ ಬೆಳೆಯಲಾಗುತ್ತದೆ.

ಒಟ್ಟಾರೆ ಬಾಳೆ ಬೆಳೆಯುವ ಪ‍್ರದೇಶದಲ್ಲಿಶೇ 35 ಭಾಗ ಏಲಕ್ಕಿ, ಶೇ 30–ಶೇ 35 ನೇಂದ್ರ ಹಾಗೂ ಶೇ 25 ಪಚ್ಚೆ ಬಾಳೆ ಬೆಳೆಯಲಾಗುತ್ತದೆ ಎಂದು ಹೇಳುತ್ತಾರೆ ಅಧಿಕಾರಿಗಳು.

ಅಂದಾಜು 6 ಸಾವಿರ ಹೆಕ್ಟೇರ್‌ನಷ್ಟು ಪ್ರದೇಶದಲ್ಲಿ ಬೆಳೆಯುವ ಬಾಳೆ (ಬಹುತೇಕ ನೇಂದ್ರ, ಚಿಪ್ಸ್‌ಗಾಗಿ) ಕೇರಳಕ್ಕೆ ಹೋಗುತ್ತದೆ. ಪಚ್ಚೆ ಬಾಳೆ ಬೆಂಗಳೂರಿಗೆ ಹೋಗುತ್ತದೆ. ಏಲಕ್ಕಿ ಬಾಳೆ ಮೈಸೂರು, ಬೆಂಗಳೂರು ಕಡೆಗೆ ಹೆಚ್ಚು ಸಾಗಾಟವಾಗುತ್ತದೆ.

--

ತೀವ್ರ ಶೀತ ವಾತಾವರಣ, ನಿರಂತರ ಮಂಜು ಸುರಿಯುತ್ತಿದ್ದರೆ ಬಾಳೆ ಕಾಯಿಯ ಮೇಲೆ ಕಪ್ಪು ಚುಕ್ಕೆ ಮೂಡುತ್ತದೆ. ಈ ಬಾರಿ ಹಲವು ಕಡೆಗಳಲ್ಲಿ ಈ ಸಮಸ್ಯೆ ಕಾಣಿಸಿಕೊಂಡಿದೆ

-ಬಿ.ಎಲ್‌.ಶಿವಪ್ರಸಾದ್‌, ತೋಟಗಾರಿಕಾ ಇಲಾಖೆ ಉಪನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.