ಯಳಂದೂರು: ತಾಲ್ಲೂಕಿನ 50 ರೈತರು ಬೆಂಗಳೂರು ಕೃಷಿ ವಿಶ್ವ ವಿದ್ಯಾಲಯದ ಆಶ್ರಯದಲ್ಲಿ ನ. 17ರವರೆಗೆ ಗಾಂಧಿ ಕೃಷಿ ವಿಜ್ಞಾನ ಕೇಂದ್ರದ (ಜಿಕೆವಿಕೆ) ಆವರಣದಲ್ಲಿ ಆಯೋಜಿಸಿರುವ ಕೃಷಿ ಮೇಳದಲ್ಲಿ ಭಾಗವಹಿಸಲು ಶುಕ್ರವಾರ ತೆರಳಿದರು.
ಪಟ್ಟಣದ ಕೃಷಿ ಇಲಾಖೆ ಕಚೇರಿ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಹಾಯಕ ನಿರ್ದೇಶಕ ಅಮೃತೇಶ್ವರ ಮಾತನಾಡಿ, ‘ಬೇಸಾಯಗಾರರು ಕೃಷಿ ಮೇಳದಲ್ಲಿ ಭಾಗವಹಿಸುವುದರಿಂದ ನೂತನ ಕೃಷಿ ವಿಧಾನ, ಯಾಂತ್ರೀಕೃತ ಕೃಷಿ ಪರಿಕರಗಳು, ಬೆಳೆ ಮಾದರಿಗಳ ಬಗ್ಗೆ ತಿಳಿಯಬಹುದು. ಯುವ ರೈತರು 700ಕ್ಕೂ ಹೆಚ್ಚಿನ ಮಳಿಗೆಗಳಿಗೆ ಭೇಟಿ ನೀಡಿ ರಿಯಾಯಿತಿ ದರದಲ್ಲಿ ಕೃಷಿಗೆ ಸಂಬಂಧಿಸಿದ ಪದಾರ್ಥಗಳನ್ನು ಕೊಳ್ಳಬಹುದು’ ಎಂದರು,
ತಾಂತ್ರಿಕ ಅಧಿಕಾರಿ ಎ.ವೆಂಕಟರಂಗಶೆಟ್ಟಿ, ‘ಮೇಳದಲ್ಲಿ ಉಚಿತ ಪ್ರವೇಶ ಇರುತ್ತದೆ. ಸಂಶೋಧಕರು ಅಭಿವೃದ್ಧಿಪಡಿಸಿದ ರೋಗರಹಿತ ಮುಸುಕಿನಜೋಳ, ಅಲಸಂದೆ, ಸೂರ್ಯಕಾಂತಿ ಸಂಕರಣ ತಳಿಗಳ ಬಗ್ಗೆ ಮಾಹಿತಿ ಪಡೆಯಬಹುದು. ಪ್ರತ್ಯಕ್ಷಿಕೆ ಮೂಲಕ ಬೆಳೆ ಮಾದರಿಗಳನ್ನು ಪರಿಚಯ ಮಾಡಿಕೊಳ್ಳಬಹುದು. ಕೃಷಿ ಡ್ರೋನ್, ರೊಬೊಟ್ ಕೃಷಿ ಯಂತ್ರ, ಹಣ್ಣುಗಳ ವರ್ಗೀಕರಣ ಯಂತ್ರ, ರಸಗೊಬ್ಬರ ಹರಡುವ ಯಂತ್ರ, ಜೂಮ್ ಸ್ಪ್ರೇಯರ್ಗಳ ಬಹುಮುಖಿ ಉಪಯೋಗಗಳ ಬಗ್ಗೆ ಮಾಹಿತಿ ಸಂಗ್ರಹಿಸಬಹುದು’ ಎಂದರು,
ಕೃಷಿಕ ಪ್ರದೀಪ್ ನಾಯಕ್, ಮಹದೇವ, ನಾರಾಯಣ, ರಾಜೇಶ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.