ADVERTISEMENT

ಪೊಲೀಸ್ ಠಾಣೆ ಮುಂದೆ ಗ್ರಾಮಸ್ಥರ ಪ್ರತಿಭಟನೆ

ಡಾ.ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಅಡ್ಡಿ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2023, 16:13 IST
Last Updated 8 ಡಿಸೆಂಬರ್ 2023, 16:13 IST
ಯಳಂದೂರು ಪಟ್ಟಣ ಪೊಲೀಸ್ ಠಾಣೆ ಆವರಣದಲ್ಲಿ ಗುರುವಾರ ರಾತ್ರಿ ವೈ.ಕೆ.ಮೋಳೆ ಗ್ರಾಮಸ್ಥರು ಡಾ.ಅಂಬೇಡ್ಕರ್ ಭವನ ಹಾಗೂ ಟವರ್ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿ ಪೊಲೀಸರೊಡನೆ ಮಾತುಕತೆ ನಡೆಸಿದರು.
ಯಳಂದೂರು ಪಟ್ಟಣ ಪೊಲೀಸ್ ಠಾಣೆ ಆವರಣದಲ್ಲಿ ಗುರುವಾರ ರಾತ್ರಿ ವೈ.ಕೆ.ಮೋಳೆ ಗ್ರಾಮಸ್ಥರು ಡಾ.ಅಂಬೇಡ್ಕರ್ ಭವನ ಹಾಗೂ ಟವರ್ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿ ಪೊಲೀಸರೊಡನೆ ಮಾತುಕತೆ ನಡೆಸಿದರು.   

ಯಳಂದೂರು: ತಾಲ್ಲೂಕಿನ ವೈ.ಕೆ.ಮೋಳೆ ಗ್ರಾಮದ ಪರಿಶಿಷ್ಟರ ಬಡಾವಣೆಯಲ್ಲಿ ನಿರ್ಮಾಣ ಮಾಡುತ್ತಿರುವ ಡಾ.ಬಿ.ಆರ್.ಅಂಬೇಡ್ಕರ್ ಭವನದ ಕಾಮಗಾರಿಗೆ ತೊಂದರೆ ಎದುರಾಗಿದೆ ಎಂದು ಆರೋಪಿಸಿ ಗುರುವಾರ ರಾತ್ರಿ ಪಟ್ಟಣ ಪೊಲೀಸ್ ಠಾಣೆ ಮುಂದೆ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

ಸಮಾಜ ಕಲ್ಯಾಣ ಇಲಾಖೆ ನೀಡಲಾದ ಸ್ಥಳದಲ್ಲಿ ₹ 37 ಲಕ್ಷ ವೆಚ್ಚದಲ್ಲಿ ಸಮುದಾಯ ಭವನ ನಿರ್ಮಾಣವಾಗುತ್ತಿದೆ. ಇದೇ ಗ್ರಾಮದ ಕೆಲವರು ಕಾಮಗಾರಿಯನ್ನು ನಿಲ್ಲಿಸಲು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ. ಇದರಿಂದ ಕಟ್ಟಡ ಕಾಮಗಾರಿಗೆ ತೊಂದರೆ ಎದುರಾಗಿದೆ.  ಭವನ ನಿರ್ಮಾಣಕ್ಕೆ ಪೊಲೀಸರು ಸಹಕಾರ ನೀಡಬೇಕು ಎಂದರು.

ಗ್ರಾಮದ ಮುಖ್ಯ ರಸ್ತೆಯಲ್ಲಿ ಖಾಸಗಿ ಮೊಬೈಲ್ ಕಂಪೆನಿ ಟವರ್ ನಿರ್ಮಿಸುತ್ತಿದ್ದು, ಜೀವ ಸಂಕುಲಕ್ಕೆ ಅಪಾಯ ಎದುರಾಗಿದೆ. ಈ ಕಾಮಗಾರಿಯನ್ನು ಕೂಡಲೇ ನಿಲ್ಲಿಸಬೇಕು ಎಂದು ಆಗ್ರಹಿಸಿದರು.

ADVERTISEMENT

ಸಿಪಿಐ ಶಿವರಾಜ್ ಮುದೋಳ್, ಪಿಎಸ್ಐ ಚಂದ್ರಹಾಸ್ ನಾಯಕ್ ಈ ಬಗ್ಗೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಕಾಮಗಾರಿ ಹಾಗೂ ಮೊಬೈಲ್ ಟವರ್ ನಿರ್ಮಾಣ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು. ನಂತರ ಪ್ರತಿಭಟನೆಯನ್ನು ಹಿಂಪಡೆಯಲಾಯಿತು.

ಮುಖಂಡರಾದ ಎನ್. ಸಿದ್ದರಾಜು, ಎಂ.ಮಂಜುನಾಥ್, ಡಿ.ದೊರೆಸ್ವಾಮಿ, ವಿ.ಮಹೇಶ್, ರಂಗಸ್ವಾಮಿ, ಕೃಷ್ಣಯ್ಯ, ಮಲ್ಲಯ್ಯ, ನಂಜುಂಡಸ್ವಾಮಿ, ಟಿ.ಮಹದೇವಸ್ವಾಮಿ, ಬಸವರಾಜು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.