ಯಳಂದೂರು: ಮಲೇರಿಯಾ ಮತ್ತು ವಿವಿಧ ರೋಗದ ಹೊರೆ ಕಡಿಮೆ ಮಾಡುವ ನಿಟ್ಟಿನಲ್ಲಿ ವಿಶ್ವ ಸೊಳ್ಳೆದಿನ ಆಚರಿಸಲಾಗುತ್ತದೆ ಎಂದು ಉಪ ನಿರ್ದೇಶಕ ರಾಮಚಂದ್ರರಾಜೇ ಅರಸ್ ಹೇಳಿದರು.
ಪಟ್ಟಣದ ಜೆಎಸ್ಎಸ್ ಕಾಲೇಜು ಆವರಣದಲ್ಲಿ ಆರೋಗ್ಯ ಇಲಾಖೆ ಮತ್ತು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಗುರುವಾರ ಆಯೋಜಿಸಿದ್ದ ವಿಶ್ವ ಸೊಳ್ಳೆ ದಿನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಾರಕ ರೋಗಗಳಾದ ಚಿಕುನ್ ಗುನ್ಯಾ, ಝಿಕಾ ವೈರಸ್, ಹಳದಿ ಜ್ವರ, ವೆಸ್ಟ್ ನೈಲ್ ವೈರಸ್, ಜಪಾನೀಸ್ ಎನ್ಸೆಫಾಲಿಟಿಸ್ ಮೊದಲಾದ ಖಾಯಿಲೆಗಳು ಸೊಳ್ಳೆಗಳಿಂದ ವೇಗವಾಗಿ ಹರಡುತ್ತವೆ. ಚರಂಡಿ, ಪೊದೆ, ಕಲುಷಿತ ವಾತಾವರಣದಲ್ಲಿ ಸೊಳ್ಳೆ ಸಂತಾನ ಕಡಿಮೆ ಸಮಯದಲ್ಲಿ ವೃದ್ಧಿಸುತ್ತವೆ. ಹಾಗಾಗಿ, ಸೊಳ್ಳೆ ಆವಾಸಗಳ ನಿರ್ಮೂಲನೆಗೆ ನಿವಾಸಿಗಳು ಹೆಚ್ಚಿನ ಒತ್ತು ನೀಡಬೇಕು ಎಂದರು.
ಸೊಳ್ಳೆಗೂ ಒಂದು ದಿನ ಮೀಸಲಿಡಲಾಗಿದೆ. ಇವುಗಳ ಸಂಪರ್ಕದಿಂದ ಜನ ಮತ್ತು ಜಾನುವಾರು ಕಡಿತಕ್ಕೆ ಸುಲಭವಾಗಿ ತುತ್ತಾಗುತ್ತಾರೆ. ಮೈತುಂಬ ಬಟ್ಟೆ ಧರಿಸುವುದು, ಕೀಟ ನಿವಾರಕ ಬಳಕೆ, ಸೊಳ್ಳೆ ಪರದೆ ಹಾಕಿ ನಿದ್ರಿಸುವುದು, ಅನುಪಯುಕ್ತ ನೀರು ಹೊರ ಹಾಕುವ ಮೂಲಕ ಸೊಳ್ಳೆ ಉಪಟಳ ನಿರ್ಭಂದಿಸಬಹುದು ಎಂದು ಅವರು ಹೇಳಿದರು.
ಆಸ್ಪತ್ರೆ ವೈಧ್ಯಾಧಿಕಾರಿ ಡಾ.ಶ್ರೀಧರ್, ಬಿಇಒ ಕೆ.ಕಾಂತರಾಜ್, ಸಹಾಯಕ ಪುಟ್ಟು ಹಾಗೂ ಉಪನ್ಯಾಸಕರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.