ADVERTISEMENT

ಯಳಂದೂರು: ಹೆದ್ದಾರಿ ಗುಂಡಿ ಮುಚ್ಚಿದ ಪೊಲೀಸರು!

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2024, 14:37 IST
Last Updated 20 ನವೆಂಬರ್ 2024, 14:37 IST
ಯಳಂದೂರು ಪಟ್ಟಣದ ನಡುವೆ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯ ಹಳ್ಳವನ್ನು ಮುಚ್ಚಿ ರಸ್ತೆ ದುರಸ್ತಿ ಮಾಡಿದ ಪೊಲೀಸರು.
ಯಳಂದೂರು ಪಟ್ಟಣದ ನಡುವೆ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯ ಹಳ್ಳವನ್ನು ಮುಚ್ಚಿ ರಸ್ತೆ ದುರಸ್ತಿ ಮಾಡಿದ ಪೊಲೀಸರು.   

ಯಳಂದೂರು: ಪಟ್ಟಣದ ನಡುವೆ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರ್ಮಾಣವಾಗಿದ್ದ ಹಲವಾರು ಗುಂಡಿಗಳನ್ನು ಪಟ್ಟಣ ಠಾಣೆಯ ಪೊಲೀಸರು ಮುಚ್ಚಿದ್ದು, ಈ ಕಾಯಕಕ್ಕೆ ಸಾರ್ವಜನಿಕರು, ವಾಹನ ಸವಾರರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸುಮಾರು 1 ಕಿ.ಮೀ. ಹೆದ್ದಾರಿಯಲ್ಲಿ ಹಲವು ತಗ್ಗು ನಿರ್ಮಾಣವಾಗಿ, ಅಪಘಾತಗಳಿಗೆ ಕಾರಣವಾಗಿತ್ತು. ಇದರಿಂದ ವಾಹನ ಸವಾರರು ಜೀವಭಯದಲ್ಲೇ ಸಾಗಬೇಕಿತ್ತು. ಮಳೆ ಸುರಿದಾಗ ನೀರು ತುಂಬಿ ತಗ್ಗು ಕಾಣದೆ ಅಪಘಾತಕ್ಕೆ ನಡೆಯುತ್ತಿತ್ತು.ರಸ್ತೆ ದುರಸ್ತಿಗಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ದೂರು ನೀಡುತ್ತ ಬಂದಿದ್ದರೂ ಸ್ಪಂದಿಸಿರಲಿಲ್ಲ.

ಇದೇ ಮಾರ್ಗದಲ್ಲಿ ಕೊಳ್ಳೇಗಾಲ ಮತ್ತು ಚಾಮರಾಜನಗರಕ್ಕೆ ಹೆಚ್ಚಿನ ಸಂಖ್ಯೆಯ ಬಸ್ ಮತ್ತು ಲಾರಿಗಳು ಸಂಚರಿಸುತ್ತವೆ. ಸುಗಮ ಸಂಚಾರಕ್ಕೆ ರಸ್ತೆ ಗುಂಡಿ ಅಡ್ಡಿಯಾಗಿದ್ದನ್ನು ಗಮನಿಸಿದ ಪೊಲೀಸರು ತಾವೇ ಸನಿಕೆ, ಗುದ್ದಲಿ ಹಿಡಿದು ಮಣ್ಣು ತುಂಬಿ ಗುಂಡಿ ಮುಚ್ಚಿದ್ದಾರೆ ಎಂದು ಪಟ್ಟಣದ ನಿವಾಸಿ ಸುರೇಶ್ ಕುಮಾರ್ ಹೇಳಿದರು.

ADVERTISEMENT

ಮುಖ್ಯರಸ್ತೆಯಲ್ಲಿ ರಸ್ತೆ ಬಿದ್ದು ಹಲವರು ಅಪಘಾತ ಮಾಡಿಕೊಂಡಿದ್ದರು. ರಸ್ತೆ ನಿರ್ವಹಣೆ ಅಧಿಕಾರಿಗಳು  ದುರಸ್ತಿಗೆ ಮುಂದಾಗಿರಲಿಲ್ಲ. ಹೀಗಾಗಿ, ಪೊಲೀಸರೇ ತಗ್ಗು ಮುಚ್ಚಿದ್ದಾರೆ. ಪೊಲೀಸರು ರಾತ್ರಿ ವೇಳೆ ಗುಂಡಿ ಮುಚ್ಚುತ್ತಿರುವ ಪೋಟೊಗಳನ್ನು ಹಂಚಿಕೊಂಡಿರುವ ನಾಗರಿಕರು ‘ಜನ ಪ್ರತಿನಿಧಿಗಳು ಮತ್ತು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಮಾಡದ ಕೆಲಸವನ್ನು ಪೋಲಿಸರು ಮಾಡಿದ್ದಾರೆ’ ಎಂದು ಅವರು ಹೊಗಳಿದ್ದಾರೆ.

‘ಭಾರಿ ಗಾತ್ರದ ಗುಂಡಿಗಳಿಂದ ಸುಗಮ ಸಂಚಾರಕ್ಕೆ ಅಡಚಣೆಯಾಗಿತ್ತು. ಇದನ್ನು ಗಮನಿಸಿ ತಗ್ಗು ಮುಚ್ಚಿಸುವ ಕೆಲಸ ಮಾಡಿದ್ದೇವೆ. ಇದಕ್ಕೆ ವಿಶೇಷ ಅರ್ಥ ಕಲ್ಪಸಬೇಕಿಲ್ಲ’ ಎಂದು ಎಸ್ಐ ಹನುಮಂತ ಉಪ್ಪಾರ್, ಪೊಲೀಸ್ ಕಾನ್‌ಸ್ಟೆಬಲ್ ಜಡೇಸ್ವಾಮಿ, ಪೊಲೀಸ್‌ ತಂಡದವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.