ADVERTISEMENT

ಯಳಂದೂರು | ಇಸ್ರೇಲ್ ತಾಂತ್ರಿಕತೆ: ಮರಳ್ ಮೀನು ಸಾಕಣೆಯಲ್ಲಿ ಯಶಸ್ಸು ಕಂಡ ಪದವೀಧರ

ಹೊರ ರಾಜ್ಯದಲ್ಲಿ ಮಾರುಕಟ್ಟೆ ಸೃಷ್ಟಿಸಿಕೊಂಡ ಸಂಜಯ್ ಗೌಡ

ಎನ್.ಮಂಜುನಾಥಸ್ವಾಮಿ
Published 8 ನವೆಂಬರ್ 2024, 5:28 IST
Last Updated 8 ನವೆಂಬರ್ 2024, 5:28 IST
<div class="paragraphs"><p>ಯಳಂದೂರು ತಾಲ್ಲೂಕಿನ ಬನ್ನಿಸಾರಿಗೆ ಗ್ರಾಮದ ಹೊರ ವಲಯದಲ್ಲಿ ಮಾದರಿ ಘಟಕ ನಿರ್ಮಿಸಿ ಮೀನು ಸಾಕಣೆ ಮಾಡುತ್ತಿರುವ ಸಂಜಯ್ ಗೌಡ&nbsp;</p></div>

ಯಳಂದೂರು ತಾಲ್ಲೂಕಿನ ಬನ್ನಿಸಾರಿಗೆ ಗ್ರಾಮದ ಹೊರ ವಲಯದಲ್ಲಿ ಮಾದರಿ ಘಟಕ ನಿರ್ಮಿಸಿ ಮೀನು ಸಾಕಣೆ ಮಾಡುತ್ತಿರುವ ಸಂಜಯ್ ಗೌಡ 

   

ಯಳಂದೂರು: ಮತ್ಸೋದ್ಯಮ ಮಾಡಲು ಜಲಾನಯನ ಪ್ರದೇಶಗಳ ಕೊರತೆಯ ನಡುವೆ ಆಧುನಿಕ ತಂತ್ರಜ್ಞಾನದಲ್ಲಿ ಟ್ಯಾಂಕ್ ಬಳಸಿಕೊಂಡು ಸೀಮಿತ ಸ್ಥಳದಲ್ಲಿ ಮೀನು ಬೆಳೆಸುವ ಕಾಯಕಕ್ಕೆ ತಾಲ್ಲೂಕಿನ ಪದವೀಧರ ಸಂಜಯ್ ಗೌಡ ಮುಂದಾಗಿದ್ದಾರೆ. ಬಲು ಅಪರೂಪದ ಮರಳ್ ಮೀನು ಉತ್ಪಾದಿಸಿ ಯಶಸ್ಸು ಕಂಡಿದ್ದಾರೆ.

ತಾಲ್ಲೂಕಿನ ಬನ್ನಿಸಾರಿಗೆ ಗ್ರಾಮದ ಸಂಜಯ್ ಗೌಡ ಸ್ಟೆನೋಗ್ರಫಿ ಪದವೀಧರ. ಸ್ವ ಉದ್ಯೋಗದ ಕನಸು ಕಂಡು ಒಂದೂವರೆ ಎಕರೆ ಭೂಮಿಯಲ್ಲಿ ಭತ್ತ ಬೆಳೆದಿದ್ದಾರೆ. ಸಮಗ್ರ ಕೃಷಿಯ ಭಾಗವಾಗಿ ನಾಟಿಕೋಳಿ ಸಾಕಣೆ ಮಾಡುತ್ತಿದ್ದಾರೆ. 10 ಗುಂಟೆಯಲ್ಲಿ ಇಸ್ರೇಲ್ ತಾಂತ್ರಿಕತೆಯಲ್ಲಿ ಫಿಶ್ ಟ್ಯಾಂಕ್ ನಿರ್ಮಿಸಿ ಮತ್ಸ್ಯೋದ್ಯಮ ಅಭಿವೃದ್ಧಿಪಡಿಸಿದ್ದಾರೆ. ಇದರಿಂದ ಪ್ರತಿ ಎರಡು ತಿಂಗಳಿಗೆ ಮೀನು ಮಾರಾಟ ಮಾಡುವ ವ್ಯವಸ್ಥೆ ಮಾಡಿಕೊಂಡಿದ್ದು ಮೀನಿಗೆ ಬಹುಬೇಡಿಕೆ ಸೃಷ್ಟಿಯಾಗಿದೆ.

ADVERTISEMENT

‘ನನಗೆ ಸರ್ಕಾರಿ ಕೆಲಸ ಸೇರುವ ಒಲವು ಇರಲಿಲ್ಲ. ಆಧುನಿಕ ಕೃಷಿ ಪದ್ಧತಿಯಲ್ಲಿ ಸಾಧನೆ ಮಾಡುವ ಉದ್ದೇಶದಿಂದ ಮೀನುಗಾರಿಕೆಯಲ್ಲಿ ಆಸಕ್ತಿ ಮೊಳೆಯಿತು. ಸರ್ಕಾರದ ಧನ ಸಹಾಯವೂ ಆಸೆಗೆ ನೀರೆರೆಯಿತು. ಅಮ್ಮನ ಹೆಸರಿನಲ್ಲಿದ್ದ ಭೂಮಿಗೆ ಧನಸಹಾಯ ಪಡೆದು ಹೆಚ್ಚುವರಿಯಾಗಿ ಬಂಡವಾಳ ಹಾಕಿ ಮೀನು ಬೆಳೆದು ಮಾರಾಟ ಮಾಡುತ್ತಿದ್ದೇನೆ’ ಎನ್ನುತ್ತಾರೆ ಸಂಜಯ್.

ಇಸ್ರೇಲ್ ತಾಂತ್ರಿಕತೆ: ಸಾಂಪ್ರದಾಯಿಕ ವ್ಯವಸ್ಥೆಯಲ್ಲಿ ಮೀನು ಮರಿಗಳನ್ನು ಹೊಂಡದಲ್ಲಿ ಬಿಟ್ಟು ಸಾಕಲಾಗುತ್ತದೆ. ಕೆರೆಕಟ್ಟೆಗಳಲ್ಲೂ ಸಾಕಣೆ ಮಾಡಲಾಗುತ್ತದೆ. ಆಣೆಕಟ್ಟೆಗಳಲ್ಲಿ ಬಲೆಬಿಟ್ಟು ಬೆಳೆಸುತ್ತಾರೆ. ಆದರೆ, ಇಸ್ರೇಲ್ ತಂತ್ರಜ್ಞಾನದಲ್ಲಿ ಮೀನಿನ ಟ್ಯಾಂಕ್ ಅನ್ನು ಭೂಮಿಯ ಮಟ್ಟದಿಂದ 4 ಅಡಿ ಎತ್ತರ ಇರಿಸಿ, 1 ರಿಂದ 10  ಮೀಟರ್ ಉದ್ದದಲ್ಲಿ ದಿನದ 24 ತಾಸು ನೀರು ಪೂರೈಕೆಯಾಗುವ ವ್ಯವಸ್ಥೆಯಡಿ ನಿರ್ಮಿಸಲಾಗುತ್ತದೆ. ಇದರಿಂದ ಮೀನಿನ ಬೆಳವಣಿಗೆಗೆ ಅಗತ್ಯ ಆಹಾರ, ಆಮ್ಲಜನಕ ಸಿಗುತ್ತದೆ. ನೀರಿನ ಸ್ವಚ್ಛತೆಯೂ ಸಾಧ್ಯವಾಗಿ ಮೀನಿನ ಆರೋಗ್ಯವನ್ನು ಗಮನಿಸಬಹುದು ಎನ್ನುತ್ತಾರೆ ಸಂಜಯ್ ಗೌಡ.

ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯಲ್ಲಿ ಇಲಾಖೆಯಿಂದ ಮೀನು ಸಾಕಣೆದಾರರಿಗೆ ಧನ ಸಹಾಯ ಸಿಗುತ್ತದೆ. ಮಹಿಳೆಯರಿಗೆ ಶೇ 60 ಮತ್ತು ಇತರರಿಗೆ ಶೇ 40 ಸಹಾಯಧನ ಸಿಗುತ್ತದೆ. ಈ ಬಾರಿಯೂ 30ಕ್ಕಿಂತ ಹೆಚ್ಚಿನ ಕೃಷಿಕರು ಮೀನು ಸಾಕಣೆಗೆ ಹೆಸರು ನೋಂದಾಯಿಸಿಕೊಂಡಿದ್ದಾರೆ ಎಂದು ಮೀನುಗಾರಿಕಾ ಇಲಾಖೆಯ ಅಧಿಕಾರಿಗಳು ಹೇಳುತ್ತಾರೆ.

10 ಗುಂಟೆಯಲ್ಲಿ ಮೀನು ಘಟಕ ತಯಾರಿಕೆಗೆ ₹ 18 ಲಕ್ಷ ವೆಚ್ಚವಾಗಿದೆ. ಸ್ವಂತ ಖರ್ಚಿನಲ್ಲಿ ₹14 ಲಕ್ಷ ವ್ಯಯಿಸಿ ನೂತನ ತಂತ್ರಜ್ಞಾನದ ವಿಧಾನ ಅಳವಡಿಸಿಕೊಂಡಿದ್ದೇನೆ. ಇಲಾಖೆ ₹ 4.20 ಲಕ್ಷ ಸಹಾಯಧನ ನೀಡಿದೆ. ಘಟಕದಲ್ಲಿ 5 ಸಾವಿರ ಮೀನು ಬಿಟ್ಟಿದ್ದು, ಪ್ರತಿ 2 ತಿಂಗಳಿಗೆ ಮೀನು ಮಾರಾಟಕ್ಕೆ ಬರುವಂತೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. 8 ತಿಂಗಳ ಅವಧಿಯಲ್ಲಿ ಅರ್ಧ ಕೆಜಿ ಮೀನು 400 ಗ್ರಾಂ ಆಹಾರ ಸೇವಿಸುತ್ತದೆ. ₹ 150 ಖರ್ಚು ತಗುಲುತ್ತದೆ. ಉತ್ತಮವಾಗಿ ನಿರ್ವಹಿಸಿದರೆ ಖರ್ಚು ವೆಚ್ಚ ಕಳೆದು ₹ 3 ರಿಂದ ₹ 4 ಲಕ್ಷ ಆದಾಯ ನಿರೀಕ್ಷಿಸಬಹದು ಎನ್ನುತ್ತಾರೆ ಮೀನು ಸಾಕಣೆದಾರರು.

ಹೊರ ರಾಜ್ಯಕ್ಕೆ ಜೀವಂತ ಮೀನು ರಫ್ತು

ಜಮೀನಿನಲ್ಲಿ 7 ಮೀನು ಸಾಕಣೆ ಘಟಕ ಇದ್ದು 4 ಇಂಚು ಗಾತ್ರದ ಮೀನಿನ ಮರಿಗಳನ್ನು ಗೋದಾವರಿ ನದಿ ಮೂಲದಿಂದ ತರಿಸಿಕೊಂಡು ಏಳೆಂಟು ತಿಂಗಳಲ್ಲಿ ಕೊಯ್ಲಿಗೆ ಬರುವಂತೆ ಸಾಕಣೆ ಮಾಡುತ್ತಿದ್ದೇವೆ. 500 ರಿಂದ 750 ಗ್ರಾಂ ತೂಕದ ಮೀನಿಗೆ ₹ 250 ಬೆಲೆ ಇದ್ದರೆ 750 ಗ್ರಾಂ ತೂಗುವ ಮೀನಿಗೆ ₹ 300 ದರ ಇದೆ. ಮಧುರೈ ಹೈದರಾಬಾದ್ ವರ್ತಕರು ಗುಣಮಟ್ಟಕ್ಕೆ ಅನುಗುಣವಾಗಿ ಖರೀದಿ ಮಾಡುತ್ತಾರೆ. 300 ಕೆಜಿ ತೂಗುವ ಟ್ಯಾಂಕ್‌ಗಳಲ್ಲಿ ಜೀವಂತ ಮೀನುಗಳನ್ನು ತುಂಬಿಸಿ ಮಾರುಕಟ್ಟೆಗೆ ಸಾಗಣೆ ಮಾಡುತ್ತಾರೆ. ಮಾರುಕಟ್ಟೆಯಲ್ಲಿ ಕೆ.ಜಿಗೆ ₹ 400ಕ್ಕಿಂತಲ್ಲೂ ಹೆಚ್ಚಿನ ಧಾರಣೆಗೆ ಮರಳ್ ಮೀನು ಮಾರಾಟ ಮಾಡಲಾಗುತ್ತದೆ ಎಂದು ಹೈದರಾಬಾದ್‌ನ ಮೀನು ವರ್ತಕ ಶ್ರೀಮಂತರೆಡ್ಡಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.