ADVERTISEMENT

ಚಾಮರಾಜನಗರ | ‘ನೀರು, ಮೇವಿಗೆ ಕೊರತೆಯಾಗದಂತೆ ಕ್ರಮ ವಹಿಸಿ’

ಜಿಲ್ಲೆಯಲ್ಲಿ ತೀವ್ರ ಬರ ಪರಿಸ್ಥಿತಿ; ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಜಿ.ಪಂ ಸಿಇಒ

​ಪ್ರಜಾವಾಣಿ ವಾರ್ತೆ
Published 2 ಮೇ 2024, 15:32 IST
Last Updated 2 ಮೇ 2024, 15:32 IST
ಆನಂದ್‌ ಪ್ರಕಾಶ್‌ ಮೀನಾ
ಆನಂದ್‌ ಪ್ರಕಾಶ್‌ ಮೀನಾ   

ಚಾಮರಾಜನಗರ: ಜಿಲ್ಲೆಯ ಯಾವುದೇ ಭಾಗದಲ್ಲಿ ಜನರಿಗೆ ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ಮೇವಿನ ಕೊರತೆಯಾಗದಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆನಂದ್ ಪ್ರಕಾಶ್ ಮೀನಾ ಅವರು ಅಧಿಕಾರಿಗಳಿಗೆ ಗುರುವಾರ ತಾಕೀತು ಮಾಡಿದರು.

ಜಿಲ್ಲೆಯಲ್ಲಿ ಎದುರಾಗಿರುವ ತೀವ್ರ ಬರ ಪರಿಸ್ಥಿತಿಗೆ ಸಂಬಂಧಿಸಿದಂತೆ  ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ನಡೆದ ಗೂಗಲ್ ಮೀಟ್ ಸಭೆಯಲ್ಲಿ ಮಾತನಾಡಿದ ಅವರು, ‘ಜನ-ಜಾನುವಾರುಗಳಿಗೆ ಕುಡಿಯುವ ನೀರಿಗೆ ಯಾವುದೇ ಕಾರಣಕ್ಕೂ ತೊಂದರೆಯಾಗಬಾರದು. ನೀರಿನ ಸಮಸ್ಯೆ ಬಗ್ಗೆ ದೂರುಗಳು ಕಂಡುಬಂದರೆ ಆದ್ಯತೆ ಮೇರೆಗೆ ಪರಿಹರಿಸಬೇಕು. ಪೈಪ್‍ಲೈನ್‍ನಿಂದ ನೀರು ಅನಾವಶ್ಯಕವಾಗಿ ಪೋಲಾಗದಂತೆ ಎಚ್ಚರ ವಹಿಸಬೇಕು. ಎಲ್ಲ ಅಧಿಕಾರಿಗಳು ಕೇಂದ್ರಸ್ಥಾನದಲ್ಲಿದ್ದು, ಸಾರ್ವಜನಿಕರಿಗೆ ಕುಡಿಯುವ ನೀರು ಪೂರೈಸಲು ಮುಂದಾಗಬೇಕು. ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ವಿಳಂಬ ಧೋರಣೆ ಸಲ್ಲದು. ಇದನ್ನು ಗಂಭೀರವಾಗಿ ಪರಿಗಣಿಸಲಾಗುವುದು’ ಎಂದು ಎಚ್ಚರಿಸಿದರು. 

‘ಜಾನುವಾರುಗಳಿಗೆ ನಿಯಮಾನುಸಾರ ಮೇವು ಸಮರ್ಪಕವಾಗಿ ಲಭ್ಯವಾಗಬೇಕು. ಸಮಸ್ಯೆ ಎದುರಾಗುವ ಮೊದಲೇ ಮೇವು ದಾಸ್ತಾನು ಇರುವ ಬಗ್ಗೆ ಅಧಿಕಾರಿಗಳು ಖಚಿತಪಡಿಸಿಕೊಳ್ಳಬೇಕು. ರೈತರಿಂದ ಈ ಬಗ್ಗೆ ಯಾವುದೇ ದೂರುಗಳು ಬರದಂತೆ ನಿಗಾ ವಹಿಸಬೇಕು. ಜನ-ಜಾನುವಾರುಗಳಿಗೆ ಕುಡಿಯುವ ನೀರು ಹಾಗೂ ಮೇವು ಒದಗಿಸಲು ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಪೂರ್ವಸಿದ್ದತಾ ಕ್ರಮಗಳನ್ನು ಅನುಸರಿಸಬೇಕು. ಈ ಕುರಿತು ಆಯಾ ಗ್ರಾಮ ಆಡಳಿತ ಅಧಿಕಾರಿಗಳು ಹಾಗೂ ಕಂದಾಯ ನಿರೀಕ್ಷಕರು ಮಾಹಿತಿ ಕಲೆಹಾಕಬೇಕು’ ಎಂದು ತಿಳಿಸಿದರು.

ADVERTISEMENT

‘ಪ್ರಸ್ತುತ ಬರ ಪರಿಸ್ಥಿತಿಯಲ್ಲದೆ, ಬಿಸಿಲಿನ ತಾಪ ಹೆಚ್ಚಾಗಿ ಉಷ್ಣಗಾಳಿ ಅಧಿಕವಾಗಿರುವುದರಿಂದ ಜನರು ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸಬೇಕು. ಮಧ್ಯಾಹ್ನದ ವೇಳೆ ಬಿಸಿಲು ಹೆಚ್ಚಾಗಿದ್ದು, ಬಿಸಿಲಾಘಾತ ಸಂಭವಿಸುವ ಸಾಧ್ಯತೆ ಇರುವುದರಿಂದ ಆದಷ್ಟೂ ನೆರಳಿನ ವ್ಯವಸ್ಥೆಯಲ್ಲಿ ಕೆಲಸ ಮಾಡುವಂತಿರಬೇಕು. ಜನರು ಮಧ್ಯಾಹ್ನದ ಸಮಯದಲ್ಲಿ ಹೊರಹೋಗುವುದನ್ನು ಕೆಲ ಸಮಯದವರೆಗೆ ಮುಂದೂಡಬೇಕು. ಬಿಸಿಲಾಘಾತ ತಡೆಯಲು ಮುಂಜಾಗ್ರತೆಯಾಗಿ ಜನಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅರಿವು ಮೂಡಿಸಬೇಕು’ ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ ಮಾತನಾಡಿ, ‘ಜಿಲ್ಲೆಯಲ್ಲಿ ಕುಡಿಯುವ ನೀರು ಸೇರಿದಂತೆ ಜಾನುವಾರುಗಳಿಗೆ ಮೇವು ಸಮಸ್ಯೆಯಾಗದಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಈಗಾಗಲೇ ಸೂಕ್ತ ನಿರ್ದೇಶನ ನೀಡಲಾಗಿದೆ. ಕುಡಿಯುವ ನೀರಿನ ಸಮಸ್ಯೆ ಹಾಗೂ ಮೇವು ಅಲಭ್ಯತೆ ಕುರಿತು ಅಧಿಕಾರಿಗಳು ಯಾವುದೇ ಸಬೂಬು ಹೇಳುವಂತಿಲ್ಲ. ಅನುದಾನದ ಅವಶ್ಯವಿದ್ದರೆ ತಕ್ಷಣವೇ ಪ್ರಸ್ತಾವ ಸಲ್ಲಿಸಬೇಕು. ಈ ಸಂಬಂಧ ಆಯಾ ತಹಶೀಲ್ದಾರರು ಹಾಗೂ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಸಮನ್ವಯ ಸಾಧಿಸಬೇಕು’ ಎಂದು ತಿಳಿಸಿದರು.

ಗೂಗಲ್ ಮೀಟ್ ಸಭೆಯಲ್ಲಿ ವಿವಿಧ ತಾಲೂಕು, ಜಿಲ್ಲಾಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.