ಚಿಕ್ಕಬಳ್ಳಾಪುರ: ತಾಲ್ಲೂಕಿನಲ್ಲಿ ಶನಿವಾರ ಯುಗಾದಿ ಹಬ್ಬವನ್ನು ಸಂಭ್ರಮ- ಸಡಗರದಿಂದ ಆಚರಿಸಲಾಯಿತು. ಬೆಳಿಗ್ಗೆಯಿಂದಲೇ ದೇವಾಲಯಗಳಿಗೆ ತೆರಳಿದ ಜನರು ಶ್ರದ್ಧಾಭಕ್ತಿಯಿಂದ ಪೂಜೆ ಸಲ್ಲಿಸಿದರು. ಅಭ್ಯಂಜನದ ಬಳಿಕ ದೇವರಿಗೆ, ಹಿರಿಯರಿಗೆ ನಮಸ್ಕರಿಸಿ, ಬೇವು -ಬೆಲ್ಲ ತಿಂದು, ಶುಭಾಶಯ ವಿನಿಮಯ ಮಾಡಿಕೊಂಡರು.
ಮಧ್ಯಾಹ್ನ ಹೋಳಿಗೆ, ಪಾಯಸ ಸವಿದು ಸಂಭ್ರಮಿಸಿದರು. ಸಂಜೆ ದೇವಾಲಯಗಳಿಗೆ ಹೋಗಿ ಪಂಚಾಂಗ ಶ್ರವಣ ಮಾಡಿದ ಭಕ್ತರು, ವಿಶೇಷ ಪೂಜೆ ಸಲ್ಲಿಸಿದರು.
ಯುಗಾದಿ ಹಬ್ಬದ ಅಂಗವಾಗಿ ರೈತರು ತಮ್ಮ ದನಕರುಗಳನ್ನು ತೊಳೆದು, ವಿಶೇಷ ಪೂಜೆ ಸಲ್ಲಿಸಿದರು. ವ್ಯವಸಾಯ ಉಪಕರಣಗಳಾದ ನೇಗಿಲು, ನೊಗ, ಕುಂಟೆ, ಎತ್ತಿನಗಾಡಿ ಇತ್ಯಾದಿಗಳನ್ನು ಒಪ್ಪವಾಗಿ ಜೋಡಿಸಿ ಪೂಜೆ ಸಲ್ಲಿಸಿದ್ದು ವಿಶೇಷ.
‘ರೈತರು ಮನೆಯ ಅಂಗಳದಲ್ಲಿ ನೇಗಿಲು ಇಟ್ಟು, ದವಸ ಧಾನ್ಯಗಳನ್ನು ಮೊಳಕೆ ಬಿಟ್ಟು 9 ದಿನಗಳ ಕಾಲ ಪೂಜಿಸಿ, ನಂತರ ನೀರಿಗೆ ಬಿಡುವ ಪರಂಪರೆ ಬಹಳ ಹಿಂದಿನಿಂದ ಬಂದಿದೆ. ಇದರಿಂದ ಕಾಲ ಕಾಲಕ್ಕೆ ತಪ್ಪದೆ ಮಳೆ ಆಗಲಿದೆ. ರೈತರು ಬೆಳೆದ ಬೆಳೆ ಉತ್ತಮ ಫಸಲು ಬರಲಿದೆ ಎಂಬ ನಂಬಿಕೆ ಇದೆ’ ಎಂದು ತಾಲ್ಲೂಕಿನ ಅರಸನಹಳ್ಳಿ ಜಯರಾಂ ತಿಳಿಸಿದರು.
ಸಂಭ್ರಮದ ವರ್ಷ ತೊಡಕು
ಯುಗಾದಿ ಹಬ್ಬದ ಮಾರನೆಯ ದಿನವಾದ ಭಾನುವಾರ ವರ್ಷ ತೊಡಕು ಎಂದು ಆಚರಿಸಲಾಯಿತು. ವರ್ಷ ತೊಡಕು ಎನ್ನುವುದು ಹೊಸ ಕಾರ್ಯಗಳಿಗೆ ತೊಡಗಿಸಿಕೊಳ್ಳುವ ದಿನವಾದ್ದರಿಂದ ಜನರು ವರ್ಷಪೂರ್ತಿಯಾವುದೇ ತೊಡಕುಗಳು ಬಾರದಿರಲಿ ಎಂದು ದೇವರಲ್ಲಿ ಪ್ರಾರ್ಥಿಸಿಕೊಂಡರು.
ಶನಿವಾರ ಹಬ್ಬ ಊಟವಾಗಿ ಕೇವಲ ಒಬ್ಬಟ್ಟು ಸವಿದವರು ಭಾನುವಾರ ಕುರಿ, ಕೋಳಿಯ ಮಾಂಸದ ಅಡಿಗೆ ಮಾಡಿ ವರ್ಷದ ತೊಡಕು ಆಚರಿಸಿದರು. ಊಟಕ್ಕೆ ಸಂಬಂಧಿಗಳನ್ನು ಹಾಗೂ ಸ್ನೇಹಿತರನ್ನು ಕರೆದು ಆತಿಥ್ಯ ನೀಡಿದರು.
ನಗರದಾದ್ಯಂತ ಬಹುತೇಕ ಎಲ್ಲ ರಸ್ತೆಗಳು ಜನ ಮತ್ತು ವಾಹನಗಲಿಲ್ಲದೆ ಬಣಗುಡುತ್ತಿದ್ದವು. ಉಪಾಹಾರ ಮಂದಿರ, ಅಂಗಡಿ ಮುಂಗಟ್ಟುಗಳು ಮುಚ್ಚಲ್ಪಟ್ಟಿದ್ದವು. ಬೆಳಿಗ್ಗೆಯೇ ಮಾಂಸದ ಅಂಗಡಿಗಳಲ್ಲಿ ಜನರು, ಮೀನು, ಕುರಿ, ಮೇಕೆ ಮತ್ತು ಕೋಳಿ ಮಾಂಸ ಖರೀದಿಸಲು ಮುಗಿಬಿದ್ದದ್ದು ಕಂಡುಬಂತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.