ಶಿಡ್ಲಘಟ್ಟ: ತಮಟೆ ವಾದನ ಬಯಲು ಸೀಮೆಯ ಜನರಿಗೆ ಚಿರಪರಿಚಿತ. ಊರ ಜಾತ್ರೆ, ಮೆರವಣಿಗೆ ಅಥವಾ ಕರಗದಂತಹ ಸಾಂಸ್ಕೃತಿಕ ಉತ್ಸವಗಳಲ್ಲಿ ತಮಟೆ ಸದ್ದು ಕೇಳಿಸಲೇಬೇಕು. ಇಂಥ ನೆಲ ಸಂಸ್ಕೃತಿಯ ಕಲೆಗೆ ಹೊಸ ಭಾಷ್ಯ ಬರೆದು ‘ನಾಡೋಜ’ ಗೌರವ ಮುಡಿಗೇರಿಸಿಕೊಂಡ ಕೀರ್ತಿ ಪಿಂಡಿಪಾಪನಹಳ್ಳಿ ಮುನಿವೆಂಕಟಪ್ಪ ಅವರದು. ಅವರ ಸಾಧನೆಯಿಂದ ಪ್ರೇರಣೆಗೊಂಡ ಬಾಲಕನೊಬ್ಬ ಅದೇ ಹಾದಿಯಲ್ಲಿ ಮುನ್ನಡೆಯುತ್ತಿದ್ದಾನೆ.
ಯುವಕರು, ಮಕ್ಕಳು ಈ ಗಂಡು ಕಲೆ ಕಲಿಯುವುದು ವಿರಳ. ಆದರೆ ತಾಲ್ಲೂಕಿನ ಹರಳಹಳ್ಳಿಯ ಪುಟ್ಟ ಪೋರ ನವನೇಶ ಮುನಿವೆಂಕಟಪ್ಪನವರ ಹಾದಿಯಲ್ಲಿ ಸಾಗುತ್ತಿದ್ದಾನೆ. ಹದಿಮೂರು ವರ್ಷದ ಪುಟ್ಟ ಪ್ರಾಯದಲ್ಲಿ ಭರವಸೆ ಮೂಡಿಸಿದ್ದಾನೆ.
ತಾಲ್ಲೂಕಿನ ವರದನಾಯಕನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏಳನೇ ತರಗತಿ ಪೂರೈಸಿರುವ ನವನೇಶ ತಮಟೆ ವಾದನದ ಗತ್ತು, ಹಿಡಿತ, ನಾದದ ಮಿಡಿತವನ್ನು ಮೈಗೂಡಿಸಿಕೊಂಡಿದ್ದಾನೆ. ಬೆಂಗಳೂರು, ಗುಬ್ಬಿ ಮುಂತಾದೆಡೆ ಕಾರ್ಯಕ್ರಮಗಳಲ್ಲಿ ಪ್ರದರ್ಶನ ನೀಡಿದ್ದಾನೆ. ಕರಗ, ಜಾತ್ರೆಗಳಲ್ಲಿ ತಮಟೆ ವಾದನದ ಮೂಲಕ ಜನಮೆಚ್ಚುಗೆ ಪಡೆದಿದ್ದಾನೆ. ತಮಟೆ ಬಾರಿಸುತ್ತಲೇ ಬಗ್ಗಿ ಕಣ್ಣಿನಿಂದ ನೋಟು ಎತ್ತುವ ಕಲೆಯನ್ನು ಸಿದ್ಧಿಸಿಕೊಂಡಿದ್ದಾನೆ. ಈ ಪುಟ್ಟ ಬಾಲಕನ ಕಲೆಯನ್ನು ಕಂಡು ಜನರು ಬಕ್ಷೀಸು ಕೊಟ್ಟು ಅಭಿನಂದಿಸದ್ದಾರೆ.
ನವನೇಶ್‌ಗೆ ತಂದೆ ಶಂಕರಪ್ಪ ಹಾಗೂ ಮಾವ ಮುನಿಯಪ್ಪ ಈ ಕಲೆಯ ಗುರುಗಳು. ಅದಕ್ಕಾಗಿ ತನ್ನ ಕೈಮೇಲೆ ಎಸ್.ಎಂ ಎಂದು ಹಚ್ಚೆ ಹಾಕಿಸಿಕೊಂಡಿದ್ದಾನೆ.
‘ನನಗೆ ತಮಟೆ ವಾದನ ಕಲಿಯಲು ಅಪ್ಪ, ಮಾವನ ಜೊತೆಗೆ ಶಾಲೆಯ ಶಿಕ್ಷಕರೂ ಕಾರಣ. ಅವರ ಪ್ರೋತ್ಸಾಹ ಕಲಿಕೆಗೆ ಉತ್ಸಾಹ ತಂದಿತು. ಕಲಿಯುವಾಗ ಒಂದು ರೀತಿಯ ಖುಷಿ ಸಿಗುತ್ತಿತ್ತು. ಕಲೆ ಮುಂದುವರಿಸಿದೆ. ಕೆಟ್ಟ ಚಟಕ್ಕೆ ಬೀಳಬೇಡ ಎಂದು ಶಿಕ್ಷಕರು ಹೇಳಿದ ಬುದ್ಧಿಮಾತಿನಂತೆ ನಡೆದುಕೊಳ್ಳುತ್ತಿದ್ದೇನೆ’ ಎನ್ನುತ್ತಾನೆ.
‘ನವನೇಶನಲ್ಲಿ ಅದ್ಭುತ ಪ್ರತಿಭೆಯಿದೆ. ಗಣರಾಜ್ಯೋತ್ಸವದ ಸಂದರ್ಭದಲ್ಲಿ ಶಾಲೆಯಲ್ಲಿ ಹಲಗೆ ನೃತ್ಯವನ್ನು ಆಯೋಜಿಸಿದ್ದೆವು. ಇವನ ತಮಟೆ ನಾದಕ್ಕೆ ಮಕ್ಕಳೆಲ್ಲ ಕುಣಿದು ಕುಪ್ಪಳಿಸಿ, ಸಂಭ್ರಮಿಸಿದ್ದರು. ಇವನಿಗೆ ಈ ಕಲೆಯಲ್ಲಿ ಉಜ್ವಲ ಭವಿಷ್ಯವಿದೆ. ಹಿರಿಯ ಕಲಾವಿದ ಮುನಿವೆಂಕಟಪ್ಪ ಅವರಿಂದ ತರಬೇತಿ ಕೊಡಿಯುವ ಪ್ರಯತ್ನ ನಡೆಯುತ್ತಿದೆ. ಈ ಗಂಡು ಕಲೆಯನ್ನು ಕರಗತ ಮಡಿಕೊಂಡು ದೇಶ ವಿದೇಶಗಳಲ್ಲಿ ಕೀರ್ತಿ ಗಳಿಸಬೇಕು ಎಂಬುದು ನಮ್ಮೆಲ್ಲರ ಆಸೆ. ಇತರ ಮಕ್ಕಳಿಗೂ ಪ್ರೇರಣೆ ಆಗಬೇಕು’ ಎಂದು ಶಿಕ್ಷಕ ಎಂ.ಎ.ರಾಮಕೃಷ್ಣಪ್ಪ ಹೇಳುವರು.
ಡಿ.ಜಿ. ಮಲ್ಲಿಕಾರ್ಜುನ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.