ADVERTISEMENT

ಗಾಂಧೀಜಿ ಬದ್ಧತೆ ಪಾಲನೆ ಅಗತ್ಯ

ಗಾಂಧಿ ಭವನ, ಸರ್ಕಾರಿ ಬಾಲಕಿಯರ ಬಾಲ ಮಂದಿರ, ಟೆನ್ನಿಸ್ ಕೋರ್ಟ್ ಆವರಣ ಕಾಮಗಾರಿಗಳಿಗೆ ಶಂಕುಸ್ಥಾಪನೆ

​ಪ್ರಜಾವಾಣಿ ವಾರ್ತೆ
Published 5 ಜೂನ್ 2019, 15:19 IST
Last Updated 5 ಜೂನ್ 2019, 15:19 IST
ವಿವಿಧ ಕಾಮಗಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಚ್.ಶಿವಶಂಕರರೆಡ್ಡಿ ಶಂಕುಸ್ಥಾಪನೆ ನೆರವೇರಿಸಿದರು.
ವಿವಿಧ ಕಾಮಗಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಚ್.ಶಿವಶಂಕರರೆಡ್ಡಿ ಶಂಕುಸ್ಥಾಪನೆ ನೆರವೇರಿಸಿದರು.   

ಚಿಕ್ಕಬಳ್ಳಾಪುರ: ‘ಅಹಿಂಸಾ ಮಾರ್ಗದಲ್ಲಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮಾ ಗಾಂಧೀಜಿ ಅವರ ತ್ಯಾಗ ಸ್ಮರಿಸುವ ಅವರ ವಿಚಾರಧಾರೆ, ಆದರ್ಶ, ಬದ್ಧತೆ ಮತ್ತು ಸರಳತೆಯನ್ನು ಪ್ರತಿಯೊಬ್ಬರು ಮೈಗೂಡಿಸಿಕೊಳ್ಳಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಚ್.ಶಿವಶಂಕರರೆಡ್ಡಿ ಹೇಳಿದರು.


ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ವಾರ್ತಾ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಹಯೋಗದಲ್ಲಿ ನಗರದಲ್ಲಿ ಬುಧವಾರ ಆಯೋಜಿಸಿದ್ದ ಗಾಂಧಿ ಭವನ, ಸರ್ಕಾರಿ ಬಾಲಕಿಯರ ಬಾಲ ಮಂದಿರ, ಟೆನ್ನಿಸ್ ಕೋರ್ಟ್ ಆವರಣ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೇರವೇರಿಸಿ ಅವರು ಮಾತನಾಡಿದರು.


‘ಇಂದಿನ ಯುವ ಪೀಳಿಗೆಯನ್ನು ಗಮನಿಸುತ್ತಿದ್ದರೆ, ಇತಿಹಾಸದ ಕೊಂಡಿ ಕಳಚಿ ಹೋಗುತ್ತಿರುವ ಆಂತಕ ಕಾಡುತ್ತಿದೆ. ಆದ್ದರಿಂದ ಯುವಜನರಲ್ಲಿ ದೇಶಕ್ಕಾಗಿ ತ್ಯಾಗ ಮಾಡಿರುವ ಮಹನೀಯರ ಸ್ಮರಿಸುವ ತಿಳುವಳಿಕೆ ನೀಡುವ ಕೆಲಸ ನಾವೆಲ್ಲರೂ ಮಾಡಬೇಕಿದೆ. ಮಹಾನ್ ನಾಯಕರ ಹಾದಿಯಲ್ಲಿ ಇಂದಿನ ಯುವಪೀಳಿಗೆ ನಡೆದಾಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯ’ ಎಂದು ತಿಳಿಸಿದರು.

ADVERTISEMENT


ಶಾಸಕ ಡಾ.ಕೆ.ಸುಧಾಕರ್ ಮಾತನಾಡಿ, ‘ಒಂದೇ ಸೂರಿನಡಿ ಗಾಂಧೀಜಿಯವರ ಚರಿತ್ರೆ, ತ್ಯಾಗ, ಆದರ್ಶಗಳ ಬಗ್ಗೆ ಪ್ರತಿಯೊಬ್ಬರಿಗೆ ತಲುಪಿಸುವ ಉದ್ದೇಶದಿಂದ ಈ ಗಾಂಧಿ ಭವನ ನಿರ್ಮಾಣ ಮಾಡಲಾಗುತ್ತಿದೆ. ವಿಶೇಷವಾಗಿ ಯುವಕರು ಇಲ್ಲಿ ಬಂದು ಅಧ್ಯಯನ ಮಾಡಿ, ಇತಿಹಾಸ ತಿಳಿದುಕೊಂಡಾಗ ಮಾತ್ರ ಉತ್ತಮ ರೀತಿಯಲ್ಲಿ ಸಮಾಜ ನಿರ್ಮಾಣ ಮಾಡಬಹುದು’ ಎಂದು ಹೇಳಿದರು.


ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಚ್.ವಿ.ಮಂಜುನಾಥ್ ಮಾತನಾಡಿ, ‘ಗಾಂಧೀಜಿ ಅವರು ಒಬ್ಬ ಧಾರ್ಮಿಕ ಮುಖಂಡರಲ್ಲ, ಅಧಿಕಾರದಾಹಿಯಲ್ಲ, ಶ್ರೀಮಂತನಲ್ಲ, ಧರ್ಮಗುರುವಲ್ಲ ಇದೆಲ್ಲವನ್ನೂ ಮೀರಿದಂತಹ ವಿಶ್ವಮಾನವರು. ಇದಕ್ಕೆ ಸಾಕ್ಷಿ ಎನ್ನುವಂತೆ ಅವರ ಪಾರ್ಥಿವ ಶರೀರದ ಅಂತಿಮ ಯಾತ್ರೆಯಲ್ಲಿ ಇಡೀ ಪ್ರಪಂಚದ ದೇಶ ವಿದೇಶಗಳ ರಾಜ, ಮಹಾರಾಜರು, ಚಕ್ರವರ್ತಿಗಳು, ರಾಷ್ಟ್ರಾಧ್ಯಕ್ಷರು, ಪ್ರಧಾನ ಮಂತ್ರಿಗಳು ಭಾಗವಹಿಸಿದ್ದರು. ಗಾಂಧೀಜಿ ಅವರು ಭಾರತದಲ್ಲಿ ಹುಟ್ಟಿರುವುದು ನಮ್ಮ ಪುಣ್ಯ’ ಎಂದು ಅಭಿಪ್ರಾಯಪಟ್ಟರು.


ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗುರುದತ್ ಹೆಗಡೆ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಿ.ಎಂ.ರಾಮಸ್ವಾಮಿ, ಸದಸ್ಯ ತಿರುಮಲಪ್ಪ, ಹೆಚ್ಚುವರಿ ಜಿಲ್ಲಾಧಿಕಾರಿ ಆರತಿ ಆನಂದ್, ಉಪವಿಭಾಗಾಧಿಕಾರಿ ಶಿವಸ್ವಾಮಿ, ನಿರ್ಮಿತಿ ಕೇಂದ್ರದ ವ್ಯವಸ್ಥಾಪಕ ಕೃಷ್ಣೆಗೌಡ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.