ADVERTISEMENT

ಪೆಟ್ರೋಲ್‌ ಬಂಕ್‌ಗೆ ಅರ್ಜಿ: 24 ಕೊನೆ ದಿನ

ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳಿಂದ ಜಿಲ್ಲೆಯಲ್ಲಿ 126 ಹೊಸ ಪೆಟ್ರೋಲ್‌ ಬಂಕ್‌ಗಳನ್ನು ತೆರೆಯಲು ನಿರ್ಧಾರ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2018, 10:07 IST
Last Updated 8 ಡಿಸೆಂಬರ್ 2018, 10:07 IST
.
.   

ಚಿಕ್ಕಬಳ್ಳಾಪುರ: ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ಜಿಲ್ಲೆಯಲ್ಲಿ 126 ಹೊಸ ಪೆಟ್ರೋಲ್‌ ಬಂಕ್‌ಗಳನ್ನು ತೆರೆಯಲು ಮುಂದಾಗಿದ್ದು, ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿವೆ.

ನಗರದಲ್ಲಿ ಶನಿವಾರ ಈ ಕುರಿತು ಸಾರ್ವಜನಿಕ ವಲಯದ ತೈಲ ಮಾರಾಟ ಕಂಪೆನಿಗಳಾದ ಇಂಡಿಯನ್‌ ಆಯಿಲ್‌ ಕಾರ್ಪೊರೇಶನ್‌ (ಐಒಸಿ), ಹಿಂದುಸ್ಥಾನ್‌ ಪೆಟ್ರೋಲಿಯಂ (ಎಚ್‌ಪಿಸಿಎಲ್‌) ಮತ್ತು ಭಾರತ್‌ ಪೆಟ್ರೊಲಿಯಂ ಕಾರ್ಪೊರೇಶನ್‌ (ಬಿಪಿಸಿಎಲ್‌) ಕಂಪೆನಿಗಳ ಮಾರಾಟ ಪ್ರತಿನಿಧಿಗಳು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು.

ಬಿಪಿಸಿಎಲ್‌ ಜಿಲ್ಲಾ ಮಾರಾಟ ಪ್ರತಿನಿಧಿ ಹರಿ ಪ್ರಸಾದ್ ಮಾತನಾಡಿ, ‘ಜಿಲ್ಲೆಯಲ್ಲಿ ಐಒಸಿ 51, ಬಿಪಿಸಿಎಲ್‌ 50, ಎಚ್‌ಪಿಸಿಎಲ್‌ 25 ಬಂಕ್‌ಗಳನ್ನು ತೆರೆಯಲು ಸಾರ್ವಜನಿಕರಿಂದ ಆನ್‌ಲೈನ್‌ ಅರ್ಜಿ ಆಹ್ವಾನಿಸಲಾಗಿದೆ. ನಗರದಲ್ಲಿ ಶೇ70 ರಷ್ಟು ಮತ್ತು ಗ್ರಾಮೀಣ ಶೇ 30ರಷ್ಟು ಬಂಕ್‌ ಸ್ಥಾಪಿಸಲು ಅವಕಾಶವಿದೆ. ಬಂಕ್ ವಿತರಣೆಯಲ್ಲಿ ಮೀಸಲಾತಿ ಕೂಡ ಇದೆ’ ಎಂದು ಹೇಳಿದರು.

‘ಈ ಹಿಂದೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ತುಂಬಾ ಸಂಕೀರ್ಣವಾಗಿತ್ತು. ಇದೀಗ ಅದನ್ನು ಮತ್ತು ಅರ್ಹತಾ ಮಾನದಂಡಗಳು ಕಡಿಮೆ, ಸರಳೀಕರಣಗೊಳಿಸಲಾಗಿದೆ. ಬಂಕ್‌ಗಳ ಹೆಚ್ಚಳದಿಂದ ಗಣನೀಯವಾಗಿ ಹೊಸ ಉದ್ಯೋಗ ಸೃಷ್ಟಿಯೂ ಆಗಲಿದೆ. ಒಂದು ಬಂಕ್‌ನಲ್ಲಿ 5ರಿಂದ 10 ಮಂದಿಗೆ ಉದ್ಯೋಗಾವಕಾಶ ಸಿಗಲಿದೆ’ ಎಂದು ತಿಳಿಸಿದರು.

‘ಅರ್ಜಿ ಸಲ್ಲಿಸಲು ಇದೇ 24 ಕೊನೆಯ ದಿನ. ಆಸಕ್ತರು www.petrolpumpdealerchayan.in ಜಾಲತಾಣದಲ್ಲಿ ಆನ್‌ಲೈನ್ ಅರ್ಜಿ ಸಲ್ಲಿಸಬಹುದು. ಬಂಕ್‌ ನಿರ್ಮಾಣಕ್ಕೆ ಭೂಮಿ ಇಲ್ಲದೇ ಇದ್ದರೂ ಅರ್ಜಿ ಸಲ್ಲಿಸಬಹುದು. ಒಂದೊಮ್ಮೆ ಇಂಥವರು ಆಯ್ಕೆ ಆದರೆ, ಆಗ ಭೂಮಿ ಹೊಂದಿಸಲು ಅವರಿಗೆ ಕಾಲಮಿತಿ ನೀಡಲಾಗುವುದು’ ಎಂದರು.

ಐಒಸಿ ಜಿಲ್ಲಾ ಮಾರಾಟ ಪ್ರತಿನಿಧಿ ಶ್ರೀನಿವಾಸ್ ರಾವ್ ನಾಗಿರೆಡ್ಡಿ ಮಾತನಾಡಿ, ‘ಅರ್ಜಿ ಸಲ್ಲಿಸುವಾಗ ಎಲ್ಲಾ ದಾಖಲೆಗಳನ್ನೂ ಸಲ್ಲಿಸುವ ಅಗತ್ಯ ಇಲ್ಲ. ಆದರೆ, ಎಸ್ಸೆಸ್ಸೆಲ್ಸಿ ಉತ್ತೀರ್ಣರಾದ, 21 ವರ್ಷ ಮೇಲ್ಟಟ್ಟವರು ಮಾತ್ರ ಸಲ್ಲಿಸಬಹುದು. ಆಯ್ಕೆಯಾದ ಅಭ್ಯರ್ಥಿಗಳಿಂದ ಮಾತ್ರವೇ ಮುಂದಿನ ದಿನಗಳಲ್ಲಿ ಅಗತ್ಯ ದಾಖಲೆಗಳನ್ನು ಪಡೆಯಲಾಗುವುದು’ ಎಂದು ಹೇಳಿದರು.

‘ಸಾರ್ವಜನಿಕ ವಲಯದ ಘಟಕಗಳು ಚಿಲ್ಲೆರೆ ವ್ಯಾಪಾರವನ್ನು ವಿಸ್ತರಿಸುತ್ತಿವೆ. ಪೆಟ್ರೋಲ್‌ ಮತ್ತು ಡೀಸೆಲ್‌ಗೆ ಬೇಡಿಕೆ ದಿನೇ ದಿನೇ ಹೆಚ್ಚುತ್ತಿದ್ದು, ಗ್ರಾಹಕರ ಅಗತ್ಯಕ್ಕೆ ತಕ್ಕಂತೆ ತೈಲ ವಹಿವಾಟು ಕೂಡ ವಿಸ್ತಾರವಾಗುತ್ತಿದೆ. ಆದ್ದರಿಂದ ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ ಮತ್ತು ಕೃಷಿ ಕ್ಷೇತ್ರ, ಕೈಗಾರಿಕಾ ಕ್ಷೇತ್ರಗಳ ಸಮೀಪದಲ್ಲಿ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ’ ಎಂದು ತಿಳಿಸಿದರು.

ಎಚ್‌ಪಿಸಿಎಲ್‌ ಜಿಲ್ಲಾ ಮಾರಾಟ ಪ್ರತಿನಿಧಿ ಎ.ಅಲ್ವಿನ್ ರೋಜಿ ಹಾಜರಿದ್ದರು. ಹೆಚ್ಚಿನ ಮಾಹಿತಿಗೆ: 9448285589 (ಐಒಸಿ), 9448282928 (ಬಿಪಿಸಿಎಲ್‌), 9003435358 (ಎಚ್‌ಪಿಸಿಎಲ್‌) ಈ ಸಂಖ್ಯೆಗಳಿಗೆ ಸಂಪರ್ಕಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.